ಬಿಜೆಪಿ ಕಾಲದ 21 ಹಗರಣಗಳ ತನಿಖೆ: ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ನಡೆಸುತ್ತಿರುವ ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು ನೀಡಲು ಮುಂದಾಗಿದ್ದು, ಬಿಜೆಪಿ ಅಧಿಕಾರಾವಧಿಯ 21 ಹಗರಣಗಳ ತನಿಖೆ ನಡೆಸುವುದಾಗಿ ಪ್ರಕಟಿಸಿದ್ದಾರೆ.
ವಿಧಾನಸಭೆ (ಜು.20): ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ನಡೆಸುತ್ತಿರುವ ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು ನೀಡಲು ಮುಂದಾಗಿದ್ದು, ಬಿಜೆಪಿ ಅಧಿಕಾರಾವಧಿಯ 21 ಹಗರಣಗಳ ತನಿಖೆ ನಡೆಸುವುದಾಗಿ ಪ್ರಕಟಿಸಿದ್ದಾರೆ.
ಶುಕ್ರವಾರ ಸದನದಲ್ಲಿ ಪ್ರತಿಪಕ್ಷ ಬಿಜೆಪಿ-ಜೆಡಿಎಸ್(BJP JDS) ಧರಣಿ ನಡುವೆಯೇ ವಾಲ್ಮೀಕಿ ಅಭಿವೃದ್ಧಿ ನಿಗಮ(Valmiki corporation scam)ದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಮುಖ್ಯಮಂತ್ರಿಯ ಹೆಸರಿಗೆ ಮಸಿ ಬಳಿಯುವುದು ಮತ್ತು ಸರ್ಕಾರ ಎಸ್‌ಸಿ/ಎಸ್‌ಟಿ ವಿರುದ್ಧ ಇದೆ ಎಂದು ಬಿಂಬಿಸುವುದು ಬಿಜೆಪಿಯ ಹುನ್ನಾರವಾಗಿದೆ.
ಹಗರಣಗಳ ನಡುವೆ ಸಿಎಂ ಸಿದ್ದರಾಮಯ್ಯಗೆ ಸ್ವಪಕ್ಷ ಶಾಸಕರ ಅಸಮಾಧಾನದ ಬಿಸಿ!
ಬಿಜೆಪಿ ಆಡಳಿತದ ಅವಧಿಯಲ್ಲಿ ಯಾವ ಯಾವ ನಿಗಮಗಳಲ್ಲಿ ಎಷ್ಟೆಲ್ಲಾ ಭ್ರಷ್ಟಾಚಾರ ನಡೆದಿದೆ ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(bs yadiyurappa) ಮತ್ತು ಬಸವರಾಜ ಬೊಮ್ಮಾಯಿ(Basavaraj bommai) ನೇತೃತ್ವದ ಆಡಳಿತದಲ್ಲಿ 21 ಭ್ರಷ್ಟಾಚಾರಗಳು ನಡೆದಿವೆ. ಅವುಗಳ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದರು.
ಸಂವಿಧಾನ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಿಜೆಪಿ ದಮನಿತ ಸಮುದಾಯಗಳ ವಿರುದ್ಧ ಇದೆ. ಬಿಜೆಪಿಯೇ ಭ್ರಷ್ಟಾಚಾರಗಳ ಪಿತಾಮಹ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದೆ. ಇಂತಹ ಪಕ್ಷದವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಇದಕ್ಕಿಂತ ದುರಂತ ಬೇರೆ ಇಲ್ಲ. ಪ್ರತಿಪಕ್ಷದವರು ತಮ್ಮ ಅಜೆಂಡಾ ಸಾಧಿಸಿಕೊಳ್ಳಲು ಯಾವ ಸುಳ್ಳನ್ನು ಬೇಕಾದರೂ ನಿಜ ಎಂಬುದಾಗಿ ಹೇಳಬಲ್ಲರು ಎನ್ನುವುದು ಇಲ್ಲಿ ಸಾಬೀತಾಗಿದೆ. ಬಿಜೆಪಿ ಆಡಳಿತಾವಧಿಯಲ್ಲಿಯೂ ಸಾಕಷ್ಟು ಅಕ್ರಮಗಳು ನಡೆದಿದ್ದು, ಬಿಜೆಪಿ ಅವಧಿಯ ಎಲ್ಲಾ ಹಗರಣಗಳನ್ನು ತನಿಖೆಗೆ ಒಪ್ಪಿಸುತ್ತೇವೆ ಎಂದು ಹೇಳಿದರು.
ಇದೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಈ ಹಿಂದೆಯೂ ಹಗರಣಗಳಾಗಿವೆ. ಆ ಹಗರಣಗಳನ್ನು ಹೊರತರುವ ಕೆಲಸವನ್ನು ಮಾಡುತ್ತೇವೆ. ನಿಗಮದಲ್ಲಿನ ಹಗರಣ ಸಂಬಂಧ ವಿವಿಧ ಆರೋಪಿಗಳಿಂದ 34.25 ಕೋಟಿ ರು. ವಸೂಲಿ ಮಾಡಲಾಗಿದೆ. ಈವರೆಗೆ ಸರ್ಕಾರವು 85.25 ಕೋಟಿ ರು. ವಿವಿಧ ಹಂತಗಳಲ್ಲಿ ವಶಕ್ಕೆ ಪಡೆದಿದೆ. ಉಳಿದದ್ದನ್ನು ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿರುವ ಹಗರಣದಲ್ಲಿ ಎಷ್ಟು ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದರು.
ಈಗಾಗಲೇ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು ಎಸ್ಐಟಿಗೆ ನೀಡಿದೆ. ಅಂತೆಯೇ ಸಿಬಿಐ ಹಾಗೂ ಇಡಿ ಸಂಸ್ಥೆಗಳೂ ಕೂಡ ತನಿಖೆ ನಡೆಸುತ್ತಿವೆ. ಹಗರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಹಾಗೂ ನಿಗಮದ ಖಾತೆಯಿಂದ ಯಾರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುತ್ತದೆ ಮತ್ತು ಇದರ ಮೂಲ ಫಲಾನುಭವಿಗಳು ಯಾರು ಎಂಬುದು ತನಿಖೆಯು ಪೂರ್ಣಗೊಂಡ ನಂತರವೇ ತಿಳಿಯುತ್ತದೆ. ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜೆ.ಜಿ.ಪದ್ಮನಾಭ, ಲೆಕ್ಕಾಧೀಕ್ಷಕ ಪರಶುರಾಮ್ ದುರ್ಗಣ್ಣನವರ್ ಅವರನ್ನು ಅಮಾನತ್ತು ಮಾಡಲಾಗಿದೆ. ಅಲ್ಲದೇ, ಎಸ್ಐಟಿ ಅವರನ್ನು ಬಂಧಿಸಿದೆ. ಹಾಗೆಯೇ, ಬ್ಯಾಂಕಿನ ಸಿಬ್ಬಂದಿಯನ್ನು ಸಹ ಬಂಧಿಸಲಾಗಿದೆ. ಇನ್ನು, ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿ ವಿಚಾರಣೆ ಎದುರಿಸುತ್ತಿದ್ದು, ಇಡಿ ಅವರನ್ನು ಬಂಧಿಸಿದೆ ಎಂದು ಹೇಳಿದರು.
ಹಣಕಾಸು ಇಲಾಖೆ ಪಾತ್ರ ಇಲ್ಲ:
ವಾಲ್ಮೀಕಿ ಹಗರಣದಲ್ಲಿ ಹಣಕಾಸು ಇಲಾಖೆಯ ಯಾವುದೇ ಪಾತ್ರ ಇರುವುದಿಲ್ಲ. ಬಜೆಟ್‌ನಲ್ಲಿ ಹೇಳಿರುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ನಿಗಮಕ್ಕೆ ನಾಲ್ಕು ಕಂತುಗಳಲ್ಲಿ ಅನುದಾನ ಬಿಡುಗಡೆ ಮಾಡಿದೆ. ಆಡಳಿತ ಇಲಾಖೆಯ ಆದೇಶದ ನಂತರ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಮನವಿ ಮೇರೆಗೆ ಖಜಾನೆಯಿಂದ ನಿಗಮದ ಖಾತೆಗೆ ಜಮೆ ಮಾಡಲಾಗಿರುತ್ತದೆ. ಯಾವುದೇ ನಿಗಮದಲ್ಲಿ ಖಾತೆ ತೆರೆಯುವುದು, ವರ್ಗಾಯಿಸುವುದು ಮತ್ತು ತಮಗೆ ಬಿಡುಗಡೆಯಾದ ಅನುದಾನಗಳನ್ನು ಸಮರ್ಪಕ ರೀತಿಯಲ್ಲಿ ಜನರ ಕಲ್ಯಾಣಕ್ಕೆ ಬಳಸುವುದು ನಿಗಮದ ಮುಖ್ಯಸ್ಥರಾದ ವ್ಯವಸ್ಥಾಪಕ ನಿರ್ದೇಶಕರ ಜವಾಬ್ಧಾರಿಯಾಗಿರುತ್ತದೆ. ಹೀಗಾಗಿ ಹಣಕಾಸು ಇಲಾಖೆಯ ಪಾತ್ರ ಇರುವುದಿಲ್ಲ. ಪ್ರತಿಪಕ್ಷಗಳು ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
6-7 ವರ್ಷಗಳಿಂದ ಬ್ಯಾಂಕಿಂಗ್ ಹಗರಣ:
ಕಳೆದ 6-7 ವರ್ಷಗಳಿಂದ ದೇಶದಲ್ಲಿ ಬ್ಯಾಂಕಿಂಗ್ ಹಗರಣಗಳು ಪ್ರಾರಂಭವಾಗಿದ್ದು, ರಾಜ್ಯದಲ್ಲಿ ಹಗರಣಗಳ ಸರಮಾಲೆಯನ್ನು ಬ್ಯಾಂಕ್‌ಗಳು ನಡೆಸಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಹಗರಣಗಳನ್ನು ನಡೆಸಿರುವ ಯೂನಿಯನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮತ್ತು ಇನ್ನಿತರೆ ಬ್ಯಾಂಕುಗಳು ಕೇಂದ್ರದ ಅಧೀನದಲ್ಲಿ ಬರುತ್ತವೆ. ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾಗಿದ್ದು, ಅವರ ಅಧೀನದಲ್ಲಿ ಬರುವುದಿಲ್ಲವೇ? ಎಂದು ಕಿಡಿಕಾರಿದರು.
ಮುಡಾ ಹಗರಣ ಬಯಲಿಗೆಳೆದ ಆರ್‌ಟಿಐ ಕಾರ್ಯಕರ್ತನ ಮೇಲೆ ಎಫ್‌ಐಆರ್; ಕಾಂಗ್ರೆಸ್ ನಡೆಗೆ ಹೆಚ್‌ಡಿಕೆ ಕಿಡಿ
ಕೇಂದ್ರ ಸರ್ಕಾರ ಆಯ್ಕೆ ಮಾಡಿ ಕಾರ್ಯಾಚರಣೆ ಕೈಗೊಂಡಿರುವುದರಿಂದ ಹಗರಣಗಳು ಹೆಚ್ಚಾಗುತ್ತಿವೆಯೇ ಹೊರತು, ಕಡಿಮೆಯಾಗುತ್ತಿಲ್ಲ. ಪ್ರತಿಪಕ್ಷಗಳ ಮುಖಂಡರ ವಿರುದ್ಧ ಹಗರಣಗಳ ಆರೋಪಗಳಿದ್ದರೆ, ಅವರನ್ನು ಬಿಜೆಪಿಗೆ ಸೇರಿಸಿಕೊಂಡ ನಂತರವೇ ಹಗರಣ ಮುಕ್ತ ಮಾಡಲಾಗುತ್ತಿದೆ ಎಂದು ತಿಳಿಸಿದರು.