ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವುದು ನನ್ನ ಅಭಿಲಾಷೆಯಾಗಿದ್ದು, ಆಗುತ್ತಾರೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದರು.
ಕೊಪ್ಪಳ (ಅ.10): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವುದು ನನ್ನ ಅಭಿಲಾಷೆಯಾಗಿದ್ದು, ಆಗುತ್ತಾರೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಅಭಿಲಾಷೆ ಹೇಳುವುದಕ್ಕೆ ನಾನು ಬದ್ಧವಾಗಿದ್ದೇನೆ. ಈ ಹಿಂದೆಯೂ ಹೇಳಿದ್ದೆ. ಕಾಂಗ್ರೆಸ್ ಶಿಸ್ತಿನ ಪಕ್ಷ ಆಗಿದ್ದು, ಸಿಎಂ ಸ್ಥಾನದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರು ಸೇರಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಗುರಿ ಇಟ್ಟುಕೊಂಡು ಸಾಧನೆ ಮಾಡಿ
ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಉನ್ನತ ಸ್ಥಾನ ಅಲಂಕರಿಸಲು ಜೀವನದಲ್ಲಿ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ಪ್ರತಿ ವಿದ್ಯಾರ್ಥಿಯಲ್ಲೂ ಪ್ರತಿಭೆಗಳಿದ್ದು, ಅದನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ವಿದ್ಯಾರ್ಥಿಗಳು ವಿದ್ಯಾವಂತರಾಗಿ ಬುದ್ಧಿವಂತರಾದರೆ ಸಾಲದು. ಆರೋಗ್ಯ ವಂತರಾಗಿಯೂ ಇರಬೇಕು. ಇದಕ್ಕಾಗಿ ಆಟ ಮತ್ತು ಪಾಠವನ್ನು ಸಮಾನವಾಗಿ ತೆಗೆದುಕೊಂಡು ಹೋದರೆ ಆರೋಗ್ಯ ವಂತ ಜೀವನ ನಡೆಸಲು ಸಾಧ್ಯ ವಾಗಲಿದೆ ಎಂದು ಹೇಳಿದರು.
ಇಂದಿನ ಮಕ್ಕಳು ನಾಳೆ ಭವ್ಯ ಭಾರತದ ಭವಿಷ್ಯ ಕಟ್ಟುವವರು. ದೇಶಕ್ಕೆ ಬೇಕಾದ ವ್ಯಕ್ತಿಗಳಾಗಿ ಮಕ್ಕಳು ಬೆಳೆಯಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಸವಾಲುಗಳನ್ನು ಎದುರಿಸಿ ಮುನ್ನುಗ್ಗಬೇಕು. ಉನ್ನತ ಹುದ್ದೆ ಅಲಂಕರಿಸುವ ಗುರಿ ಹೊಂದಬೇಕು. ಗುರು-ಹಿರಿಯರನ್ನು ಗೌರವ ಭಾವದಿಂದ ಕಾಣಬೇಕು ಎಂದರು. ವಿದ್ಯಾರ್ಥಿ ಜೀವನ ಪ್ರಮುಖವಾದ ಘಟ್ಟ. ಇಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ವಿದ್ಯಾರ್ಥಿ ಜೀವನ ಸೂಕ್ಷ್ಮವಾಗಿರುವ ಕಾರಣ ಎಚ್ಚರಿಕೆ ಯಿಂದ ಇರಬೇಕು. ಪ್ರಪಂಚದಲ್ಲಿ ಕೋಟಿ ಜನರು ಹುಟ್ಟುತ್ತಾರೆ, ಸಾಯುತ್ತಾರೆ. ಈ ಅವಧಿಯಲ್ಲಿ ಸಮಾಜಕ್ಕಾಗಿ ಏನಾದರು ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಅಕ್ಷರ ಜ್ಞಾನ ಪಡೆದು ಉನ್ನತ ಸ್ಥಾನ ಅಲಂಕರಿಸಿದರೆ ಇಡೀ ಸಮಾಜ ಗೌರವ ಕೊಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು ಮಾತನಾಡಿ, ವಿದ್ಯಾರ್ಥಿಗಳು ದೇಶದ ಭಾವಿ ಪ್ರಜೆಗಳಾಗಿದ್ದು. ನಿಮ್ಮ ಆಲೋಚನೆಯಂತೆ ದೇಶ ನಿರ್ಮಾಣವಾಗುತ್ತದೆ. ಹಾಗಾಗಿ ನೀವೆಲ್ಲರು ದುಷ್ಟ ಶಕ್ತಿಗಳಿಂದ ಎಚ್ಚರಿಕೆಯಿಂದ ಇದ್ದು, ಕೋಮು ಸೌಹಾರ್ದತೆ ಕಾಪಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಮಾತನಾಡಿ, ರಾಮನಗರ ಕ್ಷೇತ್ರದಲ್ಲಿ ಅನೇಕ ಶಾಸಕರನ್ನು ನೋಡಿದ್ದೇವೆ. ಆದರೆ ಇಕ್ಬಾಲ್ ಹುಸೇನ್ ಅವರಂತಹ ಕ್ರಿಯಾಶೀಲ ಶಾಸಕ ಮತ್ತೊಬ್ಬರಿಲ್ಲ ಎಂದರು.
