Asianet Suvarna News Asianet Suvarna News

ರಾಜ್ಯ ಕಾಂಗ್ರೆಸ್‌ ನಾಯಕರ ಮಧ್ಯೆ ಭಿನ್ನಾಭಿಪ್ರಾಯ: ಸಿದ್ದರಾಮಯ್ಯ ಪ್ರತಿಕ್ರಿಯೆ

ರಾಜ್ಯ ನಾಯಕರೆಲ್ಲರೂ ಒಗ್ಗಟ್ಟಾಗಿ ಪಾದಯಾತ್ರೆ ಯಶ್ವಸಿ ಗೊಳಿಸಲಾಗುವುದು, ಬಿಜೆಪಿಯವರು ಜನ ಮನಸ್ಸನ್ನು ಒಡೆಯುವ ಕೆಲಸ ಮಾಡುತ್ತಿದೆ: ಸಿದ್ದರಾಮಯ್ಯ 

Siddaramaiah React on Disagreement among Karnataka Congress Leaders grg
Author
First Published Sep 18, 2022, 1:28 PM IST

ನಂಜನಗೂಡು(ಸೆ.18): ಭಾರತ್‌ ಜೋಡೋ ಪಾದಯಾತ್ರೆ ವಿಚಾರವಾಗಿ ರಾಜ್ಯ ಕಾಂಗ್ರೆಸ್‌ ನಾಯಕರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳಿಲ್ಲ, ಕೆಪಿಸಿಸಿ ಅಧ್ಯಕ್ಷರೊಂದಿಗೆ ರಾಜ್ಯ ನಾಯಕರೆಲ್ಲರೂ ಒಗ್ಗಟ್ಟಾಗಿ ಪಾದಯಾತ್ರೆ ಯಶಸ್ವಿ ಗೊಳಿಸಲಾಗುವುದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಅ. 2 ರಂದು ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್‌ ಗಾಂಧಿ ಪಾದಯಾತ್ರೆ ಮೂಲಕ ತಾಲೂಕಿನ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ಶನಿವಾರ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಭಾರತ್‌ ಜೋಡೋ ಪಾದಯಾತ್ರೆ ಸಂಬಂಧ ಚರ್ಚಿಸಲು ಮೈಸೂರಿನ ಕಾಂಗ್ರೆಸ್‌ ಕಚೇರಿ ಆವರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಧ್ರುವನಾರಾಯಣ ಜೊತೆಗೂಡಿ ನಾನು ಸಭೆಯಲ್ಲಿ ಭಾಗಿಯಾಗಲಿದ್ದೇನೆ ಎಂದರು.

ಸಿದ್ದು, ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆ ಎಂಬುದು ಸುಳ್ಳು: ಪರಮೇಶ್ವರ್‌

ಭಾರತ್‌ ಜೋಡೋ ಪಾದಯಾತ್ರೆ ಮೂಲಕ ರಾಹುಲ್‌ ಗಾಂಧಿ ಸೆ. 30 ರಂದು ಗುಂಡ್ಲುಪೇಟೆ ಮೂಲಕ ರಾಜ್ಯವನ್ನು ಪ್ರವೇಶಿಸುವರು. ಅ. 2ರಂದು ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ ಗಾಂಧಿ ಜಯಂತಿ ಆಚರಿಸಲಿದ್ದಾರೆ. ಅಂದು ಬೆಳಗ್ಗೆ 7.30 ರಿಂದ ಮಧ್ಯಾಹ್ನ 2.30 ರವರೆಗೆ ಕಾರ್ಯಕ್ರಮದಲ್ಲಿ ಭಜನೆ, ದೇಶಭಕ್ತಿ ಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಲ್ಲಿ 400 ರಿಂದ 500 ಜನ ಗಣ್ಯರಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ ಎಂದರು.

ಬಿಜೆಪಿಯವರು ಜನ ಮನಸ್ಸನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ:

ರಾಜ್ಯದಲ್ಲಿ ಬಿಜೆಪಿಯವರು ಕೋಮು ದ್ವೇಷ ಬೀಜ ಬಿತ್ತುವ ಮೂಲಕ ಜನರ ಮಧ್ಯೆ ಗೊಂದಲ ಮೂಡಿಸಿ ಜನರ ಮನಸ್ಸನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಡವರು, ದಲಿತರು, ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಬೆಲೆ ಏರಿಕೆ, ಭ್ರಷ್ಟಚಾರ ತಾಂಡವವಾಡುತ್ತಿದೆ, ನಿರುದ್ಯೊಗ ಸಮಸ್ಯೆ ಎಲ್ಲೆ ಮೀರುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ದೇಶದ ಐಕ್ಯತೆಯನ್ನು ಕಾಪಾಡಲು ಕಾಂಗ್ರೆಸ್‌ನ ಭಾರತ್‌ ಜೋಡೋ ಪಾದಯಾತ್ರೆಯನ್ನು ನಡೆಸುತ್ತಿದೆ, ಎಲ್ಲರೂ ಪಕ್ಷಭೇದ ಮರೆತು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ , ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮೈಸೂರು ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್‌, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಚ್‌.ಸಿ. ಬಸವರಾಜು, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಎಂ. ಶಂಕರ್‌, ಕುರಹಟ್ಟಿಮಹೇಶ್‌, ಹಾಡ್ಯ ರಂಗಸ್ವಾಮಿ, ಜಿಪಂ ಮಾಜಿ ಸದಸ್ಯರಾದ ಲತಾ ಸಿದ್ದಶೆಟ್ಟಿ, ಕೆ.ಬಿ. ಸ್ವಾಮಿ, ವಿಶ್ವಕರ್ಮ ನಿಗಮ ಮಾಜಿ ಅಧ್ಯಕ್ಷ ನಂದಕುಮಾರ್‌, ಕಾಂಗ್ರೆಸ್‌ ಹಿಂದುಳಿದ ವರ್ಗದ ಅಧ್ಯಕ್ಷ ಮಾರುತಿ, ಮುಖಂಡರಾದ ಇಂದನ್‌ಬಾಬು, ನಾಗೇಶ್‌ರಾಜ, ಮೂಗಶೆಟ್ಟಿ ಇದ್ದರು.
 

Follow Us:
Download App:
  • android
  • ios