ಸಿಎಂ ಸಿದ್ದರಾಮಯ್ಯ ಕುಟುಂಬದ ಮೂಡಾ ನಿವೇಶನ ಹಂಚಿಕೆ ಹಗರಣ ಬಯಲಿಗೆಳೆದ ಆರ್‌ಟಿಐ ಕಾರ್ಯಕರ್ತನ ಮೇಲೆ ಎಫ್‌ಐಆರ್ ದಾಖಲಿಸಿದ್ದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರು (ಜು.19): ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆಸಿದ ಸೈಟು ಹಂಚಿಕೆ ಮಾಡಿದ ಹಗರಣವನ್ನು ಬಯಲಿಗೆಳೆದ ಆರ್‌ಟಿಐ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಗಳು ಪೊಲೀಸ್ ಕಂಪ್ಲೇಂಟ್ ಕೊಟ್ಟು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಹಗರಣಗಳನ್ನು ಪ್ರಶ್ನಿಸಿದ ಪ್ರತಿಪಕ್ಷಗಳನ್ನು ವಿಧಾನಮಂಡಲದಲ್ಲಿ ಹತ್ತಿಕ್ಕಲಾಯಿತು! ಸತ್ಯಶೋಧನೆಯಲ್ಲಿ ನಿರತರಾದ RTI ಕಾರ್ಯಕರ್ತರನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ದಮನ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಕುಟುಂಬ ಮೈಸೂರಿನ ಮೂಡಾದಲ್ಲಿ ನಡೆಸಿರುವ ಬದಲಿ ನಿವೇಶನ ಹಗರಣವನ್ನು ಬಯಲಿಗೆಳೆದ RTI ಕಾರ್ಯಕರ್ತರನ್ನು ಕಾಂಗ್ರೆಸ್ ಗುರಿ ಮಾಡಿಕೊಂಡಿದೆ. ಆರೋಪಿತ ಸ್ಥಾನದಲ್ಲಿರುವ ಸಿಎಂ ಪರಿವಾರವನ್ನು ರಕ್ಷಿಸುವ ಏಕೈಕ ದುರುದ್ದೇಶದಿಂದ ಕಾಂಗ್ರೆಸ್ಸಿಗರು RTI ಕಾರ್ಯಕರ್ತರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತಿದೆ ಈ ನಾಟಕ.
ಎಚ್‌ಡಿಕೆ ಸಿಎಂ ಆಗಿದ್ದಾಗ ಅರ್ಜಿ ಸಲ್ಲಿಸಿ ಮುಡಾ ಬದಲಿ ನಿವೇಶನ ಪಡೆದಿದ್ದಾರೆ: ಕಾಂಗ್ರೆಸ್ ಆರೋಪ
ಪೊಲೀಸ್ ಬಲ ಬಳಸಿ ಸತ್ಯದ ಕತ್ತು ಹಿಚುಕಲು ಸಾಧ್ಯವೇ ಇಲ್ಲ. ಹಾದಿಬೀದಿಯಲ್ಲಿ ಜನರ ಕೈಗೆ ಸಿಕ್ಕಿರುವ ದಾಖಲೆಗಳೇ ಮೂಡಾ ಹಗರಣದ 'ಅಸಲಿ ಕೈ' ಯಾವುದು ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ. ಹಾಗಿದ್ದ ಮೇಲೆ ಸತ್ಯವನ್ನು ಹೆಕ್ಕಿ ತೆಗೆದ RTI ಕಾರ್ಯಕರ್ತರ ಮೇಲೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ದೂರು ನೀಡಿರುವ ಪ್ರಸಂಗ ಹೇಗಿದೆ ಎಂದರೆ; ಬದಲಿ ನಿವೇಶನ ಫಲಾನುಭವಿಗಳು ಪರೋಕ್ಷವಾಗಿ ಸತ್ಯ ಒಪ್ಪಿಕೊಂಡಂತೆ ಆಗಿದೆ. ಅಷ್ಟೇ ಅಲ್ಲ; RTI ಕಾರ್ಯಕರ್ತರ ಟಾರ್ಗೆಟ್ ಮಾಡಿದಷ್ಟು ಮೂಡಾದ ಮೂಲೆಮೂಲೆಗಳಲ್ಲಿ ಮುಗ್ಗುತ್ತಿರುವ ಸತ್ಯಗಳು ಮತ್ತಷ್ಟು ವ್ಯಘ್ರವಾಗಿ ಹೂಂಕರಿಸುತ್ತವೆ. ಇಂಥ ವ್ಯರ್ಥ ಕೆಲಸ ಬಿಟ್ಟು ಮರ್ಯಾದೆಯಿಂದ ಸತ್ಯವನ್ನು ಎದುರಿಸುವುದು ಸಿಎಂ ಆದವರಿಗೆ ಶೋಭೆ ತರುತ್ತದೆ' ಎಂದು ಪೋಸ್ಟ್ ಹಂಚಿಕೊಂಡು ಕಿಡಿಕಾರಿದ್ದಾರೆ.
ಉತ್ತರ ಕನ್ನಡ ಭೂಕುಸಿತದ ಪ್ರಾಣಹಾನಿಗೆ ಸಂತಾಪ ಸೂಚಿಸಿದ್ದ ಕುಮಾರಸ್ವಾಮಿ:
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕು ಶಿರೂರು ಬಳಿ ಹೆದ್ದಾರಿಯಲ್ಲಿ ಭೂಕುಸಿತಕ್ಕೆ ಸಿಲುಕಿ ಇಬ್ಬರು ಮಕ್ಕಳು ಸೇರಿ ಹಲವರು ಸಾವನ್ನಪ್ಪಿರುವ ಧಾರುಣ ಘಟನೆ ನನಗೆ ತೀವ್ರ ಆಘಾತ ಉಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ಆ ಕುಟುಂಬಗಳಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈಗಾಗಲೇ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತನಾಡಿ; ಪರಿಹಾರ ಕಾರ್ಯ, ಮೃತರ ಕುಟುಂಬಗಳಿಗೆ ನೆರವು ಇತ್ಯಾದಿ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ.
ಎಚ್‌ಡಿಕೆ ಕಾವೇರಿ ಸಮಸ್ಯೆ ಪರಿಹರಿಸಿದರೆ ನಾನು ಮುಂದಿನ ಚುನಾವಣೆಗೇ ನಿಲ್ಲಲ್ಲ: ಸಚಿವ ಚಲುವರಾಯಸ್ವಾಮಿ
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇನ್ನೂ ಹಲವೆಡೆ ಭೂಕುಸಿತವಾಗುವ ಆತಂಕವಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿ ಬದಿ ಸಣ್ಣಪುಟ್ಟ ಗೂಡಂಗಡಿ, ಹೋಟೆಲ್ ಇಟ್ಟುಕೊಂಡು ಬದುಕು ಕಟ್ಟಿಕೊಂಡಿರುವ ಜನತೆಯಲ್ಲಿ ನನ್ನ ಕಳಕಳಿಯ ಮನವಿ. ಮಳೆಗಾಲ, ಇನ್ನಿತರೆ ಅಪಾಯಕಾರಿ ಸಂದರ್ಭಗಳಲ್ಲಿ ಭೂ ಕುಸಿತದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು. ರಸ್ತೆಬದಿ ಗುಡ್ಡಗಳ ಕೆಳಗೆ ವಾಸಿಸುವ, ಸಣ್ಣಪುಟ್ಟ ವ್ಯಾಪಾರ ಮಾಡಿಕೊಳ್ಳುವವರು ಆದಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ನನ್ನ ಮನವಿ ಮಾಡಿದ್ದಾರೆ.
