Asianet Suvarna News Asianet Suvarna News

ಸಂಘಟನೆ ಬಲಗೊಳಿಸದಿದ್ದರೆ ಕಷ್ಟ: ಅಮಿತ್‌ ಶಾಗೆ ಬಿಎಸ್‌ವೈ ಮನವರಿಕೆ

ಪ್ರತಿಪಕ್ಷಗಳ ವೇಗಕ್ಕೆ ಪ್ರತಿಯಾಗಿ ನಮ್ಮ ಪಕ್ಷದ ಸಂಘಟನೆ ಬಲಪಡಿಸಲು ರಣತಂತ್ರ ರೂಪಿಸುವುದು ಅತ್ಯಗತ್ಯ. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಬಹುದು ಎಂಬ ಆತಂಕವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರ ಬಳಿ ವ್ಯಕ್ತಪಡಿಸಿದ್ದಾರೆ.

It will be difficult if the Party organization is not strengthened BSY convinces Amit Shah akb
Author
Bengaluru, First Published Aug 5, 2022, 11:39 AM IST

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರತಿಪಕ್ಷಗಳ ವೇಗಕ್ಕೆ ಪ್ರತಿಯಾಗಿ ನಮ್ಮ ಪಕ್ಷದ ಸಂಘಟನೆ ಬಲಪಡಿಸಲು ರಣತಂತ್ರ ರೂಪಿಸುವುದು ಅತ್ಯಗತ್ಯ. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಬಹುದು ಎಂಬ ಆತಂಕವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರ ಬಳಿ ವ್ಯಕ್ತಪಡಿಸಿದ್ದಾರೆ. ಗುರುವಾರ ನಗರಕ್ಕೆ ಆಗಮಿಸಿದ್ದ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ ಅವರು, ಪಕ್ಷ ಹಾಗೂ ಸರ್ಕಾರದ ವರ್ಚಸ್ಸು ಹೆಚ್ಚಿಸಲು ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು ಎನ್ನಲಾಗಿದೆ.

ರಾಜ್ಯದಲ್ಲಿ ಪಕ್ಷದ ಸಂಘಟನೆ ನಿರೀಕ್ಷಿತ ಮಟ್ಟದ ವೇಗದಲ್ಲಿ ಸಾಗುತ್ತಿಲ್ಲ. ಸರ್ಕಾರದ ವರ್ಚಸ್ಸು ಕೂಡ ಹೆಚ್ಚಿಸಬೇಕಾಗಿದೆ. ಪ್ರತಿಪಕ್ಷಗಳ ಪೈಕಿ ಕಾಂಗ್ರೆಸ್‌ ತುಂಬ ವೇಗದಿಂದ ಪಕ್ಷ ಸಂಘಟನೆ ಬಗ್ಗೆ ಗಮನ ನೀಡಿದೆ. ಜೆಡಿಎಸ್‌ ಕೂಡ ಅಷ್ಟೇ. ಆ ಎರಡೂ ಪಕ್ಷಗಳು ಸತತವಾಗಿ ಕಾರ್ಯಕ್ರಮ ಮತ್ತು ಹೋರಾಟಗಳ ಮೂಲಕ ಜನರನ್ನು ತಲುಪಲು ಪ್ರಯತ್ನ ಮಾಡುತ್ತಿವೆ. ಅವುಗಳ ವೇಗಕ್ಕೆ ಬ್ರೇಕ್‌ ಹಾಕಲೇಬೇಕು. ಅದಕ್ಕೆ ಪೂರಕವಾಗಿ ನಮ್ಮ ಪಕ್ಷದ ಸಂಘಟನೆ ಬಲಪಡಿಸುವತ್ತ ಆದ್ಯ ಗಮನ ನೀಡಬೇಕು ಎಂದು ಯಡಿಯೂರಪ್ಪ ವಿವರಿಸಿದರು ಎಂದು ತಿಳಿದು ಬಂದಿದೆ.

ಯಡಿಯೂರಪ್ಪ ಅವರ ಮಾತುಗಳನ್ನು ಶಾಂತವಾಗಿ ಆಲಿಸಿದ ಅಮಿತ್‌ ಶಾ ಅವರು ಈ ಬಗ್ಗೆ ಇತರ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ನೀಡಿದರು ಎಂದು ಮೂಲಗಳು ತಿಳಿಸಿವೆ.

ಮಂಗಳೂರು ಹತ್ಯೆ ಕೇಸ್‌ ಬಗ್ಗೆಅಮಿತ್‌ ಶಾಗೆ ಮಾಹಿತಿ

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಹತ್ಯೆ ಪ್ರಕರಣ ಸೇರಿದಂತೆ ಹಲವು ಘಟನೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ವಿವರವಾದ ಮಾಹಿತಿ ನೀಡಿದ್ದಾರೆ.
ಬೆಂಗಳೂರಿಗೆ ಆಗಮಿಸಿರುವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ ಆರಗ ಜ್ಞಾನೇಂದ್ರ ಅವರು, ಶಾ ಅವರು ಮಂಗಳೂರು ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡರು. ಅನೇಕ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಎಲ್ಲ ವಿವರವನ್ನು ಮಾಧ್ಯಮಗಳಿಗೆ ತಿಳಿಸಲು ಆಗುವುದಿಲ್ಲ. ಎನ್‌ಐಎ ತನಿಖೆ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.

ಸರ್ಕಾರದ ಕಾರ್ಯ ವೈಖರಿ ಬಗ್ಗೆ ಅಮಿತ್‌ ಶಾ ಅವರಿಗೆ ತೃಪ್ತಿ ಇದೆ. ರಾಜ್ಯದ ಆಡಳಿತ ಕುರಿತು ಅವರಿಗೆ ಎಲ್ಲ ಮಾಹಿತಿ ಹೋಗುತ್ತಿರುತ್ತದೆ. ಅವರು ಇಲ್ಲಿಗೆ ಬಂದು ಮಾಹಿತಿ ಪಡೆದುಕೊಳ್ಳುವ ಅಗತ್ಯವಿಲ್ಲ. ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ. ಕಾಂಗ್ರೆಸ್‌ ಇಂತಹ ಕಪೋಲ ಕಲ್ಪಿತ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
 

Follow Us:
Download App:
  • android
  • ios