Asianet Suvarna News Asianet Suvarna News

ಗೋವಾ ಬಿಜೆಪಿಗರಿಗೆ ಗೋವು ಮಾತೆಯಲ್ಲವೇ? : ಸಿ.ಎಂ.ಇಬ್ರಾಹಿಂ

ಗೋವನ್ನು ಅವ್ವ, ಮಾತೆ ಎನ್ನುವ ಬಿಜೆಪಿ ಗೋವಾದಲ್ಲಿ ಏಕೆ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿಲ್ಲ? ಗೋವಾದ ಗೋವು ಬಿಜೆಪಿಯವರಿಗೆ ಅವ್ವ- ಮಾತೆಯಲ್ಲವೇ? ಬರೀ ಕರ್ನಾಟಕದ ಬಿಜೆಪಿಗಷ್ಟೇ ಗೋವು ಮಾತೆಯೇ? ಎಂದು ಜೆಡಿಎಸ್‌ ರಾಜಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ರಶ್ನಿಸಿದರು.

Is Goa not a gomat for Goa BJP asked  question  CM Ibrahim rav
Author
First Published Dec 4, 2022, 10:02 AM IST

ಹುಬ್ಬಳ್ಳಿ (ಡಿ.4) : ಗೋವನ್ನು ಅವ್ವ, ಮಾತೆ ಎನ್ನುವ ಬಿಜೆಪಿ ಗೋವಾದಲ್ಲಿ ಏಕೆ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿಲ್ಲ? ಗೋವಾದ ಗೋವು ಬಿಜೆಪಿಯವರಿಗೆ ಅವ್ವ- ಮಾತೆಯಲ್ಲವೇ? ಬರೀ ಕರ್ನಾಟಕದ ಬಿಜೆಪಿಗಷ್ಟೇ ಗೋವು ಮಾತೆಯೇ? ಎಂದು ಜೆಡಿಎಸ್‌ ರಾಜಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ರಶ್ನಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗೋವಾದಲ್ಲಿ ಗೋಹತ್ಯೆ ಜಾರಿ ಮಾಡಿದರೆ ಅಲ್ಲಿರುವ ಕ್ರೈಸ್ತರು ಹೊಡೆಯುತ್ತಾರೆ. ಗೋವಾದಿಂದ ದನದ ಮಾಂಸ ರಾಜ್ಯಕ್ಕೆ ಬರುತ್ತಿದೆ. ಅದನ್ನು ಏಕೆ ತಡೆಯುತ್ತಿಲ್ಲ? ಎಂದರು. ಚುನಾವಣೆ ಹತ್ತಿರ ಇರುವುದರಿಂದ ಸೋಲುವ ಭೀತಿಯಲ್ಲಿರುವ ಬಿಜೆಪಿ ಗೋವು, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದ ಹೆಸರಿನಲ್ಲಿ ಮತ ಧೃವೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಬೇಕಾಗಿಲ್ಲ: ಸಿಎಂ ಇಬ್ರಾಹಿಂ

ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸುವ ಕುರಿತು ತೀವ್ರ ಕಿಡಿಕಾರಿದ ಇಬ್ರಾಹಿಂ, ಇನ್ನು ನಾಲ್ಕು ತಿಂಗಳು ತಡೆಯಿರಿ. ಈ ದರಿದ್ರ ಸರ್ಕಾರ ಹೋಗುತ್ತದೆ. ಆಮೇಲೆ ನಾವು ಬರುತ್ತೇವೆ. ನಿರ್ಭಯ ಹಾಗೂ ನಿರ್ಭೀತಿಯಿಂದ ವ್ಯಾಪಾರ ಮಾಡುವಿರಂತೆ ಎಂದು ಅಭಯ ನೀಡಿದರು.

ಕುಮಾರಸ್ವಾಮಿಯೇ ಸಿಎಂ:

ಜೆಡಿಎಸ್‌ಗೆ ಸಂಪೂರ್ಣ ಬಹುಮತ ಬಂದರೆ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಲಿದ್ದಾರೆ. ಪಂಚರತ್ನ ಯಾತ್ರೆ ಮೂಲಕ ರಾಜ್ಯದ ಜನರಿಗೆ ನೀಡಿರುವ ಭರವಸೆ ಈಡೇರಿಸಲು ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಗ್ರಹಗತಿ ಈಗ ಚೆನ್ನಾಗಿದೆ. ಪ್ರಧಾನಿ ಹುದ್ದೆಗೇರಬಹುದು. ಆಗ ಇಲ್ಲಿ ಯಾರು ಮುಖ್ಯಮಂತ್ರಿ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಲ್ಲಿವರೆಗೂ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ.

ಕೋರ್ಟ್‌ ಮೊರೆ:

ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಮತದಾರರಿಗೆ ಹಣ, ವಸ್ತುಗಳನ್ನು ಹಂಚುವ ವಿಷಯವನ್ನು ಜೆಡಿಎಸ್‌ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯವನ್ನು ನ್ಯಾಯಾಲಯಕ್ಕೆ ಪಕ್ಷ ಕೊಂಡೊಯ್ಯಲಿದೆ. ಇಂತಹ ಆಮಿಷ ಪ್ರಕರಣಗಳನ್ನು ಪತ್ತೆ ಹಚ್ಚುವ ಸಲುವಾಗಿಯೇ ಬೆಂಗಳೂರಿನಲ್ಲಿ ವಾರ್‌ ರೂಮ್‌ ಆರಂಭಿಸಲಾಗಿದ್ದು, 400 ಯುವಕರು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಇಬ್ರಾಹಿಂ ತಿಳಿಸಿದರು. ಕೆಲವು ಕ್ಷೇತ್ರಗಳಲ್ಲಿ ಮುಖಂಡರು ತಾವೇ ಜೆಡಿಎಸ್‌ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಈವರೆಗೆ ಜೆಡಿಎಸ್‌ ಅಧಿಕೃತವಾಗಿ ಟಿಕೆಟ್‌ ಘೋಷಣೆ ಮಾಡಿಲ್ಲ ಎಂದರು.

ಮಹಾರಾಷ್ಟ್ರದ ಗಡಿ ಕ್ಯಾತೆಯ ಬಗ್ಗೆ ಮಾತನಾಡಿದ ಅವರು, ಇದು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಬಿಜೆಪಿ ನಡುವೆ ನಡೆಯುತ್ತಿರುವ ಕುಸ್ತಿ, ಜನರಿಗೆ ಈ ಬಗ್ಗೆ ಚಿಂತೆ ಇಲ್ಲದಿದ್ದರೂ ರಾಜಕೀಯ ಕಾರಣಕ್ಕೆ ವಿವಾದ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಹಾಯಕರಾಗಿದ್ದಾರೆ. ಬೆಳಗಾವಿಯಲ್ಲಿ ಮರಾಠಿಗರೇ ಜೆಡಿಎಸ್‌ ಅಭ್ಯರ್ಥಿಯಾಗಲಿದ್ದಾರೆ ಎಂದೂ ಇದೇ ವೇಳೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಸೇರಿದಂತೆ ಹಲವರಿದ್ದರು.

ಮಧ್ಯಂತರ ಚುನಾವಣೆ ನಡೆಯಲಿ: ಇಬ್ರಾಹಿಂ

ರಾಜ್ಯವು ಈಗಾಗಲೇ ಆರ್ಥಿಕ ದಿವಾಳಿಯಾಗಿದ್ದು ಮಧ್ಯಂತರ ಚುನಾವಣೆ ನಡೆಸುವುದು ಸೂಕ್ತ ಎಂದು ಜೆಡಿಎಸ್‌ ರಾಜಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‌ ಚುನಾವಣೆ ನಡೆಯುತ್ತಿದ್ದು ನಮ್ಮ ರಾಜ್ಯದಲ್ಲೂ ಜನವರಿಯಲ್ಲಿ ಚುನಾವಣೆ ಘೋಷಣೆಯಾದರೆ ಉತ್ತಮ ಎಂದರು.

ಅಧಿವೇಶನದ ಬಳಿಕ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರಂತೆ ಎಂಬ ಪ್ರಶ್ನೆಗೆ, ಅದು ಬಿಜೆಪಿ ಹೈಕಮಾಂಡ್‌ಗೆ ಬಿಟ್ಟಿದ್ದು. ಆದರೆ ಚುನಾವಣೆ ಬಳಿಕ ಮುಖ್ಯಮಂತ್ರಿ ಬದಲಾವಣೆಯಾಗುವುದು ಖಚಿತ. ಡಿ. 18ರ ನಂತರ ರಾಜ್ಯದಲ್ಲಿ ಭಾರೀ ಬದಲಾವಣೆಯಾಗಲಿವೆ. ರಾಜ್ಯಕ್ಕೆ ಬಿಗ್‌ ಸರಪ್ರೈಸ್‌ ಸಿಗಲಿದೆ. ಹಾಲಿ-ಮಾಜಿ ಶಾಸಕರು ಜೆಡಿಎಸ್‌ಗೆ ಬರಲಿದ್ದಾರೆ. ಯಾರಾರ‍ಯರು ಬರುತ್ತಾರೆ ಎಂಬುದನ್ನು ಅಲ್ಲಿಯವರೆಗೂ ಕಾಯ್ದುನೋಡಿ. ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿಗೆ ಸ್ವಾತಂತ್ರ್ಯವೇ ಇಲ್ಲ. ಕೇಶವ ಕೃಪಾ ಹೇಳಿದ ಹಾಗೆ ಕೆಲಸ ಮಾಡುತ್ತಿದ್ದಾರೆ. ಇನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರದೇ ನಡೆಯುತ್ತದೆ ಎಂದು ಹೇಳುವ ಮೂಲಕ ಬೊಮ್ಮಾಯಿ ಮಾತು ಇಲ್ಲೂ ನಡೆಯುವುದಿಲ್ಲ ಎಂದು ಸೂಚ್ಯವಾಗಿ ಹೇಳಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ 50ರಿಂದ 60 ಸ್ಥಾನ ಪಡೆದರೆ ದೊಡ್ಡದು ಎಂದ ಅವರು, ಅದಕ್ಕಾಗಿ ಬಿಜೆಪಿ ವಾಮ ಮಾರ್ಗದ ಮೂಲಕ ಗೆಲ್ಲಲು ಹೊರಟಿದೆ. ಧಾರವಾಡ ಜಿಲ್ಲೆಯಲ್ಲೂ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ ಎಂದು ನುಡಿದರು.

ಹಳೆ ಮೈಸೂರು ಭಾಗದ ಏಳೆಂಟು ಜಿಲ್ಲೆಗಳು ಬಿಜೆಪಿ ಹಾಗೂ ಕಾಂಗ್ರೆಸ್‌ ಮುಕ್ತವಾಗಲಿವೆ ಎಂದ ಅವರು, ಬಿಜೆಪಿ ರೌಡಿಗಳನ್ನು ರಾಜಕೀಯಕ್ಕೆ ಕರೆದುಕೊಂಡು ಬರುತ್ತಿದೆ. ಅಂಥವರನ್ನು ರಾಜಕೀಯಕ್ಕೆ ಕರೆ ತರಬಾರದು ಎಂದರು. ಜಾರಕಿಹೊಳಿ ಕುಟುಂಬದಲ್ಲಿ ಎಷ್ಟಜನ ಜೆಡಿಎಸ್‌ಗೆ ಬರುತ್ತಾರೆ ಎಂಬ ಪ್ರಶ್ನೆಗೆ, ಅವರ ಕುಟುಂಬದಲ್ಲಿ ಎಷ್ಟುಜನ ಬರುತ್ತಾರೆನ್ನುವುದು ಕುಮಾರಸ್ವಾಮಿ ಅವರಿಗೆ ಗೊತ್ತು ಎಂದರು.

Chamarajanagar: ಅಸ್ಪೃಶ್ಯರ ಮತ ಬೇಡವೆಂದು ಕುಮಾರಸ್ವಾಮಿ ಘೋಷಿಸಲಿ

ಪ್ರತ್ಯೇಕ ಮುಸ್ಲಿಂ ಕಾಲೇಜ್‌ ತೆಗೆಯಲು ವಕ್ಫ್ ಮಂಡಳಿ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಶಿಕ್ಷಣ ಎಲ್ಲರಿಗೂ ಸಿಗಬೇಕು. ಹೀಗೆ ಪ್ರತ್ಯೇಕ ಮುಸ್ಲಿಮರಿಗೆ, ಹಿಂದೂಗಳಿಗೆ ಶಿಕ್ಷಣ ನೀಡುವುದು ಸರಿಯಲ್ಲ. ನಾವೆಲ್ಲ ಮಠದಲ್ಲೇ ಶಾಲೆ ಕಲಿತ್ತಿದ್ದೇವೆ. ನಮ್ಮ ಕಾಲೇಜ್‌ನಲ್ಲಿ ಅರ್ಧದಷ್ಟುಹಿಂದೂಗಳು ಇದ್ದಾರೆ ಎಂದು ಇದೇ ವೇಳೆ ಹೇಳಿದರು.

Follow Us:
Download App:
  • android
  • ios