ಸಿದ್ದರಾಮಯ್ಯ ಮಾಡಿದ ಹಾಗೆ ಉಂಡ ಮನೆ ಜಂತಿ ಎಣಿಸೋದಿಲ್ಲ: ಶ್ರೀರಾಮುಲು
ಕಾಂಗ್ರೆಸ್‌ನ ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರೆ ಎಲ್ಲರನ್ನು ಮುಗಿಸುತ್ತಲೇ ಬಂದಿದ್ದಾರೆ. ಅವರು ಮಾಡಿದ ತಿಂದುಂಡ ಮನೆಗೆ ಜಂತಿ ಎನಿಸುವ ಕಾರ್ಯ ನಾವು ಮಾಡುವುದಿಲ್ಲ ಎಂದ ರಾಮುಲು
ಬಾಗಲಕೋಟೆ(ನ.16): ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಾಗೆ ನಾವು ತಿಂದುಂಡ ಮನೆಗೆ ಜಂತಿ ಎನಿಸುವ ಕೆಲಸ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಎಲ್ಲ ಕಡೆ ದ್ರೋಹ ಮಾಡುತ್ತಲೇ ಬಂದಿದ್ದಾರೆ. ಜೆಡಿಎಸ್‌ನಲ್ಲಿ ದೇವೆಗೌಡರ ಬೆನ್ನಿಗೆ ಚೂರಿ ಹಾಕಿದ್ದರು. ಕಾಂಗ್ರೆಸ್‌ನ ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರೆ ಎಲ್ಲರನ್ನು ಮುಗಿಸುತ್ತಲೇ ಬಂದಿದ್ದಾರೆ. ಅವರು ಮಾಡಿದ ತಿಂದುಂಡ ಮನೆಗೆ ಜಂತಿ ಎನಿಸುವ ಕಾರ್ಯ ನಾವು ಮಾಡುವುದಿಲ್ಲ ಎಂದರು.
ಸಿದ್ದರಾಮಯ್ಯ ಸೋಲು ಖಚಿತ:
ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರು, ಬಾದಾಮಿಯಲ್ಲಿ ಕಾರ್ಯಕರ್ತರು ಗಂಟೆಗಟ್ಟಲೇ ಕೆಲಸ ಮಾಡಿ ಅವರನ್ನು ಗೆಲ್ಲಿಸಿರುವುದನ್ನು ಮರೆತಿದ್ದಾರೆ. ಮರಳಿ ಬಾದಾಮಿಯಲ್ಲಿ ಸ್ಪರ್ಧಿಸಿದರೇ, ಮಾಜಿ ಸಚಿವ ಎಸ್.ಆರ್.ಪಾಟೀಲ ಹಾಗೂ ಚಿಮ್ಮನಕಟ್ಟಿಅವರು ಸಿದ್ದರಾಮಯ್ಯ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ. ಇದಕ್ಕಾಗಿಯೇ ಅವರು ಕೋಲಾರಕ್ಕೆ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಅವರು ಕೋಲಾದಲ್ಲಿಯೂ ಸ್ಪರ್ಧಿಸುವುದಿಲ್ಲ. ಮತ್ತೇ ವರುಣಾ ಕ್ಷೇತ್ರಕ್ಕೆ ಓಡಿ ಹೋಗುವುದು ನಿಶ್ಚಿತ. ಅಲ್ಲಿ ನಮ್ಮ ಪಕ್ಷವನ್ನು ಬಲ ಪಡಿಸಲಾಗುತ್ತಿದೆ. ಅಲ್ಲಿಯೂ ಸಿದ್ದರಾಮಯ್ಯ ಅವರಿಗೆ ಸೋಲು ಖಚಿತ ಎಂದು ಶ್ರೀರಾಮುಲು ತಿಳಿಸಿದರು.
Assembly Election: ಚಾಮುಂಡೇಶ್ವರಿಯಿಂದ ಸ್ಪರ್ಧಿಸುವುದಿಲ್ಲ- ಸಿದ್ದರಾಮಯ್ಯ
ಮೊಲಕಾಲ್ಮೂರದಿಂದಲೇ ಸ್ಪರ್ಧೆ :
ಸದ್ಯ ನಾನಂತು ಮೊಲಕಾಲ್ಮೂರ ಕ್ಷೇತ್ರದಿಂದಲೇ ಸ್ಪರ್ಧಿಸುವೆ. ಪಕ್ಷ ತೆಗೆದುಕೊಳ್ಳು ಹಾಗೂ ನೀಡುವ ಸೂಚನೆ ಪ್ರಕಾರ ನಡೆದುಕೊಳ್ಳುವೆ. ಯಾವ ಕ್ಷೇತ್ರದಲ್ಲಿ ನಾನು ಸ್ಪರ್ಧಿಸಬೇಕು ಎಂಬುದು ಪಕ್ಷದ ಅಂತಿಮ ನಿರ್ಧಾರ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.
ರಡ್ಡಿ ಕಾಂಗ್ರೆಸ್‌ಗೆ ಹೋಗುವುದು ಗೊತ್ತಿಲ್ಲ
ಜನಾರ್ಧನ್ ರಡ್ಡಿ ಅವರು ಕಾಂಗ್ರೆಸ್‌ಗೆ ಹೋಗುವ ಮಾಹಿತಿ ನನಗೆ ಗೊತ್ತಿಲ್ಲ. ಕೆಲವು ಆಂತರಿಕ ವಿಚಾರಗಳನ್ನು ನನಗೆ ಭೇಟಿಯಾದ ಸಮಯದಲ್ಲಿ ರಡ್ಡಿ ಅವರು ತಿಳಿಸಿದ್ದಾರೆ. ಆ ವಿಚಾರಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೇನೆ. ನಮ್ಮವರಿಂದಲೇ ನನಗೆ ಮೋಸ ಆಗಿದೆ ಎಂಬ ರಡ್ಡಿ ಅವರ ಮಾತನ್ನು ಸಹ ಪಕ್ಷದ ವಲಯದಲ್ಲಿ ಆಂತರಿಕವಾಗಿ ಮಾತನಾಡಿದ್ದೇನೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.