*   ಕಾಂಗ್ರೆಸ್‌ ತೊರೆಯುವ ಪ್ರಶ್ನೆಯೇ ಇಲ್ಲ: ಯಶವಂತರಾಯಗೌಡ*   ಇಬ್ಬರು ಕೈ ಶಾಸಕರು ಬಿಜೆಪಿ ಪ್ರವೇಶಿಸಲು ಸಜ್ಜಾಗಿದ್ದಾರೆ ಎಂಬ ಯತ್ನಾಳ ಹೇಳೆಕೆಗೆ ಪ್ರತಿಕ್ರಿಯೆ*  ಎಲ್ಲೋ ಒಂದು ಕಡೆ ನಾವು ವಿಫಲರಾಗುತ್ತಿದ್ದೇವೆ. ಅದನ್ನು ಗಮನಿಸಬೇಕು 

ವಿಜಯಪುರ(ಮೇ.29):  ನಾನು ಕಾಂಗ್ರೆಸ್‌ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ, ಬಿಜೆಪಿ ಬಗ್ಗೆ ನಾನು ಮಾತನಾಡಿಯೂ ಇಲ್ಲ, ಆದರೆ ನಾಲಿಗೆ, ಮೆದುಳಿಗೆ ಕನೆಕ್ಷನ್‌ ಇಲ್ಲದವರು ಏನೇನೂ ಮಾತನಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳು ನೀಡುವ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಜಯಪುರ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸ್ಪಷ್ಟಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರು ಕೈ ಶಾಸಕರು ಬಿಜೆಪಿ ಪ್ರವೇಶಿಸಲು ಸಜ್ಜಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಯ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಯಶವಂತರಾಯಗೌಡ ಅವರು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

Vijayapuara: ನಾನು ತಪ್ಪು ಮಾಡಿದ್ದರೆ ಚೌಡೇಶ್ವರಿ ನನಗೆ ಶಿಕ್ಷೆ ನೀಡಲಿ: ಕೆ.ಎಸ್‌.ಈಶ್ವರಪ್ಪ

ಬಿಜೆಪಿಯವರು ನನ್ನನ್ನು ಸಂಪರ್ಕಿಸಿಲ್ಲ. ಇಬ್ಬರು ಕೈ ಶಾಸಕರು ಬಿಜೆಪಿ ಸೇರುವ ನಾಟಕ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಸರು ಉಚ್ಚರಿಸದೇ ಯತ್ನಾಳ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.
ಯಾರು ಹಿಂದೊಂದು ಮುಂದೊಂದು ಮಾತನಾಡುತ್ತಾರೋ ಅವರು ನಾಟಕ ಮಾಡುತ್ತಾರೆ. ಸಂಸದೀಯ ಪದ ಬಳಸಬೇಕು. ನನಗೂ ಮಾತನಾಡಲು ಬರುತ್ತದೆ, ನಾಲಿಗೆಯ ಮೇಲೆ ಹಿಡಿತವಿರಲಿ. ಅತೀ ಹೆಚ್ಚು ಮಾತನಾಡಿದ್ದಕ್ಕೆ ನಿಮ್ಮ ಪರಿಸ್ಥಿತಿ ಏನಾಗಿದೆ ಗಮನಿಸಬೇಕು. ಯಾರನ್ನೋ ತುಳಿಯುವ ಪ್ರಯತ್ನ ಮಾಡಬಾರದು. ಯಾರೋ ಹೇಳಿದ್ದನ್ನು ಕೇಳಿ ಮಾತನಾಡುವುದಲ್ಲ, ದಿನ ನಿತ್ಯ ಹೀಗೆ ಮಾತಾಡೋರಿಗೆ ಉತ್ತರ ಕೊಡುತ್ತಾ ಹೋದರೆ ನನ್ನ ಗತಿ ಏನು ಎಂದರು.
ನಮ್ಮ ನಡವಳಿಕೆ ನಮ್ಮ ಗೌರವ ಹೆಚ್ಚಿಸಬೇಕು ಎಂದ ಅವರು, ಎಂಥವರನ್ನು ಆರಿಸಿ ತಂದಿದ್ದೇವೆ ಎಂದು ನಗರದ ಜನತೆ ಪಶ್ಚಾತ್ತಾಪ ಪಡುವಂತಾಗಿದೆ ಎಂದು ಹೇಳಿದರು.

ಧರೀದೇವರ ಮಂದಿರಕ್ಕೆ ಪೂಜೆಗಾಗಿ ನಾನು ಹೋದಾಗ ಶಿವಾನಂದ ಪಾಟೀಲ ಸಹ ಬಂದಿದ್ದರು. ಅಲ್ಲಿ ವೇದಿಕೆ ಮೇಲೆ ಕುಳಿತು ಮಾತನಾಡಿದ್ದೇವೆ, ಶಿವಾನಂದ ಪಾಟೀಲರಿಗೆ ಆ ಕ್ಷೇತ್ರದ ಜೊತೆ ಭಾವನಾತ್ಮಕ ಸಂಬಂಧವಿದೆ. ನಮ್ಮ ಮೇಲಿನ ಪ್ರೀತಿ ಅವರ ಮೇಲಿನ ಅಭಿಮಾನದಿಂದ ಸೇರಬೇಕಾಯಿತು. ಫೀಡಿಂಗ್‌ ತಗೊಂಡು ಮಾತನಾಡಬಾರದು. ಸ್ವಂತ ರಾಜಕಾರಣ ಮಾಡೋಣ ಎಂದು ಹೇಳಿದರು.

ಸುಮ್ಮನೆ ಊಹೆ ಕಟ್ಟಿಕೊಂಡು ರಾಜಕಾರಣ ಮಾಡಬಾರದು. ಚೀಪ್‌ ಪಾಲಿಟಿಕ್ಸ್‌, ಚೀಪ್‌ ಪಾಪ್ಯೂಲಾರಿಟಿ ಬೇಡ. ಇದನ್ನೆಲ್ಲ ಜನ ನೋಡಿಬಿಟ್ಟಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿ ಚುನಾವಣೆ ಬರಲಿದೆ. ಯಾರು ಎಲ್ಲೆಲ್ಲಿ ನಿಲ್ಲುತ್ತಾರೆಯೋ ನೋಡೋಣ. ಆಗ ರಾಜಕಾರಣ ಮಾಡೋಣ ಎಂದರು.

ಕಾಂಗ್ರೆಸ್​​ನ ಇಬ್ಬರು ಪ್ರಭಾವಿ ನಾಯಕರು ಬಿಜೆಪಿಗೆ ಬರಲು ನಾಟಕ ಮಾಡ್ತಿದ್ದಾರೆ- ಯತ್ನಾಳ್ ಬಾಂಬ್

ಕಾಂಗ್ರೆಸ್‌ನಲ್ಲೂ ಬದಲಾವಣೆ ಅಗತ್ಯ:

ಕಾಂಗ್ರೆಸ್‌ ಪಕ್ಷದಲ್ಲಿ ಸಮಸ್ಯೆಗಳು ಇರುವುದು ಸಹಜ, ಆದರೆ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಪಕ್ಷವನ್ನು ಬೆಳೆಸಬೇಕಿದೆ. ಕಾಂಗ್ರೆಸ್‌ ಸಿದ್ದಾಂತ ಒಳ್ಳೆಯದಾಗಿದೆ. ನಾವೆಲ್ಲ ಸೇರಿ ಕಾಂಗ್ರೆಸ್‌ ಬೆಳೆಸಬೇಕಿದೆ. ನಿಜ ಕಾಂಗ್ರೆಸ್‌ನಲ್ಲಿ ಸ್ವಲ್ಪ ಸಮಸ್ಯೆ ಇವೆ. ಸಮಸ್ಯೆ ಎಂದ ಮಾತ್ರಕ್ಕೆ ನಾವೆಲ್ಲಿಯೂ ಅದನ್ನು ಬಹಿರಂಗಗೊಳಿಸಿಲ್ಲ. ಕಾಂಗ್ರೆಸ್‌ನಲ್ಲೂ ಸ್ವಲ್ಪ ಬದಲಾವಣೆ ಆಗಬೇಕು. ಇಲ್ಲವಾದರೆ ಪಕ್ಷಕ್ಕೆ ತೊಂದರೆಯಾಗುವುದು ನಿಜ ಎಂದರು.

ಎಲ್ಲೋ ಒಂದು ಕಡೆ ನಾವು ವಿಫಲರಾಗುತ್ತಿದ್ದೇವೆ. ಅದನ್ನು ಗಮನಿಸಬೇಕು. ಈಗ ಹತ್ತು ವರ್ಷ ಬಿಜೆಪಿ ಬಲಗೊಂಡಿದೆ. ಈಗ ನಾವೂ ಹೋರಾಟ ಮಾಡೋಣ. ಪ್ರತಿಪಕ್ಷ ಸ್ಥಾನದಲ್ಲಿದ್ದು ಹೋರಾಟದ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.