Bengaluru: ಆಟೋ ಮೇಲೆ ಪಕ್ಷಗಳ ಸ್ಟಿಕ್ಕರ್‌, ಬ್ಯಾನರ್‌ ಇದ್ದರೆ ಕೇಸ್‌: ಈವರೆಗೂ 450ಕ್ಕೂ ಹೆಚ್ಚು ಪ್ರಕರಣ ದಾಖಲು

ಚುನಾವಣಾ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ರಾಜಕೀಯ ನಾಯಕರ ಭಾವಚಿತ್ರ ಹಾಗೂ ಪಕ್ಷಗಳ ಚಿಹ್ನೆ ಹೊಂದಿರುವ ಆಟೋಗಳ ಮೇಲೆ ದಾಳಿ ನಡೆಸಿ ಬ್ಯಾನರ್‌, ಸ್ಟಿಕ್ಕರ್‌ಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.

Case if there are stickers and banners of parties on the autos at bengaluru gvd

ಬೆಂಗಳೂರು (ಏ.05): ಚುನಾವಣಾ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ರಾಜಕೀಯ ನಾಯಕರ ಭಾವಚಿತ್ರ ಹಾಗೂ ಪಕ್ಷಗಳ ಚಿಹ್ನೆ ಹೊಂದಿರುವ ಆಟೋಗಳ ಮೇಲೆ ದಾಳಿ ನಡೆಸಿ ಬ್ಯಾನರ್‌, ಸ್ಟಿಕ್ಕರ್‌ಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಈವರೆಗೆ ನಗರದಲ್ಲಿರುವ 11 ಆರ್‌ಟಿಒ ವಲಯಗಳಲ್ಲಿ 450ಕ್ಕೂ ಹೆಚ್ಚು ಪ್ರಕರಣಗಳನ್ನು ಸಾರಿಗೆ ಅಧಿಕಾರಿಗಳು ದಾಖಲಿಸಿದ್ದಾರೆ. ಮಂಗಳವಾರ ಒಂದೇ ದಿನ 159 ಪ್ರಕರಣಗಳು ದಾಖಲಾಗಿದ್ದು, ಆಟೋಗಳಿಗೆ ಅಂಟಿಸಿದ್ದ ಸ್ಟಿಕ್ಕರ್‌ಗಳನ್ನು ತೆರವು ಮಾಡಲಾಗಿದೆ. ಈ ಪೈಕಿ ಮಾಗಡಿ ರಸ್ತೆ 14, ಕಾಮಾಕ್ಷಿಪಾಳ್ಯ 14, ರಾಜಾಜಿನಗರ 8, ಚಿಕ್ಕಪೇಟೆ, ವಿಜಯನಗರ, ಉಪ್ಪಾರಪೇಟೆ 10, ಮೆಜೆಸ್ಟಿಕ್‌ನಲ್ಲಿ 13 ಪ್ರಕರಣಗಳು ದಾಖಲಾಗಿವೆ.

ಮಂಗಳವಾರ ಮೆಜೆಸ್ಟಿಕ್‌ ಸಮೀಪದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಸಮೀಪ ಸಾರಿಗೆ ಇಲಾಖೆ ಜಂಟಿ ಆಯುಕ್ತ ಕೆ.ಟಿ.ಹಾಲಸ್ವಾಮಿ, ರಾಜಾಜಿನಗರದ ಆರ್‌ಟಿಓ ಎಂ.ಪ್ರಭುಸ್ವಾಮಿ ನೇತೃತ್ವದಲ್ಲಿ ಆಟೋಗಳ ಪರಿಶೀಲನೆ ಕಾರ್ಯಾಚರಣೆ ನಡೆಯಿತು. ರಾಜಕೀಯ ಪಕ್ಷಗಳ ಸ್ಟಿಕ್ಕರ್‌, ರಾಜಕೀಯ ನಾಯಕರ ಭಾವಚಿತ್ರ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಸ್ಟಿಕ್ಕರ್‌ಗಳನ್ನು ಕೂಡ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳು ತೆರವುಗೊಳಿಸಿದರು. 

ಕಾಂಗ್ರೆಸ್ಸಿಗೆ 60 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು: ಆಕಾಂಕ್ಷಿ ಸಂಖ್ಯೆ 2ಕ್ಕೆ ಇಳಿಸಲು ರಾಹುಲ್‌ ತಾಕೀತು

ಯಶವಂತಪುರ, ರಾಜಾಜಿನಗರ, ಯಲಹಂಕ, ಜಯನಗರ, ಕೋರಮಂಗಲ, ಕಸ್ತೂರಿ ನಗರ, ಜ್ಞಾನಭಾರತಿ, ದೇವನಹಳ್ಳಿ, ಎಲೆಕ್ಟ್ರಾನಿಕ್‌ಸಿಟಿ, ಶಾಂತಿನಗರ, ಕೆ.ಆರ್‌.ಪುರಂ, ಚಂದಾಪುರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಲಯ ವ್ಯಾಪ್ತಿಗಳಲ್ಲಿ ಸಂಚರಿಸುವ ಪ್ರತಿ ಆಟೋ, ಕಾರು ಸೇರಿದಂತೆ ಇತರ ವಾಹನಗಳನ್ನು ಸಹ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಸಾರಿಗೆ ಇಲಾಖೆ ಜಂಟಿ ಆಯುಕ್ತ ಹಾಲಸ್ವಾಮಿ ಮಾತನಾಡಿ, ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಆಟೋಗಳ ಮೇಲೆ ರಾಜಕೀಯ ಪ್ರಚಾರ ಮಾಡಬಾರದು. 

ಇದುವರೆಗೂ 450ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ದಂಡ ವಸೂಲಿ ಸಹ ಮಾಡಿದ್ದೇವೆ. ಮೊದಲ ಬಾರಿಗೆ ನಿಯಮಗಳ ಉಲ್ಲಂಘನೆಗೆ ದಂಡ ವಿಧಿಸುತ್ತಿದ್ದೇವೆ. ಇದು ಮತ್ತೆ ಪುನರಾವರ್ತನೆ ಆದರೆ, ಪರವಾನಗಿ ರದ್ದು ಮಾಡುತ್ತೇವೆ. ನೀತಿ ಸಂಹಿತೆ ಜಾರಿಗೆ ಮುಂಚಿನಿಂದಲೂ ಸಹ ಕಾರ್ಯಾಚರಣೆ ಮಾಡುತ್ತಿದ್ದೇವೆ. ಸದ್ಯ ಇದನ್ನು ತೀವ್ರಗೊಳಿಸುತ್ತೇವೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಪ್ರತಿ ಕ್ಷೇತ್ರಕ್ಕೂ ಕಡ್ಡಾಯವಾಗಿ 3 ಆಕಾಂಕ್ಷಿಗಳ ಹೆಸರು ಕಳಿಸಿ: ಬಿಜೆಪಿ ಹೈಕಮಾಂಡ್‌

ನಮಗೆ ಈ ಬಗ್ಗೆ ಯಾವುದೇ ರೀತಿಯ ಮಾಹಿತಿ ಇರಲಿಲ್ಲ. ರಾಜಕೀಯ ನಾಯಕರ ಭಾವಚಿತ್ರಗಳನ್ನು ಆಟೋ ಮೇಲೆ ಅಂಟಿಸಬಾರದು ಎಂದು ನನಗೆ ತಿಳಿದಿರಲಿಲ್ಲ. ನಾವೇ 30 ರು. ದುಡ್ಡು ಕೊಟ್ಟು ಅವರ ಭಾವಚಿತ್ರ ಸಹಿತ ಟಾರ್ಪಲ್‌ಗಳನ್ನು ಹಾಕಿಸಿಕೊಂಡಿದ್ದೇವೆ. ಮತ್ತೆ ಈ ರೀತಿ ಮಾಡದಂತೆ ಆರ್‌ಟಿಒ ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ.
- ಸಯ್ಯದ್‌ ಅಮಿರುದ್ದೀನ್‌, ಆಟೋ ಚಾಲಕ

Latest Videos
Follow Us:
Download App:
  • android
  • ios