ಭಾರತವನ್ನು ಸಂಪೂರ್ಣ ಹಿಂದುತ್ವ ಶಾಲೆಯಾಗಿ ಪರಿವರ್ತಿಸಬೇಕಿದೆ: ಸಿ.ಟಿ.ರವಿ
ಹತ್ತಾರು ಸಾವಿರ ವರ್ಷಗಳಿಂದ ಹಿಂದುತ್ವದ ಶಾಲೆಯಾಗಿರುವ ಭಾರತವನ್ನು ಪೂರ್ಣವಾಗಿ ಹಿಂದುತ್ವ ಶಾಲೆಯಾಗಿ ಪರಿವರ್ತಿಸಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ತೀರ್ಥಹಳ್ಳಿ (ಮಾ.16): ಹತ್ತಾರು ಸಾವಿರ ವರ್ಷಗಳಿಂದ ಹಿಂದುತ್ವದ ಶಾಲೆಯಾಗಿರುವ ಭಾರತವನ್ನು ಪೂರ್ಣವಾಗಿ ಹಿಂದುತ್ವ ಶಾಲೆಯಾಗಿ ಪರಿವರ್ತಿಸಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಬಿಜೆಪಿ ಜಿಲ್ಲಾ ರೈತಮೋರ್ಚಾ ವತಿಯಿಂದ ಬುಧವಾರ ಪಟ್ಟಣದಲ್ಲಿ ನಡೆದ ರೈತ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯವರು ಕರಾವಳಿಯನ್ನು ಹಿಂದುತ್ವದ ಪ್ರಯೋಗಶಾಲೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ನಿಜ, ನಾವು ದೇಶವನ್ನೇ ಹಿಂದತ್ವದ ಶಾಲೆಯನ್ನಾಗಿಸಬೇಕಿದೆ ಎಂದು ಟಾಂಗ್ ನೀಡಿದರು.
130 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ದೇಶದಲ್ಲಿ ಅರಾಜಕತೆಗೆ ಕಾರಣರಾಗುತ್ತಿರುವ ಭಯೋತ್ಪಾದಕರು ಅಮಾಯಕರಾಗಿ ಕಾಣುತ್ತಿರುವುದು ಖಂಡನೀಯ. ಸೈದ್ಧಾಂತಿಕವಾಗಿರುವ ನಮಗೆ ದೇಶ ಮೊದಲು ಎಂಬುದು ಮುಖ್ಯ. ಆದರೆ ಓಟು ಮೊದಲು ಎಂಬುವವರಿಗೆ ಕುಕ್ಕರ್ ಬಾಂಬ್ ಇಟ್ಟಿರುವವರಿಂದಲೂ ಓಟಿನ ನಿರೀಕ್ಷೆ ಇರೋದು ದುರಂತ ಎಂದು ವ್ಯಂಗ್ಯವಾಡಿದರು. ವೈಚಾರಿಕ ತಾಕತ್ತಿನ ಈ ಜಿಲ್ಲೆ ನಾಲ್ಕು ಮಂದಿ ಮುಖ್ಯಮಂತ್ರಿಗಳನ್ನು ನೀಡಿದೆ. ಈ ಕ್ಷೇತ್ರದ ಮಾಜಿ ಸಚಿವರು ಕುಕ್ಕರ್ ಬಾಂಬ್ ಇಟ್ಟವರ ಬಗ್ಗೆ ಮೃದು ಧೋರಣೆ ತಾಳಿರೋದು ದುರ್ದೈವದ ಸಂಗತಿಯಾಗಿದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ನರೇಗಾ ಕಾಮಗಾರಿಯನ್ನು ಹೆಚ್ಚಿಸಿ: ಸಂಸದ ಜಿ.ಎಂ.ಸಿದ್ದೇಶ್ವರ
ದೇಶದ ಬೆನ್ನೆಲುಬಾಗಿರುವ ರೈತರನ್ನು ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣ ಬಿಜೆಪಿಯ ಕನಸಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ರೈತರ ನೆರವಿಗೆ ನಿಂತಿದೆ. ಮೋದಿಜಿ ಅಧಿಕಾರಕ್ಕೆ ಬರೋವರೆಗೆ ಈ ದೇಶದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಯಲ್ಲಿರಲಿಲ್ಲ ಎಂದು ಹೇಳಿದರು. ಈ ಯೋಜನೆಯಲ್ಲಿ ಕೇಂದ್ರದ ಆರು ಸಾವಿರದ ಜೊತೆಗೆ ರಾಜ್ಯ ಸರ್ಕಾರ ನಾಲ್ಕು ಸಾವಿರ ರು. ಗಳನ್ನು ಸೇರಿಸಿ ರೈತರ ಖಾತೆಗೆ ನೇರವಾಗಿ ಹತ್ತು ಸಾವಿರ ಹಣವನ್ನು ನೀಡುತ್ತಿದೆ. ಫಸಲ್ ಭಿಮಾ ಯೋಜನೆಯನ್ನು ಕೂಡಾ ತಂದಿರೋದು ಬಿಜೆಪಿ ಸರ್ಕಾರ ಎನ್ನೋದನ್ನು ರೈತರು ಮರೆಯಬಾರದು ಎಂದರು.
ಕಾಳಸಂತೆಯಲ್ಲಿ ಮಾರಾಟ ಆಗುತ್ತಿದ್ದುದನ್ನು ತಡೆಗಟ್ಟಿರಸಗೊಬ್ಬರಕ್ಕೆ ಸಬ್ಸಿಡಿ 1750 ರಿಂದ 2300 ರು. ಗಳವರೆಗೆ ಕೇಂದ್ರ ಸರ್ಕಾರ ಕೊಡ್ತಿದೆ. ಆದರೆ ಇದು ಬಹಳ ದಿನ ಮುಂದುವರೆಯೋದು ಕ್ಷೇಮವಲ್ಲ. ಹೀಗಾಗಿ ರೈತರು ಸ್ವಾಲಂಬಿಯಾಗುವ ನಿಟ್ಟಿನಲ್ಲಿ ಸಾವಯವ ಸಹಜ ಕೃಷಿಯ ಬಗ್ಗೆ ಉತ್ತೇಜನ ನೀಡಬೇಕಿದೆ. ರೈತರಲ್ಲೂ ಗಂಭೀರ ಚಿಂತನೆ ನಡೆಯಬೇಕಿದೆ. ರೈತ ವಿದ್ಯಾನಿಧಿ ಹೆಸರಿನಲ್ಲಿ 11 ಲಕ್ಷ ಮಕ್ಕಳಿಗೆ ವಿದ್ಯಾರ್ಥಿವೇತನ, ನೇಕಾರ, ಮೀನುಗಾರ, ಮಣ್ಣಿನ ರಕ್ಷಣೆಗಾಗಿ ಸಾಯಿಲ್ ಹೆಲ್ತ್‌ಕಾರ್ಡ್, ಇದರ ಜೊತೆ ಜೊತೆಗೆ ಆಯಾಕಾಲಘಟ್ಟದಲ್ಲಿ ರೈತಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೆ ನೀಡಿದೆ ಎಂದೂ ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡವರನ್ನು ಸ್ವಾಗತಿಸಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ದೇಶದಲ್ಲಿ ಆರು ದಶಕಗಳಿಗೂ ಹೆಚ್ಚಿನ ಅವಧಿಗೆ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ರೈತರನ್ನು ಹಿಂಡಿ ಹಿಪ್ಪೆ ಮಾಡಿದೆ. ರೈತರ ಭವಣೆಯನ್ನು ತಪ್ಪಿಸಲು ಹತ್ತು ಹಲವು ಕಾರ್ಯಕ್ರಮಗಳ ಮೂಲಕ ನಮ್ಮ ಸರ್ಕಾರ ಕಟಿಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮುಗಲಭೆ ಮಾತ್ರವಲ್ಲದೇ ದೇಶದಲ್ಲಿ ಅರಾಜಕತೆಯೂ ಉಂಟಾಗುತ್ತದೆ ಎಂದರು.
5 ಲಕ್ಷ ರು. ಗಳವರಗೆ ಬಡ್ಡಿ ರಹಿತ ಸಾಲ ನೀಡುತ್ತಿರುವ ನಮ್ಮ ಸರ್ಕಾರ ಯಾವೊಬ್ಬ ರೈತರೂ ಅರ್ಜಿ ಹಾಕದೇ ಇದ್ದರೂ ಪ್ರತಿಯೊಬ್ಬ ರೈತರ ಮನೆ ಬಾಗಿಲಿಗೆ 10 ಸಾವಿರ ರು. ಗಳನ್ನು ತಲುಪಿಸಿದೆ. ಜನರ ನಂಬಿಕೆಯನ್ನೇ ಕಳೆದುಕೊಂಡಿರುವ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ. ಸಾಲದ್ದಕ್ಕೆ ಗುಳಿಗೆ ಹೆಸರಿನ ನಾಟಕ ಆಭಿನಯಿಸಿದ್ದು, ಅಧಿಕಾರಕ್ಕೆ ಬಂದಲ್ಲಿ ಜನರಿಗೆ ಜಾಪಾಳ್ ಮಾತ್ರೆಯನ್ನೇ ನೀಡಬಹುದು ಎಂದು ಮಂಗಳವಾರ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ನಡೆದ ತುಳು ನಾಟಕದ ಬಗ್ಗೆ ಗೇಲಿ ಮಾಡಿದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಅಡಕೆ ಬೆಳೆಗಾರರ ಕಷ್ಟಕಾಲದಲ್ಲಿ ರೈತರ ಬೆಂಬಲಕ್ಕೆ ನಿಂತವರು ಆರಗ ಜ್ಞಾನೇಂದ್ರ. ಹೀಗಾಗಿ ಈ ಕ್ಷೇತ್ರದಲ್ಲಿ ಕಳೆದ ಬಾರಿಗಿಂತಲೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲೋದು ಖಚಿತ. ಇನ್ನು ಕಾಂಗ್ರೆಸ್ಸಿನಲ್ಲಿ ಕಿಮ್ಮನೆ ರತ್ನಾಕರ್, ಆರ್.ಎಂ. ಮಂಜುನಾಥ ಗೌಡ ಅವರಿಬ್ಬರು ಸೇರೋ ಪ್ರಶ್ನೇನೇ ಇಲ್ಲಾ. ಅವರು ಒಟ್ಟಿಗೆ ಸೇರೋದು ಅಂದರೆ ಸೂರ್ಯ ಚಂದ್ರ ಒಟ್ಟು ಸೇರಿದಂತೆ. ಮಂಜುನಾಥ ಗೌಡರು ಡಿಸಿಸಿ ಬ್ಯಾಂಕಿನಲ್ಲಿ ಚಿನ್ನವನ್ನು ಕಬ್ಬಿಣ ಮಾಡಿದವರು ಎಂದೂ ಟೀಕಿಸಿದರು.
ಎಚ್‌ಡಿಡಿ, ಎಚ್ಡಿಕೆಗೆ ಮೋಸ ಮಾಡಿದ ಬಾಲಕೃಷ್ಣ: ಶಾಸಕ ಮಂಜುನಾಥ್
ಬಿಜೆಪಿ ಅಜೆಂಡಾದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದೇವೆ. ಕಾಶಿ ಮತ್ತು ಮಥುರಾದ ಹಿಂದು ದೇವಾಲಯಗಳಿರುವ ಸ್ಥಳದಲ್ಲಿರುವ ಮಸೀದಿಗಳನ್ನು ಕಿತ್ತೆಸೆದು ದೇವಾಲಯ ಕಟ್ಟೋವರೆಗೆ ನಮಗೆ ನೆಮ್ಮದಿ ಇಲ್ಲ. ಜಿನ್ನಾ ಸಂತತಿಯ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಈ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲಾ ಎಂದೂ ಪ್ರಶ್ನಿಸಿದರಲ್ಲದೆ, ಕರ್ನಾಟಕದಲ್ಲಿ ಜನ ನಮಗೆ ಓಟು ಕೊಡ್ತಾರೆ. ಆದರೆ ಈವರೆಗೆ ಪೂರ್ಣ ಬಹುಮತ ಕೊಟ್ಟಿಲ್ಲ. ಈ ಬಾರಿ 150 ಸ್ಥಾನ ಗೆಲ್ಲುವ ಮೂಲಕ ಸ್ವತಂತ್ರವಾಗಿ ಅಧಿಕಾರ ಹಿಡಿಯುತ್ತೇವೆ ಎಂದೂ ಹೇಳಿದರು.
ಸಭೆಯ ಅದ್ಯಕ್ಷತೆಯನ್ನು ರೈತಮೋರ್ಚಾ ಜಿಲ್ಲಾಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ ವಹಿಸಿದ್ದರು. ಸಭೆಯಲ್ಲಿ ಮಂಡಲ ಬಿಜೆಪಿ ಅದ್ಯಕ್ಷ ರಾಘವೇಂದ್ರ ನಾಯಕ್, ಮಾಜಿ ಶಾಸಕ ಬಿ. ಸ್ವಾಮಿರಾವ್, ರಾಜ್ಯ ರೈತಮೋರ್ಚಾ ಪ್ರಮುಖರಾದ ಮಂಜುಳಾ, ಶಿವಪ್ರಸಾದ್, ದಿನೇಶ್ ದೇವಪುರ, ಬಿಜೆಪಿ ಪ್ರಮುಖರಾದ ಆರ್. ಮದನ್, ಬೇಗುವಳ್ಳಿ ಸತೀಶ್, ಕೆ.ನಾಗರಾಜ ಶೆಟ್ಟಿಇದ್ದರು. ಸಂದೇಶ್ ಜವಳಿ ಕಾರ್ಯಕ್ರಮ ನಿರ್ವಹಿಸಿದರು.