ಬಿಜೆಪಿ ತೊರೆಯುತ್ತಾರಾ ಹಿರಿಯ ನಾಯಕ ಸಂಗಣ್ಣ ಕರಡಿ..?

ನಾನಂತೂ ಬಿಜೆಪಿ ತೊರೆಯುವುದಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಅಭಿವೃದ್ಧಿಯಲ್ಲಿ ನನಗೆ ಅಪಾರ ಗೌರವವಿದೆ. ಹೀಗಾಗಿ ಮತ್ತೊಮ್ಮೆ ಇಂಥ ಪ್ರಶ್ನೆ ಕೇಳಬೇಡಿ ಎಂದ ಸಂಗಣ್ಣ ಕರಡಿ

Is it Koppal MP Sanganna Karadi Leave The BJP grg

ಕೊಪ್ಪಳ(ಜು.15): ಬಿಜೆಪಿಯನ್ನು ತೊರೆಯುವ ಪ್ರಶ್ನೆಯೇ ಇಲ್ಲ. ಪಕ್ಷ ನನಗೆ ಏನೆಲ್ಲ ಕೊಟ್ಟಿದೆ. ಪಕ್ಷ ಅವಕಾಶ ನೀಡಿದರೆ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು. ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ವಯಸ್ಸಾಗಿದೆ. ಇನ್ನು ಒಂದೂವರೆ ವರ್ಷ ಸಂಸದರ ಅವಧಿ ಇದೆ. ಹೀಗಿದ್ಯಾಗ್ಯೂ ಪಕ್ಷ ಯಾಕೆ ಬದಲಾಯಿಸಬೇಕು. ಇದನ್ನು ಯಾರು ಮಾಡುತ್ತಾರೋ ಗೊತ್ತಿಲ್ಲ. ನಾನಂತೂ ಬಿಜೆಪಿ ತೊರೆಯುವುದಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಅಭಿವೃದ್ಧಿಯಲ್ಲಿ ನನಗೆ ಅಪಾರ ಗೌರವವಿದೆ. ಹೀಗಾಗಿ ಮತ್ತೊಮ್ಮೆ ಇಂಥ ಪ್ರಶ್ನೆ ಕೇಳಬೇಡಿ ಎಂದರು.

ನನಗೆ ಗಂಗಾವತಿ, ಯಲಬರ್ಗಾ ವಿಧಾನಸಭಾ ಕ್ಷೇತ್ರಕ್ಕೂ ಕರೆಯುತ್ತಾರೆ. ಹಾಗಂತ ಹೋಗಲು ಆಗುತ್ತದೆಯೋ ಎಂದು ಪ್ರಶ್ನಿಸಿದರು. ಯಾರೋ ಕರೆಯುತ್ತಾರೆ ಎಂದು ಡ್ಯಾಂಗೆ ಹಾರಲು ಆಗುವುದಿಲ್ಲ ಎಂದು ಕಾರವಾಗಿಯೇ ತಿಳಿಸಿದರು.

ಸಂಸದ ಸಂಗಣ್ಣ ಕರಡಿ ವಿಧಾನಸಭೆಗೆ ಸ್ಪರ್ಧೆ?

ನಾನು ಇದುವರೆಗೂ ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧೆ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ನನ್ನ ಮಾತೃ ಕ್ಷೇತ್ರವಾದ ಕೊಪ್ಪಳ ವಿಧಾನಸಭಾ ಕ್ಷೇತ್ರದವರು ಕರೆಯುತ್ತಿರುವುದು ನಿಜ. ಹೀಗಾಗಿ ಪಕ್ಷ ಅವಕಾಶ ನೀಡಿದರೆ ಸ್ಪರ್ಧೆ ಮಾಡುತ್ತೇನೆ. ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡುವುದಾದರೆ ಕೊಪ್ಪಳ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಹೊರತು ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಅದರಲ್ಲೂ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಹೊರತು ಬೇರೆ ಪಕ್ಷ ಇಲ್ಲ ಎಂದು ಸ್ಪಷ್ಟಪಡಿಸಿದರು. ಹಾಗೊಂದು ವೇಳೆ ಪಕ್ಷದಲ್ಲಿ ಅವಕಾಶ ನೀಡದಿದ್ದರೆ ಸಂಸದನಾಗಿ ಸೇವೆ ಮಾಡುತ್ತೇನೆ ಎಂದರು. ನನಗೂ ಸಹ ವಯಸ್ಸಾಗಿದೆ. ಆದರೂ ಪಕ್ಷಕ್ಕಾಗಿ ಸೇವೆ ಮಾಡುವ ಆಸಕ್ತಿ ಇದ್ದು, ಮಿಕ್ಕಿದ್ದು ಪಕ್ಷಕ್ಕೆ ಬಿಟ್ಟ ವಿಷಯ ಎಂದರು.

ಕಾಂಗ್ರೆಸ್‌ ಒಡೆದ ಮನೆ

ಸಿದ್ದರಾಮೋತ್ಸವ ಮಾಡುವುದು ಅವರಿಗೆ(ಕಾಂಗ್ರೆಸ್‌) ಬಿಟ್ಟ ವಿಷಯ. ಆದರೆ, ಇದರಲ್ಲಿ ಕಾಂಗ್ರೆಸ್‌ ಒಡೆದ ಮನೆಯಾಗಿರುವುದು ಗೊತ್ತಾಗುತ್ತದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ ಒಂದು ರೀತಿ ಹೇಳಿದರೆ ಸಿದ್ದರಾಮಯ್ಯ ಮತ್ತೊಂದು ರೀತಿ ಮಾತನಾಡುವುದನ್ನು ನೋಡಿದರೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಗೊತ್ತಾಗುತ್ತದೆ ಎಂದರು.
 

Latest Videos
Follow Us:
Download App:
  • android
  • ios