Asianet Suvarna News Asianet Suvarna News

ರಾಂಚಿಯಲ್ಲಿ ಇಂಡಿಯಾ ಮಹಾ ಶಕ್ತಿ ಪ್ರದರ್ಶನ: ಹೇಮಂತ್ ಸೊರೇನ್, ಕೇಜ್ರಿವಾಲ್‌ಗೆ ಖಾಲಿ ಕುರ್ಚಿ ಇಟ್ಟು ಗೌರವ

ಆಡಳಿತಾರೂಢ ಜೆಎಂಎಂ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಇಂಡಿಯಾ ಕೂಟದ ಉಲ್ಗುಲಾನ್‌ ನ್ಯಾಯ್‌ ಮಹಾರ್‍ಯಾಲಿಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಬಂಧಿತರಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಖಾಲಿ ಕುರ್ಚಿಗಳನ್ನು ಇಟ್ಟು ಗೌರವ ಸೂಚಿಸಲಾಗಿದೆ.

INDIA parties shows joints strength at rally in Ranchi Hemant Soren, Kejriwal honored with empty chair akb
Author
First Published Apr 22, 2024, 9:02 AM IST

ರಾಂಚಿ: ಆಡಳಿತಾರೂಢ ಜೆಎಂಎಂ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಇಂಡಿಯಾ ಕೂಟದ ಉಲ್ಗುಲಾನ್‌ ನ್ಯಾಯ್‌ ಮಹಾರ್‍ಯಾಲಿಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಬಂಧಿತರಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಖಾಲಿ ಕುರ್ಚಿಗಳನ್ನು ಇಟ್ಟು ಗೌರವ ಸೂಚಿಸಲಾಗಿದೆ.

ಇದೇ ವೇಳೆ ವೇದಿಕೆಯಲ್ಲಿ ಹೇಮಂತ್‌ ಪತ್ನಿ ಕಲ್ಪನಾ ಮತ್ತು ಕೇಜ್ರಿವಾಲ್‌ ಪತ್ನಿ ಸುನಿತಾ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದರ ಜೊತೆಗೆ ಜಮ್ಮು ಕಾಶ್ಮೀರದ ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಖ್‌ ಅಬ್ದುಲ್ಲಾ, ಜಾರ್ಖಂಡ್‌ ಮುಖ್ಯಮಂತ್ರಿ ಶಿಬು ಸೊರೇನ್‌, ಸಮಾಜವಾದಿ ಪಕ್ಷದ ಅಖಿಲೇಶ್‌, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ವೇದಿಕೆಯನ್ನು ಅಲಂಕರಿಸಿದ್ದರು. ಸಾವಿರಾರು ಕಾರ್ಯಕರ್ತರು ಹೇಮಂತ್‌ ಸೋರೆನ್‌ ಅವರ ಮುಖವಾಡವನ್ನು ಧರಿಸಿ ಜಾರ್ಖಂಡ್‌ ಝಕೇಗಾ ನಹಿ (ಜಾರ್ಖಂಡ್‌ ತಲೆ ಬಾಗುವುದಿಲ್ಲ) ಎಂದು ಘೋಷಣೆ ಕೂಗುತ್ತಿದ್ದುದು ಗಮನ ಸೆಳೆಯಿತು.

ಇಂಡಿಯಾ ಕೂಟ ಬಿಡದ್ದಕ್ಕೆ ಹೇಮಂತ್‌ ಸೊರೇನ್‌ ಬಂಧನ: ಖರ್ಗೆ ಆಕ್ರೋಶ

ರಾಂಚಿ: ಲೋಕಸಭಾ ಚುನಾವಣೆ ನಡೆಯುತ್ತಿರುವ ನಡುವೆಯೇ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಜಾರ್ಖಂಡ್‌ ರಾಜಧಾನಿ ರಾಂಚಿಯ ಪ್ರಭಾತ್ ತಾರಾ ಕ್ರೀಡಾಂಗಣದಲ್ಲಿ ಉಲ್ಗುಲಾನ್‌ ನ್ಯಾಯ ರ್‍ಯಾಲಿ ಎಂಬ ಹೆಸರಿನಲ್ಲಿ ಬೃಹತ್‌ ಶಕ್ತಿ ಪ್ರದರ್ಶನ ನಡೆಸಿ, ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಾಗೂ ಜಾರ್ಖಂಡ್‌ ಹಿಂದಿನ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಬಂಧನವನ್ನು ಖಂಡಿಸಿತು. ಇತ್ತೀಚೆಗಷ್ಟೇ ದೆಹಲಿಯಲ್ಲಿ ಅರವಿಂದ್‌ ಬಂಧನ ಖಂಡಿಸಿ ಶಕ್ತಿ ಪ್ರದರ್ಶನ ಮಾಡಿದ್ದ ಇಂಡಿಯಾ ಕೂಟ, ಈಗ ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ತವರಿನಲ್ಲೂ ಒಗ್ಗಟ್ಟು ಪ್ರದರ್ಶಿಸಿತು. 28 ವಿಪಕ್ಷಗಳ ನಾಯಕರು ಇದರಲ್ಲಿ ಪಾಲ್ಗೊಂಡಿದ್ದರು.

ದಕ್ಷಿಣ ಭಾರತದ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ತೆಲಂಗಾಣ ಸಿಎಂ ರೇವಂತ ರೆಡ್ಡಿ

ಈ ವೇಳೆ ಮಾತನಾಡಿದ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹೇಮಂತ್‌ ಮುಂದೆ ಇಂಡಿಯಾ ಕೂಟವನ್ನು ಬಿಡುವುದು ಮತ್ತು ಜೈಲಿಗೆ ಹೋಗುವ ಎರಡು ಆಯ್ಕೆಗಳನ್ನು ನೀಡಿದಾಗ ಜೈಲಿಗೆ ಹೋಗುವ ಮೂಲಕ ದಿಟ್ಟತನ ಮೆರೆದಿದ್ದಾರೆ ಹಾಗೂ ತಾವು ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ತಲೆ ಬಾಗುವುದಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಬಿಜೆಪಿ ಈ ರೀತಿ ಬುಡಕಟ್ಟು ಸಮುದಾಯಕ್ಕೆ ಸೇರಿದ ನಾಯಕರನ್ನು ಬೆದರಿಸುವ ಕೆಲಸ ಮಾಡುತ್ತಿದೆ. ಇದೇ ರೀತಿಯಲ್ಲಿ ರಾಷ್ಟ್ರಪತಿಯನ್ನೂ ಸಹ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂದು ರಾಮಮಂದಿರಕ್ಕೆ ಆಹ್ವಾನಿಸಿರಲಿಲ್ಲ. ಬಿಜೆಪಿ ಇದೇ ರೀತಿಯಲ್ಲಿ ಬುಡಕಟ್ಟು ಸಮುದಾಯದವರನ್ನು ಅಸ್ಪೃಶ್ಯರಂತೆ ಕಾಣುವುದನ್ನು ಮುಂದುವರಿಸಿದರೆ ಲೋಕಸಭಾ ಚುನಾವಣೆಯಲ್ಲಿ ಕೇವಲ 150-180 ಸೀಟಿಗೆ ಸೀಮಿತವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೊರೇನ್‌ ಸಂದೇಶ ಓದಿದ ಪತ್ನಿ ಕಲ್ಪನಾ

ಇದೇ ವೇಳೆ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಬಂಧಿತ ಹೇಮಂತ್‌ ಸೊರೇನ್‌ ಪತ್ನಿ ಕಲ್ಪನಾ ಅವರು ತಮ್ಮ ಪತಿ ಜೈಲಿನಿಂದಲೇ ಕಳುಹಿಸಿರುವ ಸಂದೇಶವನ್ನು ವೇದಿಕೆಯಲ್ಲಿ ವಾಚಿಸಿ, ‘ಬಿಜೆಪಿಯು ಕೇಂದ್ರೀಯ ತನಿಖಾ ಸಂಸ್ಥೆಗಳ ಸಹಾಯದಿಂದ ಪ್ರಜಾಪ್ರಭುತ್ವವನ್ನು ದಮನಗೊಳಿಸಲು ಪ್ರಯತ್ನಿಸುತ್ತಿದ್ದು, ಅದಕ್ಕೆ ಅವಕಾಶ ನೀಡಬಾರದು’ ಎಂದರು.

ಜೈಲಲ್ಲೇ ಕೇಜ್ರಿ ಹತ್ಯೆಗೆ ಸಂಚು- ಪತ್ನಿ

ಸಮಾವೇಶದಲ್ಲಿ ಭಾಗಿ ಆಗಿದ್ದ ಕೇಜ್ರಿವಾಲ್‌ ಪತ್ನಿ ಸುನಿತಾ ಕೇಜ್ರಿವಾಲ್‌ ಮಾತನಾಡಿ, ನನ್ನ ಪತಿ ಮಧುಮೇಹದಿಂದ ಬಳಲುತ್ತಿದ್ದಾರೆ. ಅವರು 12 ವರ್ಷದಿಂದ ಇನ್ಸುಲಿನ್‌ ಪಡೆಯುತ್ತಿದ್ದಾರೆ. ನಿತ್ಯವೂ ಅವರಿಗೆ 50 ಯುನಿಟ್ಸ್‌ನಷ್ಟು ಇನ್ಸುಲಿನ್‌ ಬೇಕು. ಆದರೆ ಅವರಿಗೆ ಜೈಲಿನಲ್ಲಿ ಇನ್ಸುಲಿನ್ ನಿರಾಕರಿಸಲಾಗುತ್ತಿದೆ. ಈ ಮೂಲಕ ಜೈಲಿನೊಳಗೇ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು. ಜೊತೆಗೆ, ಕೇಜ್ರಿವಾಲ್‌ ತಿನ್ನುವ ಪ್ರತಿ ಹೊತ್ತಿನ ಆಹಾರವನ್ನೂ ಜೈಲಿನ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅವರ ಆಹಾರದ ಮೇಲೆ ಕ್ಯಾಮೆರಾ ಅಳವಡಿಸಲಾಗಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ಮೋದಿ ಮಾಡೆಲ್‌ ಅಂದ್ರೆ ಖಾಲಿ ಚೊಂಬು ಮಾಡೆಲ್: ರಣದೀಪ್ ಸುರ್ಜೇವಾಲಾ

ಇದೇ ವೇಳೆ ಪ್ರಸಕ್ತ ಆಡಳಿತ ಸರ್ವಾಧಿಕಾರ ನಡೆಸುತ್ತಿದೆ. ಕೇಜ್ರಿವಾಲ್‌ ಮತ್ತು ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೊರೇನ್‌ ತಪ್ಪಿತಸ್ಥರೆಂದು ಸಾಬೀತಾಗದ ಹೊರತಾಗಿಯೂ ಅವರನ್ನು ಜೈಲಿಗೆ ಹಾಕಲಾಗಿದೆ. ಇದು ಸರ್ವಾಧಿಕಾರವಲ್ಲದೇ ಮತ್ತೇನು ಎಂದು ಸುನಿತಾ ಪ್ರಶ್ನಿಸಿದರು.

 ರಾಹುಲ್‌ ಗಾಂಧಿಗೆ ಅನಾರೋಗ್ಯ: ರಾಂಚಿ ರ್‍ಯಾಲಿಗೆ ಗೈರು

ರಾಂಚಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ದಿಢೀರನೆ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಇಂಡಿಯಾ ಕೂಟದಿಂದ ರಾಂಚಿಯಲ್ಲಿ ಅಯೋಜನೆಗೊಂಡಿದ್ದ ಸಮಾವೇಶಕ್ಕೆಅವರು ಗೈರಾಗಿದ್ದಾರೆ.  ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಮಾಹಿತಿ ನೀಡಿದ್ದು, ‘ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ರಾಹುಲ್‌ ಗಾಂಧಿ ದೆಹಲಿಯಲ್ಲಿಯೇ ಉಳಿದಿದ್ದಾರೆ’ ಎಂದಿದ್ದಾರೆ. ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮಹಾಮೈತ್ರಿ ಕೂಟದ 14 ಪಕ್ಷಗಳು ಒಗ್ಗೂಡಿ ಇಲ್ಲಿನ ಪ್ರಭಾತ್ ತಾರಾ ಮೈದಾನದಲ್ಲಿ ಆಯೋಜಿಸಿದ‘ಉಲ್ಗುಲನ್ ನ್ಯಾಯ್ ’ ಹೆಸರಿನ ಸಮಾವೇಶದಲ್ಲಿ ಭಾನುವಾರ ರಾಹುಲ್ ಪಾಲ್ಗೊಳ್ಳಬೇಕಿತ್ತು. ಆದರೆ ಹುಷಾರಿಲ್ಲದ ಕಾರಣ ಸಾಧ್ಯವಾಗಲಿಲ್ಲ. ರಾಹುಲ್‌ ಇತ್ತೀಚಿನ ದಿನಗಳಲ್ಲಿ ಕರ್ನಾಟಕ, ಕೇರಳ, ಮಧ್ಯಪ್ರದೇಶ ಸೇರಿ ಅನೇಕ ರಾಜ್ಯಗಳನ್ನು ಸುತ್ತಿ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದರು.

Follow Us:
Download App:
  • android
  • ios