ಬಿಜೆಪಿ ಅವಧಿ ಎಲ್ಲಾ ಅಕ್ರಮ ಬಯಲಿಗೆ ಬರಲಿವೆ: ಶಾಮನೂರು ಎಚ್ಚರಿಕೆ!
ಸಕ್ಕರೆ ಕಂಪನಿ ಸ್ಥಾಪಿಸಲು ಸ್ವಾಧೀನಪಡಿಸಿಕೊಂಡಿದ್ದ 200 ಎಕರೆಗೂ ಅಧಿಕ ಭೂಮಿಯನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಮ್ಮ ಹೆಸರಿಗೆ ಮಾಡಿಕೊಂಡಿದ್ದು, ಭೀಮಸಮುದ್ರದ ಮೂಲಕ ಸಾಗುವ ಅದಿರು ಲಾರಿಗಳಿಂದ ಪ್ರತಿ ಲಾರಿಗೆ 250 ರು. ವಸೂಲು ಮಾಡಿದ್ದು ಸೇರಿ ಎಲ್ಲಾ ಅಕ್ರಮ, ಹಗರಣಗಳ ಕಾಂಗ್ರೆಸ್ ಸರ್ಕಾರ ಬಯಲಿಗೆಳೆಯಲಿದೆ ಎಂದು ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆ (ಆ.4) : ಸಕ್ಕರೆ ಕಂಪನಿ ಸ್ಥಾಪಿಸಲು ಸ್ವಾಧೀನಪಡಿಸಿಕೊಂಡಿದ್ದ 200 ಎಕರೆಗೂ ಅಧಿಕ ಭೂಮಿಯನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಮ್ಮ ಹೆಸರಿಗೆ ಮಾಡಿಕೊಂಡಿದ್ದು, ಭೀಮಸಮುದ್ರದ ಮೂಲಕ ಸಾಗುವ ಅದಿರು ಲಾರಿಗಳಿಂದ ಪ್ರತಿ ಲಾರಿಗೆ 250 ರು. ವಸೂಲು ಮಾಡಿದ್ದು ಸೇರಿ ಎಲ್ಲಾ ಅಕ್ರಮ, ಹಗರಣಗಳ ಕಾಂಗ್ರೆಸ್ ಸರ್ಕಾರ ಬಯಲಿಗೆಳೆಯಲಿದೆ ಎಂದು ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ನಗರದ ವೀರ ಮದಕರಿ ನಾಯಕ ವೃತ್ತದಲ್ಲಿ ಗುರುವಾರ ಎಲ್.ಬಿ.ಕೆ. ಟ್ರಸ್ಟ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮದಿನ, ಬಡವರಿಗೆ ಅನ್ನ ಸಂತರ್ಪಣೆ, ವೃದ್ಧರಿಗೆ ಬ್ಲಾಂಕೆಟ್ ವಿತರಣೆ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಾದ ಎಲ್ಲ ಅಕ್ರಮ, ಭ್ರಷ್ಟಾಚಾರಗಳು ಈಗ ಒಂದೊಂದಾಗಿ ಬಯಲಿದೆ ಬರುತ್ತಿದೆ. ಸಂಸದ ಸಿದ್ದೇಶ್ವರ ಮೂರೂ ಜಿಲ್ಲೆಯಲ್ಲೂ ಅಕ್ರಮ ಮಾಡಿದ್ದಾರೆ. ಕೇವಲ ಎರಡೂವರೆ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಯಾಗಿದ್ದ ಕುಂದುವಾಡ ಕೆರೆಯನ್ನು ಬಿಜೆಪಿಯವರು 15 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ದೊಡ್ಡ ಭ್ರಷ್ಟಾಚಾರ ಎಸಗಿದ್ದಾರೆ. ದಾವಣಗೆರೆ ನಗರ, ಜಿಲ್ಲೆಯಲ್ಲೂ ಆಗಿರುವ ಅಕ್ರಮಗಳ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗೆದ್ದೆವೆಂದು ಮೈಮರೆಯದೇ, ಲೋಕಸಭೆ ಗುರಿ ಇರಲಿ: ಕೈ ಕಾರ್ಯಕರ್ತರಿಗೆ ಶಾಮನೂರು ಸಲಹೆ
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನಾವು ನೀಡಿದ್ದ ಐದೂ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿಯಡಿ ಮನೆ ಯಜಮಾನಿಗೆ 2 ಸಾವಿರ ರು., ಗೃಹಜ್ಯೋತಿಯಡಿ ಉಚಿತ ವಿದ್ಯುತ್ ಭರವಸೆ ಸಾಕಾರಗೊಂಡಿವೆ. ಉಳಿದೆರೆಡು ಗ್ಯಾರಂಟಿ ಭರವಸೆ ಶೀಘ್ರವೇ ಅನುಷ್ಠಾನಗೊಳ್ಳಲಿವೆ. ಮೂರು ಮಹತ್ವದ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಸಿದ್ದರಾಮಯ್ಯ ಕಾಂಗ್ರೆಸ್‌ನ ಗ್ಯಾರಂಟಿ ಭರವಸೆ ಜಾರಿಗೊಳ್ಳುವುದಿಲ್ಲವೆಂದು ಟೀಕಿಸುತ್ತಿದ್ದ ಬಿಜೆಪಿಯವರ ಬಾಯಿ ಮುಚ್ಚಿಸಿದ್ದಾರೆ ಎಂದು ಹೇಳಿದರು.
ಜನಪರ ಕಾಳಜಿ:
ಕಾಂಗ್ರೆಸ್ ಹಿರಿಯ ಮುಖಂಡ ಎಂ.ಟಿ.ಸುಭಾಶ್ಚಂದ್ರ ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು, ಮುಖ್ಯಮಂತ್ರಿ ಸಿದ್ದರಾಮಯ್ಯನಂತಹ ನಾಯಕರು ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಬಡವರು, ರೈತರ ಏಳಿಗೆಗಾಗಿ ಶ್ರಮಿಸಿದವರು. ಆದರೆ, ನಾಯಕರ ಜನಪರ ಕಾಳಜಿ, ಮಾನವೀಯ ಮೌಲ್ಯಗಳನ್ನು ಗುರುತಿಸಿ, ಅಭಿಮಾನದಿಂದ ಪ್ರತಿ ವರ್ಷ ಜನ್ಮದಿನ ಆಚರಿಸುವ ಅಭಿಮಾನಿಗಳೂ ಇದ್ದಾರೆ. ಅಂತಹವರಲ್ಲಿ ಬಿ.ವೀರಣ್ಣ ಒಬ್ಬರು ಎಂದು ಶ್ಲಾಘಿಸಿದರು.
ಟ್ರಸ್ಟ್ ಗೌರವಾಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷೆ ಲಕ್ಷ್ಮೀದೇವಿ ವೀರಣ್ಣ, ಮೇಯರ್ ವಿನಾಯಕ ಪೈಲ್ವಾನ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ವಕೀಲ ಎನ್.ಎಂ.ಆಂಜನೇಯ ಗುರೂಜಿ ಇತರರಿದ್ದರು. ಇದೇ ವೇಳೆ ಬಡವರು, ನಿರ್ಗತಿಕರಿಗೆ ಬೆಡ್ ಶೀಟ್ ವಿತರಿಸಿ, ಅನ್ನ ಸಂತರ್ಪಣೆ ಮಾಡಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಿದ್ದರಾಮಯ್ಯ ಅಭಿಮಾನಿಗಳು ಅಂಧ ಮಕ್ಕಳಿಗೆ ಹಣ್ಣು, ಹಂಪಲು, ಸಿಹಿ ವಿತರಿಸಿದರು.
ಬಿ.ಕೆ.ಹರಿಪ್ರಸಾದ್ ಹೇಳಿಕೆ ಬಗ್ಗೆ ನನಗೆ ಏನು ಗೊತ್ತಿಲ್ಲ: ಶಾಮನೂರು ಶಿವಶಂಕರಪ್ಪ
ಪ್ರಸ್ತುತ ದಿನಮಾನಗಳಲ್ಲಿ ರಾಜಕಾರಣದಲ್ಲಿ ಚೇಲಾಗಳು, ಹಿಂಬಾಲಕರು, ಬಕೆಟ್ ಹಿಡಿಯುವವರ ಸಂಸ್ಕೃತಿ ನಿಲ್ಲಬೇಕಿದೆ. ಎಲ್ಲಿವರೆಗೆ ಇಂತಹ ಚಮಚಗಳ ಸಂಸ್ಕೃತಿ ನಿಲ್ಲುವುದಿಲ್ಲವೋ, ಅಲ್ಲಿವರೆಗೆ ಪ್ರಾಮಾಣಿಕರಿಗೆ ಅವಕಾಶ ಇಲ್ಲದಂತಾಗುತ್ತದೆ. ರಾಜಕಾರಣದಲ್ಲಿರುವ ಇಂತಹ ಚಮಚಾಗಿರಿ ಮಾಡುವವರನ್ನು ಸ್ವಚ್ಛ ಮಾಡುವವರು ಯಾರು? ಭವಿಷ್ಯದ ಪೀಳಿಗೆ ಯಾರನ್ನು ಆದರ್ಶವಾಗಿಟ್ಟುಕೊಳ್ಳಬೇಕೆಂಬ ಬಗ್ಗೆಯೂ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಚಮಚಾಗಿರಿ ಸಂಸ್ಕೃತಿಗೆ ಇತಿಶ್ರೀ ಹಾಡುವ ಕೆಲಸ ಆಗಬೇಕಾಗಿದೆ.
ಎಂ.ಟಿ.ಸುಭಾಶ್ಚಂದ್ರ, ಕಾಂಗ್ರೆಸ್ ಮುಖಂಡ.
ಕಳೆದ 2 ದಶಕದಿಂದಲೂ ಪ್ರತಿ ವರ್ಷ ಹಿರಿಯ ನಾಯಕರಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನವನ್ನು ದಾವಣಗೆರೆಯಲ್ಲಿ ಆಚರಿಸುತ್ತ ಬರುತ್ತಿದ್ದೇವೆ. ಈ ಇಬ್ಬರ ಆಶೀರ್ವಾದವಿದ್ದರೆ ಮುಂದಿನ ದಿನಗಳಲ್ಲೂ ಆಚರಣೆ, ಸಮಾಜಮುಖಿ ಕಾರ್ಯ ಮುಂದುವರಿಸುತ್ತೇನೆ. ಕೊರೋನಾ ಸಂಕಷ್ಟದ ವೇಳೆ ತಮ್ಮ ಟ್ರಸ್ಟ್‌ನಿಂದ ಸಾವಿರಾರು ಆರೋಗ್ಯ ಕಿಟ್ ವಿತರಣೆ, ಸಮಾಜಮುಖಿ ಕಾರ್ಯ ನಿರಂತರ ಮಾಡುತ್ತ ಬರುತ್ತಿದ್ದೇವೆ.
ಬಿ.ವೀರಣ್ಣ, ಗೌರವಾಧ್ಯಕ್ಷ, ಎಲ್‌ಬಿಕೆ ಟ್ರಸ್ಟ್.