ಕಳೆದ ಚುನಾವಣೆಯಲ್ಲಿ ದೇವೇಗೌಡರು ಅಭ್ಯರ್ಥಿಯಾದ್ದರಿಂದ ನನಗೆ ನೋವಾಗಿದ್ದು ಸತ್ಯ: ಮುದ್ದಹನುಮೇಗೌಡ
ರೀ.ನಾನು ನ್ಯಾಯಾಧೀಶನಾಗಿ ಕೆಲಸ ಮಾಡಿರುವವನು. ಪ್ರಾಮಾಣಿಕವಾಗಿದ್ದೇನೆ. ನಾನು ಥರ್ಡ್ ಕ್ಲಾಸ್ ರಾಜಕಾರಣಿ ಅಲ್ಲ. ನನ್ನನ್ನು ಪರೀಕ್ಷೆ ಮಾಡಬೇಡಿ. ನೋಯಿಸಬೇಡಿ. ದೇವರೊಬ್ಬನಿದ್ದಾನೆ. ವಿನಾಕಾರಣ ನನ್ನನ್ನು ಅವಮಾನಿಸಿದರೆ ಆ ದೇವರು ಸುಮ್ಮನಿರಲ್ಲ. ನಿಮಗೆ ಶಾಪ ಕೊಟ್ಟೇ ಕೊಡುತ್ತಾನೆ.
ತುರುವೇಕೆರೆ (ಏ.10): ರೀ.ನಾನು ನ್ಯಾಯಾಧೀಶನಾಗಿ ಕೆಲಸ ಮಾಡಿರುವವನು. ಪ್ರಾಮಾಣಿಕವಾಗಿದ್ದೇನೆ. ನಾನು ಥರ್ಡ್ ಕ್ಲಾಸ್ ರಾಜಕಾರಣಿ ಅಲ್ಲ. ನನ್ನನ್ನು ಪರೀಕ್ಷೆ ಮಾಡಬೇಡಿ. ನೋಯಿಸಬೇಡಿ. ದೇವರೊಬ್ಬನಿದ್ದಾನೆ. ವಿನಾಕಾರಣ ನನ್ನನ್ನು ಅವಮಾನಿಸಿದರೆ ಆ ದೇವರು ಸುಮ್ಮನಿರಲ್ಲ. ನಿಮಗೆ ಶಾಪ ಕೊಟ್ಟೇ ಕೊಡುತ್ತಾನೆ. ಹೀಗೆಂದು ಗುಡುಗಿದವರು ಕಾಂಗ್ರೆಸ್‌ನ ಲೋಕಸಭಾ ಅಭ್ಯರ್ಥಿಯಾಗಿರುವ ಎಸ್.ಪಿ.ಮುದ್ದಹನುಮೇಗೌಡರು. ತಾಲೂಕಿನ ತಾವರೇಕೆರೆಯ ದಿ.ದಾನೀಗೌಡರ ಮನೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮುದ್ದಹನುಮೇಗೌಡರು ಬಹಳ ಭಾವುಕವಾಗಿ ಮಾತನಾಡಿದರು.
ಅಧಿಕಾರ ಎಂಬುದು ಶಾಶ್ವತವಲ್ಲ. ನಾನು ಯಾರಿಗೂ ಮೋಸ ಮಾಡಿಲ್ಲ. ವಿನಾಕಾರಣ ಒಕ್ಕಲಿಗ ಸಮುದಾಯದ ದಿಕ್ಕು ತಪ್ಪಿಸಲು ನನ್ನನ್ನು ವಿಲನ್‌ನಂತೆ ಮಾಡಲಾಗುತ್ತಿದೆ. ನಾನು ಅಭ್ಯರ್ಥಿ ಆಗಬೇಕಿದ್ದ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು ನನಗೆ ನೋವುಂಟು ಮಾಡಿದ್ದು ಸತ್ಯ. ಆದರೆ ಹೈಕಮಾಂಡ್ ನ ಆದೇಶಕ್ಕೆ ತಲೆಬಾಗಿ ನಾನು ಹತ್ತಾರು ಸಭೆಗಳಲ್ಲಿ ದೇವೇಗೌಡರ ಪರ ಮತಯಾಚನೆ ಮಾಡಿದ್ದೇನೆ. ಪ್ರಾಮಾಣಿಕವಾಗಿ ಮತ ಕೇಳಿದ್ದೇನೆ. ಆದರೂ ಸಹ ನನ್ನನ್ನು ಅನುಮಾನದಿಂದ ನೋಡುತ್ತಿರುವುದು ನೋವಿನ ಸಂಗತಿ ಎಂದು ಮುದ್ದಹನುಮೇಗೌಡ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದರೆ ತುಮಕೂರನ್ನು ಮಾದರಿ ಜಿಲ್ಲೆಯಾಗಿಸುವೆ: ವಿ.ಸೋಮಣ್ಣ
ಪ್ರಮಾಣ ಮಾಡಿ: ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ವಿನಾಕಾರಣ ನನ್ನನ್ನು ಟೀಕೆ ಮಾಡುತ್ತಿದ್ದಾರೆ. ನಾನು ದೇವೇಗೌಡರ ಪರ ಪ್ರಾಮಾಣಿಕವಾಗಿ ಕೆಲಸ ಮಾಡಿ ದ್ದೇನೆ ಎಂದು ಧರ್ಮಸ್ಥಳದ ಮಂಜುನಾಥೇಶ್ವರನ ಸನ್ನಿಧಿಯಲ್ಲಿ ಪ್ರಮಾಣ ಮಾಡುತ್ತೇನೆ. ಕೃಷ್ಣಪ್ಪನವರೂ ಸಹ ಪ್ರಮಾಣ ಮಾಡಲಿ ನೋಡೋಣ. ನಾನು ದ್ರೋಹ ಮಾಡಿದ್ದೇನೆಂಬ ಒಂದೇ ಒಂದು ಸಾಕ್ಷಿ ಕೊಟ್ಟರೂ ಸಹ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆಂದು ಸವಾಲೆಸೆದರು. ಕೃಷ್ಣಪ್ಪನವರೇ ನೀವೇನು ಎಂದು ನನಗೆ ಚನ್ನಾಗಿ ಗೊತ್ತಿದೆ. ಈ ಹಿಂದೆ ನಡೆದ ಚುನಾವಣೆಯಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿಗಳ ಬಗ್ಗೆ ಏನೆಲ್ಲಾ ಮಾಡಿದಿರಿ ಎಂದು ಎಲ್ಲರಿಗೂ ತಿಳಿದಿದೆ.
ಆದರೆ ಈಗ ದೇವೇಗೌಡರ ಸೋಲಿಗೆ ನಾನು ಕಾರಣ ಎಂದು ಅಪಪ್ರಚಾರ ಮಾಡುತ್ತಿರುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು. ನಾನು ಸಂಸದನಾಗಿದ್ದ ವೇಳೆ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದ್ದ ಎಲ್ಲಾ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದೆ. ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದೆ. ಅದು ಕೃಷ್ಣಪ್ಪನವರಿಗೆ ಆಗುತ್ತಿರಲಿಲ್ಲ. ಆದರೆ ಈಗಿನ ಸಂಸದರು ಇದುವರೆಗೂ ಈ ಕ್ಷೇತ್ರಕ್ಕೆ ಕಾಲಿಡಲೇ ಇಲ್ಲ. ಹಾಗಾಗಿ ಅವರು ಒಳ್ಳೆಯವರು. ಇದು ಅವರಿಗೆ ಖುಷಿ ಕೊಡುತ್ತದೆ ಎಂದು ಮುದ್ದಹನುಮೇಗೌಡ ವ್ಯಂಗ್ಯವಾಡಿದರು.
ನಾನು ಕಾಂಗ್ರೆಸ್ ನಿಂದ ಎಲ್ಲರ ಆಶಯದಂತೆ ಕಣಕ್ಕೆ ಇಳಿದಿದ್ದೇನೆ. ಕಳೆದ ಬಾರಿ ಸಂಸದನಾಗಿದ್ದ ವೇಳೆ ಜನರ ನಿರೀಕ್ಷೆಗೂ ಮೀರಿ ಪ್ರಾಮಣಿಕವಾಗಿ ಸೇವೆ ಮಾಡಿದ್ದೇನೆ ಎಂಬ ಆತ್ಮತೃಪ್ತಿ ಇದೆ. ಸಾಮಾನ್ಯರ ದೂರವಾಣಿಗೂ ಸ್ಪಂದಿಸಿದ್ದೇನೆ. ನನ್ನ ಇತಿಮಿತಿಯಲ್ಲಿ ಸೇವೆ ಮಾಡಿದ್ದೇನೆ. ನಾನು ಭ್ರಷ್ಟನಲ್ಲ. ಮೋಸಗಾ ರನಲ್ಲ. ಹಾಗಾಗಿ ನನಗೆ ಮತ ಕೊಡಲ್ಲ ಎನ್ನುವ ಮಾತೇ ಇಲ್ಲ. ಎಲ್ಲರೂ ನನ್ನನ್ನು ಬೆಂಬಲಿಸುವ ವಿಶ್ವಾಸ ತಮಗಿದೆ ಎಂದು ಮುದ್ದಹನುಮೇಗೌಡ ಹೇಳಿದರು. ತುರುವೇಕೆರೆಯ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ಏನು. ಅವರು ಹೇಗೆ ಚುನಾವಣೆ ಮಾಡ್ತಾರೆ. ಯಾಕಾಗಿ ಮಾಡ್ತಾರೆ. ಯಾವಾಗ ಮಾಡ್ತಾರೆ. ಅವರು ಯಾವಾಗ ಗಡುಸಿನ ಮಾತು ಆಡ್ತಾರೆ. ಅದು ಏಕೆ ಎಂಬುದೆಲ್ಲಾ ನನಗೂ ಗೊತ್ತು. ಕ್ಷೇತ್ರದ ಜನರಿಗೂ ಗೊತ್ತಿದೆ ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ಶಾಸಕ ಎಂ.ಟಿ.ಕೃಷ್ಣಪ್ಪನವರ ಬಗ್ಗೆ ವ್ಯಂಗ್ಯವಾಡಿದರು.
ಅವರೊಟ್ಟಿಗೆ ನಾನು ಸಾಕಷ್ಟು ಬಾರಿ ಚುನಾವಣೆ ಮಾಡಿದ್ದೇನೆ. ಈಗ ವಿ.ಸೋಮಣ್ಣನವರ ಪರ ಏಕೆ ವಕಾಲತ್ತು ವಹಿಸಿದ್ದಾರೆ. ದೇವೇಗೌಡರ ಹೆಸರನ್ನು ಮುಂದಲೆಗೆ ತಂದು ಸೋಮಣ್ಣನವರ ಕಡೆಯಿಂದ ಲಾಭ ಮಾಡಿಕೊಳ್ತಾರೆ ಎಂದು ಹೇಳಿದರು. ಇನ್ನು ಮಾಜಿ ಶಾಸಕ ಮಸಾಲಾ ಜಯರಾಮ್ ಬಟ್ಟೆ ಹರಿದುಕೊಳ್ತಾನೆ. ಎದುರು ಬದುರು ಕಿತ್ತಾಡ್ತಿದ್ದವರು ಈಗ ಒಂದಾಗಿದ್ದಾರೆ. ಅದೇನು ಮಾಡ್ತಾರೋ ದೇವರಿಗೇ ಗೊತ್ತು. ಕೃಷ್ಣಪ್ಪ, ಮಸಾಲಾ ಜಯರಾಮ್ ಒಕ್ಕಲಿಗರನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ?. ಮುದ್ದಹನುಮೇಗೌಡರ ಸಾಧನೆ ನೋಡಿ ಜನ ಓಟಾಕ್ತಾರೆ. ನಾವೇ ಮೈತ್ರಿಯವರಿಗಿಂತ ಹೆಚ್ಚು ಮತ ಗಳಿಸ್ತೀವಿ ಎಂದು ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಶ್ರಮಿಕರು, ರೈತರಿಗೆ ಅನ್ಯಾಯ: ಸಚಿವ ಡಾ.ಜಿ.ಪರಮೇಶ್ವರ್
ಈ ಸಂದರ್ಭದಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್, ತಿಪಟೂರು ಶಾಸಕ ಷಡಕ್ಷರಿ, ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ, ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜ್, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಎನ್.ಆರ್.ಜಯರಾಮ್, ಮಾಜಿ ಬೆಸ್ಕಾಂ ನಿರ್ದೇಶಕ ಬಿ.ಎಸ್.ವಸಂತಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್, ಕೋಳಾಲ ನಾಗರಾಜ್, ವಕೀಲ ಪ್ರವೀಣ್ ಗೌಡ, ನಂಜುಂಡಪ್ಪ, ಕಾರ್ಯದರ್ಶಿ ದಬ್ಬೇಘಟ್ಟ ವೇಣುಗೋಪಾಲ್, ಸೇವಾದಳದ ಅಧ್ಯಕ್ಷ ಕೊಂಡಜ್ಜಿ ಶಿವಕುಮಾರ್, ಮುಖಂಡರಾದ ಗವಿರಂಗಪ್ಪ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.