ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ 40 ಪರ್ಸೆಂಟ್‌ ಹಗರಣವನ್ನು ಹೈಕೋರ್ಟ್‌ ನಿವೃತ್ತ ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. 

ಬೆಂಗಳೂರು (ಜು.06): ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ 40 ಪರ್ಸೆಂಟ್‌ ಹಗರಣವನ್ನು ಹೈಕೋರ್ಟ್‌ ನಿವೃತ್ತ ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಈ ಮೊದಲು ಹಿರಿಯ ಪೊಲೀಸ್‌ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ದಳ ರಚನೆಗೆ ನಿರ್ಧರಿಸಲಾಗಿತ್ತು. ಆದರೆ, ಈ ಬಗ್ಗೆ ಮತ್ತೆ ಕಾನೂನು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾ.ಬಿ. ವೀರಪ್ಪ ನೇತೃತ್ವದಲ್ಲಿ ನ್ಯಾಯಾಂಗ ಆಯೋಗ ರಚನೆಗೆ ನಿರ್ಧರಿಸಿದ್ದಾರೆ. 

ಆಯೋಗಕ್ಕೆ ನಿಬಂಧನೆ ಹಾಗೂ ಗಡುವು ನಿರ್ಧರಿಸುವ ಬಗ್ಗೆಯೂ ಚರ್ಚಿಸಿದ್ದು, ಈ ಬಗ್ಗೆ ಕಾನೂನು ಇಲಾಖೆ ಪರಿಶೀಲನೆ ನಡೆಸುತ್ತಿರುವುದಾಗಿ ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ರಾಜ್ಯದಲ್ಲಿ ಪ್ರತಿ ಕಾಮಗಾರಿಯಲ್ಲಿ 40 ಪರ್ಸೆಂಟ್‌ ಕಮಿಷನ್‌ ಕೇಳಲಾಗುತ್ತಿದೆ ಎಂದು ಆರೋಪಿಸಿದ್ದರು. ಆಗ ಪ್ರಧಾನಮಂತ್ರಿ ಕಚೇರಿಯಿಂದ ಯಾವುದೇ ಕ್ರಮ ಆಗಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌ ಸರಣಿ ಪ್ರತಿಭಟನೆಗಳ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಯತ್ನಿಸಿತ್ತು. 

ತಮಿಳುನಾಡಿಗೆ ನೀರು ಕೊಡಲಾಗದು ಎಂದು ಹೇಳಿ: ರಾಜ್ಯ ಸರ್ಕಾರಕ್ಕೆ ಸಂಸದ ಪ್ರತಾಪ್‌ ಸಿಂಹ ಆಗ್ರಹ

ಇದಕ್ಕಾಗಿ 40% ಸರ್ಕಾರದ ಹೆಸರಿನಲ್ಲಿ ಸರಣಿ ಜಾಹೀರಾತು, ಭಿತ್ತಿಪತ್ರ ಪ್ರಕಟಿಸಿತ್ತು. ಜತೆಗೆ ಪೇ-ಸಿಎಂ ಹೆಸರಿನಲ್ಲಿ ಪೋಸ್ಟರ್‌ ಅಂಟಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಚರ್ಚೆಯಾಗುವಂತೆ ಮಾಡಲು ಯಶಸ್ವಿಯಾಗಿತ್ತು. ಇದೀಗ ಬಿಜೆಪಿಯವರಿಂದಲೇ 40 ಪರ್ಸೆಂಟ್‌ ಕಮಿಷನ್‌ ಸಾಬೀತುಪಡಿಸುವ ಸವಾಲು ಕೇಳಿ ಬರುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 40 ಪರ್ಸೆಂಟ್‌ ವಿಚಾರದಲ್ಲಿ ತನಿಖೆ ನಡೆಸಲು ನಿರ್ಧರಿಸಿದ್ದು, ಆಯೋಗ ನೀಡುವ ವರದಿಯ ಆಧಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದು ಶೇ.60 ಕಮಿಷನ್‌ ಸರ್ಕಾರ: ರಾಜ್ಯದ ಕಾಂಗ್ರೆಸ್‌ ಸರ್ಕಾರ ಶೇ.60 ಕಮಿಷನ್‌ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಆಪಾದಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಇದೇ ಕಾಂಗ್ರೆಸ್‌ನವರು ಶೇ.40 ಕಮಿಷನ್‌ ಆರೋಪ ಮಾಡಿದರು. ಆದರೆ, ಈಗಷ್ಟೇ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷ ಈಗಾಗಲೇ ಅಂಗಡಿ ವ್ಯಾಪಾರ ಆರಂಭಿಸಿದೆ. 

ಸಾಮಾನ್ಯ ಜನರ ನೋವಿಗೂ ಸ್ಪಂದಿಸುವ ಸಂಸದ ಸಿದ್ದೇಶ್ವರ: ಯಡಿಯೂರಪ್ಪ ಬಣ್ಣನೆ

ಇದು ಪಕ್ಕಾ ಶೇ.60 ಕಮಿಷನ್‌ ಸರ್ಕಾರ. ನಾವು ಕಾದು ನೋಡುತ್ತೇವೆ’ ಎಂದರು. ‘ವರ್ಗಾವಣೆ ದಂಧೆ ಆರಂಭವಾಗಿದೆ. ತಡೆ ಹಿಡಿದಿರುವ ಕಾಮಗಾರಿಗಳಿಗೂ ಕಮೀಷನ್‌ ಕೇಳುತ್ತಿದ್ದಾರೆ’ ಎಂದು ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಆರೋಪಗಳ ಬಗ್ಗೆ ತನಿಖೆ ಮಾಡಿ ಬಹಿರಂಗಪಡಿಸಲಿ. ನಮ್ಮ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಿದರೇ ಹೊರತು ಒಂದೇ ಒಂದು ಆರೋಪ ಸಂಬಂಧ ಲೋಕಾಯುಕ್ತಕ್ಕೆ ದೂರು ಕೊಡಲಿಲ್ಲ. ಈಗ ಅವರದೇ ಸರ್ಕಾರವಿದೆ. ಎಲ್ಲವನ್ನೂ ತನಿಖೆ ಮಾಡಿಸಲಿ’ ಎಂದು ಸವಾಲು ಹಾಕಿದರು.