Asianet Suvarna News Asianet Suvarna News

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರ ಕರವಸ್ತ್ರ ಹೆಕ್ಕಿಕೊಟ್ಟ ಪ್ರಧಾನಿ ಮೋದಿ!

ದೇಶದ 2ನೇ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡ ದ್ರೌಪದಿ ಮುರ್ಮು ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಎನಿಸಿಕೊಂಡಿದ್ದ ಪ್ರತಿಭಾ ಪಾಟೀಲ್‌ ಅನಾರೋಗ್ಯದ ನಡುವೆಯೂ ಆಗಮಿಸಿದ್ದರು. ಕಾರ್ಯಕ್ರಮದ ವೇಳೆ ಪ್ರತಿಭಾ ಪಾಟೀಲ್‌ ಅವರ ಕರವಸ್ತ್ರ (ಹ್ಯಾಂಡ್‌ಕರ್ಚೀಫ್‌) ನೆಲಕ್ಕೆ ಬಿದ್ದಿತ್ತು. ಈ ವೇಳೆ ಸ್ವತಃ ಪ್ರಧಾನಿ ಮೋದಿ ಅವರು ಕರ್ಚೀಫ್‌ ಅನ್ನು ಅವರಿಗೆ ಹೆಕ್ಕಿಕೊಟ್ಟರು.

Interesting video when PM Modi picked up the handkerchief of former President Pratibha Patil lying on the ground san
Author
Bengaluru, First Published Jul 26, 2022, 9:38 AM IST

ನವದೆಹಲಿ (ಜುಲೈ 26): ಪ್ರಧಾನಿ ನರೇಂದ್ರ ಮೋದಿ ಅವರ ಇಂಥ ವಿಡಿಯೋಗಳು ಹಾಗೂ ಚಿತ್ರಗಳು ಬರುತ್ತಲೇ ಇರುತ್ತವೆ. ವಯೋವೃದ್ಧರ ಕುರಿತಾಗಿ, ಬಡವರ ಕುರಿತಾಗಿ ಅವರು ಸಹಾನುಭೂತಿ ತೋರಿಸಿದ ಸಾಕಷ್ಟು ಚಿತ್ರಗಳಿವೆ. ಆದರೆ, ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರ ಕರವಸ್ತ್ರ ನೆಲಕ್ಕೆ ಬಿದ್ದಿತ್ತು. ಇದನ್ನು ನರೇಂದ್ರ ಮೋದಿ ಎತ್ತಿಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಅನಾರೋಗ್ಯದ ಕಾರಣ, ಪ್ರತಿಭಾ ಪಾಟೀಲ್‌ ಅವರಿಗೆ ಕರವಸ್ತ್ರವನ್ನು ಎತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವೇಳೆ ಪ್ರಧಾನಿ ಮೋದಿ ಅವರು ಸಹಾಯಕ್ಕೆ ಬಂದರು. ಜುಲೈ 25 ರಂದು, ಬಡಕಟ್ಟಿ ಜನಾಂಗದ ಮಹಿಳೆ ಭಾರತದ ಅತಿದೊಡ್ಡ ಸಾಂವಿಧಾನಿಕ ಹುದ್ದೆಗೆ ಅಧಿಕೃತವಾಗಿ ಪದಗ್ರಹಣ ಮಾಡಿದರು. ಇದರ ಸಂಪೂರ್ಣ ಸಮಾರಂಭ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ನಡೆಯಿತು. ದ್ರೌಪದಿ ಮುರ್ಮು ಅವರಿಗೆ  ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಪ್ರಮಾಣವಚನ ಬೋಧನೆ ಮಾಡಿದರು. ಮುರ್ಮು, ಭಾರತದ ಅತ್ಯಂತ ಕಿರಿಯ ರಾಷ್ಟ್ರಪತಿ ಮತ್ತು ಸ್ವಾತಂತ್ರ್ಯದ ನಂತರ ಜನಿಸಿದ ಭಾರತದ ಮೊದಲ ರಾಷ್ಟ್ರಪತಿ ಎನಿಸಿದ್ದಾರೆ. ದೇಶದ ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳು ಈ ಪದವಿಗೆ ಏರಿದ್ದು ಇದು ಮೊದಲ ಬಾರಿ, ಒಟ್ಟಾರೆಯಾಗಿ ರಾಷ್ಟ್ರಪತಿಯಾದ 2ನೇ ಮಹಿಳೆ ಇವರಾಗಿದ್ದಾರೆ. 

ಯಶವಂತ್‌ ಸಿನ್ಹಾರನ್ನು ಸೋಲಿಸಿ ರಾಷ್ಟ್ರಪತಿಯಾದ ದ್ರೌಪದಿ: ಜುಲೈ 18 ರಂದು ನಡೆದ ಮತದಾನದಲ್ಲಿ ಭಾರತದ 15 ನೇ ರಾಷ್ಟ್ರಪತಿ ಮುರ್ಮು ಅವರು ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಸೋಲಿಸಿದರು. ಜುಲೈ 21 ರಂದು ಮತ ಎಣಿಕೆ ಕಾರ್ಯ ನಡೆಯಿತು. ಮುರ್ಮು ಅವರ ಅಧಿಕಾರಾವಧಿಯು 2027ರ ಜುಲೈ 24ರವರೆಗೆ ಅಂದರೆ, ಐದು ವರ್ಷಗಳ ಕಾಲ ಇರುತ್ತದೆ. ಸಾಮಾನ್ಯವಾಗಿ ರಾಷ್ಟ್ರಪತಿಯ ನಿಯಮಗಳಲ್ಲಿ ಅವರನ್ನು ಮರು ಆಯ್ಕೆ ಮಾಡುವ ಅವಕಾಶ ಇರುತ್ತದೆ. ಆದರೂ, ಈವರೆಗೂ ದೇಶದ ರಾಷ್ಟ್ರಪತಿಯಾಗಿ ಎರಡು ಬಾರಿ ಆಯ್ಕೆಯಾದ ಏಕೈಕ ವ್ಯಕ್ತಿ ಡಾ. ಬಾಬು ರಾಜೇಂದ್ರ ಪ್ರಸಾದ್‌ ಮಾತ್ರ. ಪ್ರಮಾಣ ವಚನ ಸಮಾರಂಭದ ವೇಳೆ ಮುರ್ಮು, ಜೋಹರ್! ನಮಸ್ತೆ ! ಭಾರತದ ಎಲ್ಲಾ ನಾಗರಿಕರ ಭರವಸೆಗಳು ಮತ್ತು ಆಕಾಂಕ್ಷೆಗಳು ಮತ್ತು ಹಕ್ಕುಗಳ ಸಂಕೇತವಾಗಿರುವ ಈ ಪವಿತ್ರ ಸಂಸತ್ತಿನಿಂದ ನಾನು ಎಲ್ಲಾ ದೇಶವಾಸಿಗಳನ್ನು ನಮ್ರತೆಯಿಂದ ಅಭಿನಂದಿಸುತ್ತೇನೆ. ನಿಮ್ಮ ಬಾಂಧವ್ಯ, ವಿಶ್ವಾಸ ಮತ್ತು ನಿಮ್ಮ ಸಹಕಾರ ನನಗೆ ಬೇಕು ಎಂದು ಹೇಳಿದರು.

ಟಿಎಂಸಿ ಶಾಸಕ, ಸಂಸದರಿಂದಲೂ ದ್ರೌಪದಿ ಮುರ್ಮುಗೆ ಮತದಾನ..?

ವಿಶ್ವ ನಾಯಕರ ಅಭಿನಂದನೆ: ಚೀನಾ, ರಷ್ಯಾ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದ ಅಧ್ಯಕ್ಷರು ಸೇರಿದಂತೆ ಅನೇಕ ವಿಶ್ವ ನಾಯಕರು ಭಾರತದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸಿದ್ದಾರೆ. ಈ ನಾಯಕರು ಅವರೊಂದಿಗೆ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಧಿಕಾರ ವಹಿಸಿಕೊಂಡ 64 ವರ್ಷದ ಮುರ್ಮು ಅವರನ್ನು ಅಭಿನಂದಿಸಿದ್ದಾರೆ, ರಾಜಕೀಯ ಪರಸ್ಪರ ನಂಬಿಕೆಯನ್ನು ಹೆಚ್ಚಿಸಲು, ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸಲು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಸರಿಯಾದ ಹಾದಿಯಲ್ಲಿ ಸಾಗಿಸಲು ಅವರೊಂದಿಗೆ ಕೆಲಸ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

ಷ್ಟ್ರಪತಿ ಚುನಾವಣೆ: 10 ರಾಜ್ಯಗಳ 110 ಶಾಸಕರಿಂದ ಕ್ರಾಸ್‌ ವೋಟಿಂಗ್!

 

ಏಪ್ರಿಲ್ 2021ರ ಬಳಿಕ ಭಾರತದ ನಾಯಕರ ಜೊತೆಗಿನ ತಮ್ಮ ಮೊದಲ ಸಂವಹನದಲ್ಲಿ, "ಚೀನಾ ಮತ್ತು ಭಾರತವು ಪರಸ್ಪರರ ಪ್ರಮುಖ ನೆರೆಹೊರೆಯವರು ಮತ್ತು ಆರೋಗ್ಯಕರ ಮತ್ತು ಸ್ಥಿರವಾದ ಚೀನಾ-ಭಾರತ ಸಂಬಂಧವು ಎರಡೂ ದೇಶಗಳು ಮತ್ತು ಅವರ ಜನರ ಮೂಲಭೂತ ಹಿತಾಸಕ್ತಿಗಳಿಗೆ ಅನುಗುಣವಾಗಿದೆ" ಎಂದು ಕ್ಸಿ ಹೇಳಿದ್ದಾರೆ. ಅದರೊಂದಿಗೆ ಪ್ರದೇಶದಲ್ಲಿ ಮತ್ತು ಪ್ರಪಂಚದಾದ್ಯಂತ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಗೆ ಅನುಕೂಲಕರವಾಗಿದೆ ಎಂದಿದ್ದಾರೆ.

Follow Us:
Download App:
  • android
  • ios