ಕಾರ್ಮಿಕ ಇಲಾಖೆಯಲ್ಲಿ ಅಕ್ರಮ ನಡೆದಿದ್ದರೆ ತನಿಖೆ: ಸಚಿವ ಸಂತೋಷ್ ಲಾಡ್
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಯಾವುದೇ ಅಕ್ರಮ, ಅವ್ಯವಹಾರಗಳು ನಡೆದಿದ್ದರೆ ಪರಿಶೀಲಿಸಲಾಗುವುದು. ಅಗತ್ಯ ಬಿದ್ದರೆ ತನಿಖೆ ನಡೆಸಲಾಗುವುದು ಎಂದು ನೂತನ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಬೆಂಗಳೂರು (ಜೂ.02): ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ಯಾವುದೇ ಅಕ್ರಮ, ಅವ್ಯವಹಾರಗಳು ನಡೆದಿದ್ದರೆ ಪರಿಶೀಲಿಸಲಾಗುವುದು. ಅಗತ್ಯ ಬಿದ್ದರೆ ತನಿಖೆ ನಡೆಸಲಾಗುವುದು ಎಂದು ನೂತನ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಸಚಿವರಾದ ಬಳಿಕ ತಮಗೆ ವಿಧಾನಸೌಧದಲ್ಲಿ ಹಂಚಿಕೆಯಾಗಿರುವ 342 ಮತ್ತು 342 ಎ ಕೊಠಡಿಗಳಿಗೆ ಗುರುವಾರ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಿವರಾಮ್ ಹೆಬ್ಬಾರ್ ಅವರು ಇಲಾಖಾ ಸಚಿವರಾಗಿದ್ದಾಗ ಕಾರ್ಮಿಕರಿಗೆ ಕೋವಿಡ್ ಪರಿಹಾರ ಹಂಚಿಕೆಯಲ್ಲಿ ಅವ್ಯವಹಾರದ ಆರೋಪಗಳಿವೆಯಲ್ಲಾ ಎಂಬ ಪ್ರಶ್ನೆಗೆ, ಈಗಾಗಲೇ ನಮ್ಮ ಮುಖ್ಯಮಂತ್ರಿ ಅವರು ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿರುವ ಅಕ್ರಮಗಳ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ನಮ್ಮ ಇಲಾಖೆಯಲ್ಲೂ ಅಕ್ರಮಗಳು ನಡೆದಿರುವುದನ್ನು ಪರಿಶೀಲಿಸಲಾಗುವುದು. ಅನುಮಾನಗಳು ಬಂದರೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದರು. ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಕುರಿತ ಪ್ರಶ್ನೆಗೆ, ಈಗ ತಾನೆ ಇಲಾಖಾ ಅಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಿ ಇಲಾಖಾ ವಿಚಾರಗಳ ಪ್ರಗತಿ ಪರಿಶೀಲನೆ ಆರಂಭಿಸಿದ್ದೇನೆ. ಉದ್ಯೋಗ ಮೀಸಲಾತಿ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಕಾನೂನಿಗೆ ಅಗತ್ಯ ತಿದ್ದುಪಡಿ ತರುವ ಕೆಲಸ ಮಾಡಬೇಕಾಗುತ್ತದೆ. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ವಹಿಸಲಾಗುವುದು. ಅದೇ ರೀತಿ ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗೆ ಅಗತ್ಯ ಕಾನೂನು ತಂದು ಅವರಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದರು.
ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು: ಶಾಸಕ ಹರೀಶ್ ಪೂಂಜ
ಕಾರ್ಮಿಕ ಇಲಾಖೆಗೆ ಬಲ ತುಂಬುವ ಕೆಲಸ ಮಾಡುವೆ: ಕಾರ್ಮಿಕ ಖಾತೆ ನೀಡಿದ್ದಕ್ಕೆ ಸಂತಸ ತಂದಿದೆ. ಬರುವ ದಿನಗಳಲ್ಲಿ ಕಾರ್ಮಿಕರ ಸಮಸ್ಯೆ ಆಲಿಸಿ ಕಾರ್ಮಿಕ ಇಲಾಖೆಗೆ ಬಲ ತುಂಬುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ನುಡಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಕಾರ್ಯ ಪ್ರಗತಿಯಲ್ಲಿದೆ. ಜೂ.1ರಂದು ಸರ್ಕಾರದ ಕ್ಯಾಬಿನೆಟ್ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚಿಸಿ ಜಾರಿಗೆ ತರುವ ವಿಶ್ವಾಸ ವ್ಯಕ್ತಪಡಿಸಿದರು.
ಮುದ್ದಾದ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ತಂದೆ: ಕಾರಣವೇನು ಗೊತ್ತಾ?
ತಾಲೂಕಿನಲ್ಲಿ ಹೊಸತನದ ಅಭಿವೃದ್ಧಿ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸುತ್ತೇನೆ. ನಾನು ಈಗ ಭರವಸೆ ನೀಡುವುದಿಲ್ಲ. ಕೆಲಸ ಮಾಡಿ ತೋರಿಸುತ್ತೇನೆ ಎಂದರು. ತಾಲೂಕು ಕ್ರೀಡಾಂಗಣ ನಿರ್ಮಾಣದ ಜಾಗದ ಸಮಸ್ಯೆಯಿಂದ ಉಳಿದಿದೆ. ಜಾಗ ಗುರುತಿಸಿ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ ಎಂದರು. ಜಿಲ್ಲಾ ಉಸ್ತುವಾರಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅದು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ. ಅವರು ರಾಜ್ಯದ ಯಾವ ಜಿಲ್ಲೆ ಕೊಟ್ಟರೂ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಉಸ್ತುವಾರಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಎಸ್.ಆರ್. ಪಾಟೀಲ, ಮಂಜುನಾಥ ಮುರಳ್ಳಿ, ಬಾಬು ಅಂಚಟಗೇರಿ, ನರೇಶ ಮಲೆನಾಡು ಇದ್ದರು.