ಹೋರಾಟಕ್ಕೆ ಮಾತ್ರ ಯಡಿಯೂರಪ್ಪ ನಾಯಕತ್ವ ಬೇಕಾ?: ರೇಣುಕಾಚಾರ್ಯ
ಯಡಿಯೂರಪ್ಪ ಕೇವಲ ಲಿಂಗಾಯತರ ನಾಯಕ ಅಲ್ಲ. ಎಲ್ಲ ಜಾತಿ-ಪಂಗಡಗಳನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಜತೆಯಲ್ಲಿ ಕರೆದುಕೊಂಡು ಹೋಗುವ ಶಕ್ತಿಯಿದೆ. ಅವರೊಬ್ಬ ಮಾಸ್ ಲೀಡರ್. ಅವರಿಗೆ ಮತಗಳಾಗಿ ಪರಿವರ್ತಿಸುವ ಗಟ್ಟಿನಾಯಕತ್ವವಿದೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು(ಸೆ.10): ‘ರಾಜ್ಯ ಬಿಜೆಪಿಯಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪರಿಸ್ಥಿತಿ ಇದೆ’ ಎಂದು ಪಕ್ಷದ ಈಗಿನ ಸ್ಥಿತಿ ಬಗ್ಗೆ ವ್ಯಂಗ್ಯವಾಡಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ‘ಮಾಸ್ ಲೀಡರ್ ಬಿ.ಎಸ್.ಯಡಿಯೂರಪ್ಪ ಅವರನ್ನು ಕೇವಲ ಲೋಕಸಭಾ ಚುನಾವಣೆ ಕಾರಣ ಮಾತ್ರ ಬಳಸಿಕೊಂಡು ತಂತ್ರಗಾರಿಕೆ ಮಾಡುವುದು ಸಲ್ಲದು’ ಎಂದು ಎಚ್ಚರಿಸಿದ್ದಾರೆ.
ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷ ಕಟ್ಟಿದ ಯಡಿಯೂರಪ್ಪ ಅವರನ್ನು ಅರ್ಥ ಮಾಡಿಕೊಳ್ಳದೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದರು. ಈಗ ಹೋರಾಟಕ್ಕೆ ಯಡಿಯೂರಪ್ಪ ಅವರ ನಾಯಕತ್ವ ಬೇಕಾ? ಕೇವಲ ಲೋಕಸಭಾ ಚುನಾವಣೆಗಾಗಿ ಯಡಿಯೂರಪ್ಪ ಅವರ ನಾಯಕತ್ವ ಬಯಸುತ್ತೀರಾ? ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ಕೊಟ್ಟಿದ್ದಾರೆ. ಯಡಿಯೂರಪ್ಪ ಕೇವಲ ಲಿಂಗಾಯತರ ನಾಯಕ ಅಲ್ಲ. ಎಲ್ಲ ಜಾತಿ-ಪಂಗಡಗಳನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಜತೆಯಲ್ಲಿ ಕರೆದುಕೊಂಡು ಹೋಗುವ ಶಕ್ತಿಯಿದೆ. ಅವರೊಬ್ಬ ಮಾಸ್ ಲೀಡರ್. ಅವರಿಗೆ ಮತಗಳಾಗಿ ಪರಿವರ್ತಿಸುವ ಗಟ್ಟಿನಾಯಕತ್ವವಿದೆ. ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಶಕ್ತಿ ಸಾಮರ್ಥ್ಯ ಸರಿಯಾಗಿ ಬಳಕೆ ಮಾಡಲಿಲ್ಲ. ಹೀಗಾಗಿ ಜನ ತಕ್ಕ ಉತ್ತರ ನೀಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ: ಮಾಜಿ ಸಚಿವ ರೇಣುಕಾಚಾರ್ಯ
‘ಜೆಡಿಎಸ್ ಜತೆಗೆ ಮೈತ್ರಿ ವಿಚಾರ ರಾಷ್ಟ್ರೀಯ ನಾಯಕರ ತೀರ್ಮಾನ. ಯಡಿಯೂರಪ್ಪ ಅವರೊಂದಿಗೆ ಏನು ಚರ್ಚಿಸಿದ್ದಾರೋ ಗೊತ್ತಿಲ್ಲ. ಯಡಿಯೂರಪ್ಪ ಅವರನ್ನು ಪ್ರಶ್ನಿಸುವಷ್ಟುದೊಡ್ಡವನು ನಾನಲ್ಲ. ಯಡಿಯೂರಪ್ಪ ಅವರೇ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ’ ಎಂದರು.