ಕಾಂಗ್ರೆಸ್‌ನಲ್ಲಿ ಅಪಸ್ವರ ಇರುವುದು ಸತ್ಯ: ಪರಮೇಶ್ವರ್
ತುಮಕೂರು ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಯಾವ ಗೊಂದಲವಿಲ್ಲ. ಪಕ್ಷ ಸಿದ್ದಾಂತ ಒಪ್ಪಿ ಬಂದವರನ್ನು ಅಭೂತ ಪೂರ್ವ ವೆಲ್ಕಮ್ ಹೇಳುತ್ತೇವೆ: ಪರಂ
ಗುಬ್ಬಿ(ಸೆ.18): ಪಕ್ಷದಲ್ಲಿ ಎಲ್ಲವೂ ಸರಿ ಎನ್ನಲಾಗದು. ಗುಬ್ಬಿ ಕಾಂಗ್ರೆಸ್‌ನಲ್ಲಿ ಅಪಸ್ವರ ಇರುವುದು ಸತ್ಯ. ಶೀಘ್ರದಲ್ಲೇ ಸರಿಪಡಿಸಿ ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಆಯ್ಕೆ ಮಾಡುವುದು ಶತಸಿದ್ದ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ನಿಟ್ಟೂರುಪುರ ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಭಾರತ ಐಕ್ಯತಾ ಯಾತ್ರಾ ಪೂರ್ವಭಾವಿ ಸಭೆ ನಂತರದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಯಾವ ಗೊಂದಲವಿಲ್ಲ. ಪಕ್ಷ ಸಿದ್ದಾಂತ ಒಪ್ಪಿ ಬಂದವರನ್ನು ಅಭೂತ ಪೂರ್ವ ವೆಲ್ಕಮ್ ಹೇಳುತ್ತೇವೆ. ಪಕ್ಷ ಬಿಡುವವರಿಗೆ ಗುಡ್ ಬೈ ಹಾಗೂ ಗುಡ್ ಲಕ್ ಹೇಳುತ್ತೇವೆ ಎಂದು ಮಾರ್ಮಿಕವಾಗಿ ಎಸ್ಪಿಎಂ ಹಾಗೂ ಎಂಡಿಎಲ್ ಅವರ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ಹೇಳಿದರು.
ರಾಜ್ಯ ಕಾಂಗ್ರೆಸ್ ನಾಯಕರ ಮಧ್ಯೆ ಭಿನ್ನಾಭಿಪ್ರಾಯ: ಸಿದ್ದರಾಮಯ್ಯ ಪ್ರತಿಕ್ರಿಯೆ
ಇಡೀ ವಿಶ್ವವೇ ಗಮನಿಸುತ್ತಿರುವ ರಾಹುಲ್ ಗಾಂಧಿ ಅವರ ಐಕ್ಯತಾ ಪಾದಯಾತ್ರೆ 3570 ಕಿಮೀ ನಡೆಯಲಿದೆ. ಜಿಲ್ಲೆಯಲ್ಲಿ ನಾಲ್ಕು ದಿನದ ಈ ಯಾತ್ರೆ ಮೂರು ರಾತ್ರಿಗಳ ವಾಸ್ತವ್ಯಕ್ಕೆ ಕಾರಣವಾಗಲಿದೆ. ಕಲ್ಲೂರು ಕ್ರಾಸ್ ಮೂಲಕ ತಾಲೂಕಿಗೆ ಅಕ್ಟೋಬರ್ 9 ರಂದು ಆಗಮಿಸಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಯಾತ್ರೆ ಯಶಸ್ವಿಗೊಳಿಸಿ ರಾಹುಲ್ ಗಾಂಧಿ ಅವರ ಜೊತೆ ಹೆಜ್ಜೆ ಹಾಕುವಂತೆ ಕರೆ ನೀಡಿದರು.
ಯಾತ್ರೆ ಪೂರ್ವ ತಯಾರಿ ವೀಕ್ಷಣೆ ವಿಚಾರದಲ್ಲಿ ಸಲ್ಲದ ವದಂತಿ ಸೃಷ್ಟಿಆಗುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಆಗಮನ ವೇಳೆ ಸಿದ್ದರಾಮಯ್ಯ ಅವರು ಸದನದಲ್ಲಿ ಇರಬೇಕಿತ್ತು. ನಾನು ಕೇರಳ ಉಸ್ತುವಾರಿ ವಹಿಸಿದ್ದೆ. ಕೆ.ಎನ್.ರಾಜಣ್ಣ ಅವರು ಚಿತ್ರದುರ್ಗ ಜವಾಬ್ದಾರಿ ವಹಿಸಿದ್ದರು. ಹೀಗೆ ಜವಾಬ್ದಾರಿ ಇದ್ದ ಕಾರಣ ಬೇರೆ ಸಮಯದಲ್ಲಿ ಬರುತ್ತಿದ್ದಾರೆ ಅಷ್ಟೇ ಎಂದು ಸಮರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಷಡಕ್ಷರಿ, ಡಾ.ರಫೀಕ್ ಅಹಮದ್, ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಕೆಪಿಸಿಸಿ ಕಾರ್ಯದರ್ಶಿ ಮುರಳೀಧರ್ ಹಾಲಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ, ಜಿಲ್ಲಾ ಕಾರ್ಯದರ್ಶಿ ಶಂಕರಾನಂದ, ಭರತಗೌಡ, ಗುಬ್ಬಿ ಬ್ಲಾಕ್ ಅಧ್ಯಕ್ಷ ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆಜಯಣ್ಣ, ಕೆ.ಆರ್.ತಾತಯ್ಯ, ಸಲೀಂಪಾಷಾ, ಶಿವಾನಂದ್, ಮಹಿಳಾ ಘಟಕದ ಸೌಭಾಗ್ಯಮ್ಮ, ರೂಪಾ, ವಸಂತಮ್ಮ ಇತರರು ಇದ್ದರು.