ಸಿದ್ದರಾಮಯ್ಯ ಬಾದಾಮಿ ‘ಕೈ’ ಬಿಟ್ರಾ?

ತೀವ್ರ ಕುತೂಹಲ ಕೆರಳಿಸಿದ ಸಿದ್ದರಾಮಯ್ಯಮುಂದಿನ ನಡೆ, ಕ್ಷೇತ್ರದ ಜನರಲ್ಲೂ ಕುತೂಹಲ

Is it Siddaramaiah Dropped Badami Constituency grg

ಶಂಕರ ಕುದರಿಮನಿ

ಬಾದಾಮಿ(ನ.18): ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಬಾದಾಮಿ ಕ್ಷೇತ್ರದ ಜನರಲ್ಲಿ ಮೂಡಿದೆ. 2018ರಲ್ಲಿ ರಾಜಕೀಯ ಮರುಹುಟ್ಟು ನೀಡಿದ್ದ ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ವಿಮುಖರಾಗುತ್ತಿದ್ದಾರೆಯೇ ಎಂಬ ಅನುಮಾನ ಕೂಡ ಮೂಡುತ್ತಿದೆ ಅವರ ನಡೆ.

ಬೆಂಗಳೂರಿನಿಂದ ಹತ್ತಿರದಲ್ಲಿಯೇ ಇರುವ, ವಾರಕ್ಕೆ ಅಥವಾ ತಿಂಗಳಿಗೆ ಒಮ್ಮೆಯಾದರೂ ಭೇಟಿ ನೀಡುವ ಕ್ಷೇತ್ರವನ್ನು ಅವರು ಆಯ್ಕೆಯಲ್ಲಿ ಮೊದಲ ಸ್ಥಾನ ನೀಡಿದ್ದಾರೆ ಸಿದ್ದರಾಮಯ್ಯ ಅವರು. ಸಹಜವಾಗಿ ಬಾದಾಮಿ ಕ್ಷೇತ್ರವನ್ನು ತ್ಯಜಿಸುವ ಎಲ್ಲ ಮುನ್ಸೂಚನೆಗಳು ದೊರೆತಿವೆ. ಮುಂದಿನ ತಮ್ಮ ರಾಜಕೀಯ ನಿರ್ಧಾರವನ್ನು ಸಿದ್ದರಾಮಯ್ಯ ಅವರು ಈಗಲೇ ಗುಟ್ಟು ಬಿಟ್ಟುಕೊಡದಿರುವುದರಿಂದ ಸಹಜವಾಗಿ ಸ್ಥಳೀಯ ಕಾಂಗ್ರೆಸ್‌ ನಾಯಕರಲ್ಲಿ ತಳಮಳ ಆರಂಭಗೊಂಡಿದೆ. ಚಾಮುಂಡೇಶ್ವರಿಯಲ್ಲಿ ಸೋಲುತ್ತೇನೆ ಎಂಬ ನಾಡಿಮಿಡಿತ ಅರಿತಿದ್ದ ಸಿದ್ದರಾಮಯ್ಯ ಅವರು, 2018ರಲ್ಲಿ ರಕ್ಷಣಾ ಕ್ಷೇತ್ರವಾಗಿ ಬಾದಾಮಿಯನ್ನು ಕೊನೆಕ್ಷಣದಲ್ಲಿ ಆಯ್ಕೆ ಮಾಡಿಕೊಂಡಿದ್ದರು. ಅವರ ನಿರೀಕ್ಷೆಯಂತೆ ಚಾಮುಂಡೇಶ್ವರಿ ಕೈಬಿಟ್ಟರೂ ಬಾದಾಮಿ ಬನಶಂಕರಿ ದೇವಿ ಕೈಹಿಡಿದಳು.

ಹಿಂದೂ ಮಂತ್ರ ಜಪ ಬಿಟ್ಟರೆ ಬಿಜೆಪಿಗರಿಗೆ ಬೇರೇನೂ ಗೊತ್ತಿಲ್ಲ: ತಿಮ್ಮಾಪೂರ

2018ರ ಚುನಾವಣೆಯಲ್ಲಿ ಬಾದಾಮಿ ಸಿದ್ದರಾಮಯ್ಯ ಅವರ ಆಯ್ಕೆ ಆಗಿರಲಿಲ್ಲ. ಜಿಲ್ಲೆಯ ಎಲ್ಲ ಹಿರಿಯ ಕೈ ಮುಖಂಡರ ಒತ್ತಾಸೆ ಮತ್ತು ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿಅವರ ಅನಾರೋಗ್ಯ ಕಾರಣ ಹಾಗೂ ಕುರುಬ ಸಮಾಜ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬಾದಾಮಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಇದರಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಬಹುದು ಎಂಬ ಆಂತರಿಕ ಲೆಕ್ಕಾಚಾರ ಕೂಡ ಅಡಗಿತ್ತು. ಹೀಗಾಗಿ ಪುಲಕೇಶಿ ನಾಡಿಗೆ ಸಿದ್ದರಾಮಯ್ಯ ಬಂದಿದ್ದರು.

ಮುಂದೆ ಯಾರು?:

ಸಿದ್ದರಾಮಯ್ಯ ಅವರೇ ಇನ್ನೊಂದು ಅವಧಿಗೆ ಬಾದಾಮಿಯಿಂದ ಸ್ಪರ್ಧೆ ಮಾಡಲಿ ಎಂಬ ಒತ್ತಾಯ ಕ್ಷೇತ್ರದ ಜನರಿಂದ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಅವರ ಬೆಂಬಲಿಗರು, ಕಾರ್ಯಕರ್ತರು, ರಾಜಕೀಯ ಮುಖಂಡರು ಕೂಡ ಈಗಾಗಲೇ ಸಿದ್ದರಾಮಯ್ಯ ಅವರ ಬೆಂಗಳೂರಿನಲ್ಲಿರುವ ಮನೆಗೆ ತೆರಳಿ ಬಲವಾದ ಒತ್ತಾಯವನ್ನೂ ಮಾಡಿದ್ದಾರೆ. ಆದರೆ, ಕ್ಷೇತ್ರದ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿ ಅವರನ್ನು ಸಾಗಹಾಕಿದ್ದಾರೆ. ಆದರೆ, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರವನ್ನು ಮರು ಆಯ್ಕೆ ಮಾಡಿಕೊಳ್ಳುವುದು ಕಷ್ಟಸಾಧ್ಯ ಎಂಬ ಮಾತುಗಳು ಅವರ ಆಪ್ತ ವಲಯದಲ್ಲಿ ಕೇಳಿಬರುತ್ತಿದೆ.
ಒಂದು ವೇಳೆ ಸಿದ್ದರಾಮಯ್ಯ ಅವರು 2023ರ ವಿಧಾನಸಭೆ ಚುನಾವಣೆಗೆ ಬಾದಾಮಿಯಿಂದ ಸ್ಪರ್ಧೆ ಮಾಡದೇ ಹೋದಲ್ಲಿ ಮುಂದೆ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆ ಕೂಡ ಈಗ ಎದುರಾಗಿದೆ. ಮಾತ್ರವಲ್ಲ, ಸಾರ್ವಜನಿಕ ವಲಯದಲ್ಲಿಯೂ ಸಂಚಲನ ಮೂಡಿಸಿದೆ. ಜತೆಗೆ ವಿಪಕ್ಷವಾದ ಬಿಜೆಪಿಯಿಂದ ಬಿಜೆಪಿಯಿಂದ ಯಾರೂ ಸ್ಪರ್ಧಿಸಲಿದ್ದಾರೆ ಎಂಬ ಪ್ರಶ್ನೆ ಕೂಡ ಎದುರಾಗಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಈ ಬಾರಿ ಯಾರಿಗೆ ಒಲಿಯಲಿದೆ ಬಿಜೆಪಿ ಟಿಕೆಟ್‌ ಎಂಬ ಕುತೂಹಲ ಕೂಡ ಎದುರಾಗಿದೆ.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ನಂತರದ ಸ್ಥಾನದಲ್ಲಿ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿಅವರ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಅವರ ಅನಾರೋಗ್ಯ ಕಾರಣದಿಂದ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿಅವರ ಹೆಸರು ಕೂಡ ಕೇಳಿಬರುತ್ತಿದೆ. ಇದರ ನಡುವೆ ಕುರುಬ ಸಮುದಾಯದ ಮಹೇಶ ಹೊಸಗೌಡರ ಕೂಡ ಈಗಾಗಲೇ ಅರ್ಜಿ ಹಾಕಿದ್ದು, ರೇಸ್‌ನಲ್ಲಿರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್‌ಗೆ ಕುರುಬ, ಮುಸ್ಲಿಂ ಮತ್ತು ಇತರೆ ಹಿಂದುಳಿದ ವರ್ಗಗಳ ಮತಗಳು ಗಟ್ಟಿಯಾಗಿವೆ. ಆದರೆ, ಸ್ಪರ್ಧಾ ಕಣದಲ್ಲಿರುವ ವ್ಯಕ್ತಿಯ ಮೇಲೆಯೂ ಈ ಸಮುದಾಯದ ಮತಗಳು ನಿರ್ಣಾಯಕವಾಗುತ್ತವೆ ಎಂಬುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಸಿದ್ದರಾಮಯ್ಯ ಅವರು ಒಮ್ಮತದ ಅಭ್ಯರ್ಥಿಯಾಗಿ ಯಾರನ್ನು ಸೂಚಿಸುತ್ತಾರೆಯೋ ಅಂತಹ ವ್ಯಕ್ತಿ ಕೂಡ ಇಲ್ಲಿ ಅಚ್ಚರಿ ಅಭ್ಯರ್ಥಿ ಸ್ಪರ್ಧೆ ಮಾಡುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಚಿಮ್ಮನಕಟ್ಟಿಅವರ ಕುಟುಂಬಕ್ಕೆ ಟಿಕೆಚ್‌ ಕೊಡುವ ಆಲೋಚನೆಯಲ್ಲಿದ್ದರೂ ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಅವರ ಸ್ಪರ್ಧೆ ನಿರ್ಧಾರವಾದರೆ ಚಿಮ್ಮನಕಟ್ಟಿಅವರು ಈ ಬಾರಿಯೂ ಕ್ಷೇತ್ರತ್ಯಾಗ ಮಾಡಿದರೂ ಅಚ್ಚರಿಯಿಲ್ಲ.

ಸಿದ್ದರಾಮಯ್ಯ ಮಾಡಿದ ಹಾಗೆ ಉಂಡ ಮನೆ ಜಂತಿ ಎಣಿಸೋದಿಲ್ಲ: ಶ್ರೀರಾಮುಲು

ಬಿಜೆಪಿಯಲ್ಲಿಯೂ ಪೈಪೋಟಿ:

ಜೆಡಿಎಸ್‌ನಿಂದ ಹಣಮಂತ ಮಾವಿನಮರದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿಕೊಂಡಿದ್ದಾರೆ. ಇನ್ನು ಬಿಜೆಪಿಯಿಂದ ಮಹಾಂತೇಶ ಮಮದಾಪುರ ಹಾಗೂ ಎಂ.ಕೆ.ಪಟ್ಟಣಶೆಟ್ಟಿಅವರ ನಡುವೆ ಪೈಪೋಟಿ ಇದೆ. ಇನ್ನೊಂದೆಡೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಇರುವುದು ಕಂಡುಬರುತ್ತಿಲ್ಲ.

ಕಳೆದ 5 ವರ್ಷಗಳಲ್ಲಿ ಬಾದಾಮಿ ಮತಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದೆ. ಮತ್ತೆ ಸಿದ್ದರಾಮಯ್ಯ ಅವರು ಈ ಕ್ಷೇತ್ರಕ್ಕೆ ಬಂದರೆ ನಾನು ಮತ್ತು ನಮ್ಮ ಕುಟುಂಬ ನಮ್ಮ ಕಾರ‍್ಯಕರ್ತರು ಹೃದಯಪೂರ್ವಕವಾಗಿ ಅವರನ್ನು ಸ್ವಾಗತಿಸುತ್ತೇವೆ. ಸಿದ್ದರಾಮಯ್ಯನವರು ಯಾವುದೇ ಸಂದರ್ಭದಲ್ಲಿ ಕರೆದರೂ ಹೋಗುತ್ತೇನೆ. ಅವರು ಹೇಳಿದ ಹಾಗೆ ನಡೆದುಕೊಳ್ಳುತ್ತೇವೆ. ನಮ್ಮ ಬಾದಾಮಿ ಅಭಿವೃದ್ಧಿ ನನ್ನ ಮತ್ತು ನಮ್ಮ ತಂದೆಯವರ ಕನಸಾಗಿದೆ. ಅದು ನನಸಾಗುವುದಾದರೆ ನಾವು ಸಿದ್ದರಾಮಯ್ಯನವರಿಗೆ ಕ್ಷೇತ್ರವನ್ನು ಬಿಟ್ಟು ಕೊಡಲು ಸದಾ ಸನ್ನದ್ಧರಾಗಿದ್ದೇವೆ ಅಂತ ಕಾಂಗ್ರೆಸ್‌ ಯುವ ಮುಖಂಡ ಭೀಮಸೆನ ಚಿಮ್ಮನಕಟ್ಟಿ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios