ಸಿಎಂ ಬದಲಾವಣೆ ವಿಷಯವೇ ಅಪ್ರಸ್ತುತ: ಶಾಸಕ ಯಶವಂತರಾಯಗೌಡ
ಇಂಡಿ ಪ್ರತ್ಯೇಕ ಜಿಲ್ಲೆಯಾಗಿಸುವುದು ನನ್ನ ಸಂಕಲ್ಪ, ನನ್ನ ಬದ್ಧತೆ, ಇಂಡಿ ಜಿಲ್ಲಾ ಕೇಂದ್ರವನ್ನಾಗಿಸುವ ಸಂಕಲ್ಪದೊಂದಿಗೆ ಕಾರ್ಯೋನ್ಮುಖವಾಗಿರುವೆ. ಇಂಡಿ ಜಿಲ್ಲಾ ಕೇಂದ್ರ ರೂಪಿಸದೇ ಹೋದರೆ ಚುನಾವಣೆ ನಿಲ್ಲುವುದಿಲ್ಲ ಎಂದು ಘೋಷಣೆ ಮಾಡಿರುವೆ. ಅದಕ್ಕಾಗಿ ಸಾಕಷ್ಟು ಪ್ರಕ್ರಿಯೆ ಇದೆ. ಇತರೆ ತಾಲೂಕು ಜನರು ಸಹ ಒಪ್ಪಬೇಕಿದೆ ಎಂದ ಶಾಸಕ ಯಶವಂತರಾಯಗೌಡ ಪಾಟೀಲ
ವಿಜಯಪುರ(ನ.08): ನಮಗೆ ಅತ್ಯಂತ ಅನುಭವಿ ಸಿಎಂ ಸಿಕ್ಕಿದ್ದಾರೆ. ಈಗ ಸಿಎಂ ಬದಲಾವಣೆ ಕುರಿತು ಮಾತನಾಡುವುದು ಸರಿಯಲ್ಲ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಷಯ ಅಪ್ರಸ್ತುತ. ಅಧಿಕಾರಕ್ಕೆ ಬಂದು ಇನ್ನೂ ತಿಂಗಳುಗಳಷ್ಟೇ ಕಳೆದಿವೆ. ಈ ಸಂದರ್ಭದಲ್ಲಿ ಬದಲಾವಣೆ ಅಪ್ರಸ್ತುತ ಎಂದು ಹೇಳಿದರು.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಘೋರವಾಗಿದೆ. ಅದರ ಪರಿಣಾಮಕಾರಿಯಾಗಿ ಬರ ಪರಿಹಾರ ಕಾಮಗಾರಿಗಳು ನಡೆಯುತ್ತಿಲ್ಲ ಎಂಬ ನೋವು ಕಾಡುತ್ತಿದೆ. ನೆರೆ ಹಾಗೂ ಬರ ಕುರಿತು ಆಳುವ ವರ್ಗ ವಿಶೇಷ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಕಾಳಜಿ ವಹಿಸಬೇಕು ಎಂದರು.
ಇಂಡಿ ಕ್ಷೇತ್ರದ ಹಳ್ಳಿಗಳ ಕಾಲುವೆಗೆ ನೀರು ಬರದಿದ್ದರೆ ರಾಜಿನಾಮೆ ನೀಡ್ತೇನೆ: ಕೈ ಶಾಸಕ ಯಶವಂತರಾಯಗೌಡ ಎಚ್ಚರಿಕೆ
ಬರ ಪರಿಹಾರ ಕಾಮಗಾರಿಗಳು ಅಷ್ಟೊಂದು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಇದರಿಂದ ರೈತರ ಸಂಕಷ್ಟ ದೂರವಾಗುತ್ತಿಲ್ಲ ಎಂದ ಅವರು, ರಾಜ್ಯದಲ್ಲಿ ಭೀಕರ ಬರ ಇದೆ. ವಿಶೇಷವಾಗಿ ವಿಜಯಪುರ ಜಿಲ್ಲೆ ಸದಾ ಬರಕ್ಕೆ ತುತ್ತಾಗಲೇ ಇದೆ. ಬ್ರಿಟಿಷರ ಕಾಲದಲ್ಲಿಯೇ ಬರ ಅಧ್ಯಯನ ಕೇಂದ್ರ ಸ್ಥಾಪಿಸಲಾಗಿತ್ತು. ಈಗಲೂ ಮುಂಗಾರು ಹಾಗೂ ಹಿಂಗಾರು ಸಂಪೂರ್ಣ ಕೈಕೊಟ್ಟಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕಾಗಿದೆ ಎಂದು ಹೇಳಿದರು
ನೀರು ನಿರ್ವಹಣೆ ಸಮರ್ಪಕವಾಗಿಲ್ಲ:
ಒಂಬತ್ತು ಏತ ನೀರಾವರಿ ಯೋಜನೆಗಳಡಿ ನೀರು ಹಂಚಿಕೆ ಪ್ರಮಾಣ ಸಮರ್ಪಕವಾಗಿರಲಿ. ಇಂಡಿ ಶಾಖಾ ಕಾಲುವೆ, ಗುತ್ತಿ ಬಸವಣ್ಣ ಏತ ನೀರಾವರಿಗೆ ನಿಗದಿತ ಪ್ರಮಾಣದಲ್ಲಿ ನೀರು ಹಂಚಿಕೆಯಾಗುತ್ತಿಲ್ಲ. ನೀರು ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ದೂರಿದರು. ಡಿಸೆಂಬರ್‌ನಲ್ಲಿ ಕೃಷಿ ಉದ್ದೇಶಿತ ನೀರು ಹರಿಯುವಿಕೆ ಕಡಿತವಾಗಲಿದೆ ಎಂಬ ಮಾಹಿತಿ ಇದೆ. ಇದರಿಂದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಬಹುತೇಕ ಸ್ಥಗಿತಗೊಳ್ಳಲಿವೆ. ನೀರಿನ ಹಾಹಾಕಾರ ಉಂಟಾಗಲಿದೆ ಎಂದರು.
ಸಚಿವರು ವಿಜಯಪುರಕ್ಕೂ ಬರಲಿ:
ಕಂದಾಯ ಸಚಿವರು ದಾವಣಗೆರೆ, ಬಾಗಲಕೋಟೆ ಮತ್ತಿತರ ಕಡೆ ಸಭೆ ನಡೆಸುತ್ತಿದ್ದು ಈ ಭಾಗಕ್ಕೂ ಬಂದು ಸಭೆ ನಡೆಸಬೇಕು. ವಸ್ತುಸ್ಥಿತಿ ಗಮನಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಮುಂಜಾಗ್ರತೆ ಕೈಗೊಳ್ಳದೇ ಹೋದರೆ ಭವಿಷ್ಯದಲ್ಲಿ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಬರ ಮತ್ತು ನೆರೆ ಈ ರಾಜ್ಯ ದಲ್ಲಿ ಅನೇಕ ವರ್ಷಗಳಿಂದ ಕಾಡುತ್ತಿದೆ. ಹೀಗಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ವಿದ್ಯುತ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೈಗೊಂಡ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ರೈತರ ಕೃಷಿ ಪಂಪ್‌ಸೆಟ್‌ಗೆ ಏಳು ಗಂಟೆ ನೀರು ಕೊಡುವ ತೀರ್ಮಾನ ಅಭಿನಂದನೀಯ ಎಂದರು.
ವಿಜಯಪುರ: ಕತ್ತೆಗೂ ಬಂತು ಒಳ್ಳೆಯ ಕಾಲ, ಹಾಲಿಗೆ ಬಂತು ಭಾರೀ ಬೇಡಿಕೆ..!
ಆಲಮಟ್ಟಿಯ ನೀರಿನ ಪ್ರಮಾಣ ಜಿಲ್ಲೆಗೆ ಸಿಗುತ್ತಿಲ್ಲ:
ವಿಜಯಪುರ ಜಿಲ್ಲೆಗೆ ಆಲಮಟ್ಟಿ ಜಲಾಶಯದ ನೀರು ಸದ್ಭಳಕೆಯಾಗುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕಾಗಿರುವುದು ಅನಿವಾರ್ಯವಾಗಿದೆ. ಭೀಮಾನದಿಗೆ ನೀರು ಹರಿಸಬೇಕು. ಕರ್ನಾಟಕ ಮಹಾರಾಷ್ಟ್ರ ಜಂಟಿಗಾಗಿ ನೀರು ಹರಿಸುವ ವ್ಯವಸ್ಥೆಯಾಗಬೇಕು. ಸಮನ್ವಯತೆಯಿಂದ ಕೆಲಸ ಮಾಡದೇ ಹೋದರೆ ಎರಡೂ ರಾಜ್ಯಗಳಿಗೆ ಸಮಸ್ಯೆ. ಪ್ರಾದೇಶಿಕವಾಗಿ, ಭಾಷಾವಾರು ಪ್ರಾಂತ್ಯಗಳನ್ನು ರಚನೆ ಮಾಡಲಾಗಿದೆ ವಿನಃ ನಾವೇನು ಬೇರೆ ದೇಶಗಳಲ್ಲಿ ಇಲ್ಲ. ಈ ಹಿಂದಿನ ಸರ್ಕಾರದಲ್ಲಿ ಹಣಕಾಸು ನಿರ್ವಹಣೆ ಸಮರ್ಪಕವಾಗಿ ಮಾಡದ ಕಾರಣ ವಿದ್ಯುತ್ ಸೇರಿದಂತೆ ಅನೇಕ ರೀತಿಯ ಸಮಸ್ಯೆ ಎದುರಾಗಿವೆ ಎಂದು ಹೇಳಿದರು.
ಇಂಡಿ ಪ್ರತ್ಯೇಕ ಜಿಲ್ಲೆಗೆ ಬದ್ಧ
ಇಂಡಿ ಪ್ರತ್ಯೇಕ ಜಿಲ್ಲೆಯಾಗಿಸುವುದು ನನ್ನ ಸಂಕಲ್ಪ, ನನ್ನ ಬದ್ಧತೆ, ಇಂಡಿ ಜಿಲ್ಲಾ ಕೇಂದ್ರವನ್ನಾಗಿಸುವ ಸಂಕಲ್ಪದೊಂದಿಗೆ ಕಾರ್ಯೋನ್ಮುಖವಾಗಿರುವೆ. ಇಂಡಿ ಜಿಲ್ಲಾ ಕೇಂದ್ರ ರೂಪಿಸದೇ ಹೋದರೆ ಚುನಾವಣೆ ನಿಲ್ಲುವುದಿಲ್ಲ ಎಂದು ಘೋಷಣೆ ಮಾಡಿರುವೆ. ಅದಕ್ಕಾಗಿ ಸಾಕಷ್ಟು ಪ್ರಕ್ರಿಯೆ ಇದೆ. ಇತರೆ ತಾಲೂಕು ಜನರು ಸಹ ಒಪ್ಪಬೇಕಿದೆ ಎಂದು ಶಾಸಕರು ಹೇಳಿದರು.