ಮೈಸೂರಿನಲ್ಲಿ ವರ್ಗಾವಣೆ ದಂಧೆಯ ಹಣ ಹಂಚಿಕೆ ವಿಚಾರದಲ್ಲಿ ಮಂತ್ರಿ ಮೇಲೆಯೇ ಹಲ್ಲೆ: ಎಚ್‌ಡಿಕೆ!

ವರ್ಗಾವಣೆ ದಂಧೆಯ ಹಣ ಹಂಚಿಕೆ ವಿಚಾರದಲ್ಲಿ ಮೈಸೂರಿನಲ್ಲಿ ಸಚಿವರು, ಇನ್ನಿತರರು ಹೊಡೆದಾಡಿಕೊಂಡಿದ್ದಾರೆಂಬ ಮಾಹಿತಿಯಿದೆ. ಒಬ್ಬ ಸಚಿವರ ಮೇಲೆ ಬಹಿರಂಗವಾಗಿಯೇ ಹಲ್ಲೆ ನಡೆಸುತ್ತಾರೆಂದರೆ ಈ ರಾಜ್ಯದ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

In Mysuru Minister Was Attacked in Matter of Distribution of Transfer Money Says HD Kumaraswamy gvd

ಚನ್ನಪಟ್ಟಣ/ಮೈಸೂರು (ನ.10): ವರ್ಗಾವಣೆ ದಂಧೆಯ ಹಣ ಹಂಚಿಕೆ ವಿಚಾರದಲ್ಲಿ ಮೈಸೂರಿನಲ್ಲಿ ಸಚಿವರು, ಇನ್ನಿತರರು ಹೊಡೆದಾಡಿಕೊಂಡಿದ್ದಾರೆಂಬ ಮಾಹಿತಿಯಿದೆ. ಒಬ್ಬ ಸಚಿವರ ಮೇಲೆ ಬಹಿರಂಗವಾಗಿಯೇ ಹಲ್ಲೆ ನಡೆಸುತ್ತಾರೆಂದರೆ ಈ ರಾಜ್ಯದ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ ಎಂದು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಚನ್ನಪಟ್ಟಣ ತಾಲೂಕಿನ ಮಂಕುಂದ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಈ ದಂಧೆ ವಿಚಾರವಾಗಿಯೇ ಮೈಸೂರಿನಲ್ಲಿ ಸಚಿವರು, ಮತ್ತಿತರರು ಹೊಡೆದಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಒಬ್ಬ ಸಚಿವರನ್ನು ಬಹಿರಂಗವಾಗಿ ಹೊಡೆದಿದ್ದಾರೆ ಎಂದು ತಿಳಿಸಿದರು. ಕುಮಾರಸ್ವಾಮಿ ಅವರು ಪ್ರಸ್ತಾಪಿಸಿರುವ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

ರೈತರ ವಿರುದ್ಧ ಕ್ರಮ ಜರುಗಿಸದೇ ವಕ್ಫ್‌ ನೋಟಿಸ್‌ ಪಡೆಯಲು ಸರ್ಕಾರ ಆದೇಶ!

ಆಗಿದ್ದೇನು?: ಕುಮಾರಸ್ವಾಮಿ ಅವರು ಪ್ರಸ್ತಾಪಿಸಿರುವ ಈ ಘಟನೆ ಶುಕ್ರವಾರ ರಾತ್ರಿ ಹುಣಸೂರು ರಸ್ತೆಯ ಹೋಟೆಲ್‌ವೊಂದರಲ್ಲಿ ನಡೆದಿದೆ ಎನ್ನಲಾಗಿದೆ. ಹಣಕಾಸು ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಸಚಿವರೊಬ್ಬರು ಮುಖಂಡರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದು, ಪ್ರತಿಯಾಗಿ ಆ ವ್ಯಕ್ತಿಯೂ ಸಚಿವರಿಗೆ ತಿರುಗಿಸಿ ನಾಲ್ಕು ಬಾರಿಸಿದ್ದಾರೆ ಎನ್ನಲಾಗಿದೆ. ಇವರಿಬ್ಬರೂ ಒಂದೇ ಜಿಲ್ಲೆಯವರು ಎಂದು ಹೇಳಲಾಗಿದೆ. ಎರಡು ವರ್ಷಗಳ ಹಿಂದೆ ಮೇಲ್ಮನೆಗೆ ಚುನಾವಣೆ ನಡೆದಾಗ ಆ ಮುಖಂಡನಿಗೆ ಹಣದ ಭರವಸೆ ನೀಡಲಾಗಿತ್ತು. ಆದರೆ ಅದರ ಅರ್ಧದಷ್ಟು ಹಣ ನೀಡಿ ಉಳಿದದ್ದನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. 

ಈವರೆಗೆ ಸುಮ್ಮನಿದ್ದ ಆ ವ್ಯಕ್ತಿ ಶುಕ್ರವಾರ ಸಚಿವರು, ಶಾಸಕರು, ವಿಧಾನ ಪರಿಷತ್ ಮಾಜಿ ಸದಸ್ಯರು, ಮುಖಂಡರು ಹೋಟೆಲ್ ನಲ್ಲಿ ಸೇರಿದ್ದಾಗ ಬಾಕಿ ಹಣ ಮತ್ತು ಈಗಿನ ವ್ಯವಹಾರದ ಹಣ ಸೇರಿಸಿ ಒಟ್ಟಿಗೆ ಕೊಡುವಂತೆ ಪ್ರಸ್ತಾಪಿಸಿದರಂತೆ. ಆಗ ಚುನಾವಣೆ ನಡೆದು ಇಷ್ಟು ದಿನವಾಗಿದೆ, ಈಗ ಆ ಹಣ ಕೇಳಿದರೆ ಹೇಗೆ? ಎಂಬ ಮಾತು ಬಂದಾಗ, ಇಬ್ಬರ ನಡುವೆಯೂ ಮಾತಿಗೆ ಮಾತು ಬೆಳೆದಿದೆ. ಈ ಹಂತದಲ್ಲಿ ಸಿಟ್ಟಿಗೆದ್ದ ಸಚಿವರು ತಮ್ಮದೇ ಊರಿನ ಆ ಮುಖಂಡನಿಗೆ ಕಪಾಳಮೋಕ್ಷ ಮಾಡಿದರೆನ್ನಲಾಗಿದೆ. ಇದರಿಂದ ಕೆರಳಿದ ಆ ಮುಖಂಡ ಸಚಿವರ ಕೆನ್ನೆಗೆ ತಿರುಗಿ ನಾಲ್ಕು ಬಾರಿಸಿದ್ದಾರಂತೆ. 

ಆಗ ನಮ್ಮೆದುರಿಗೇ ಸಚಿವರ ಮೇಲೆ ಕೈ ಮಾಡುತ್ತೀಯಾ? ಎಂದು ಅಲ್ಲಿದ್ದ ಇಬ್ಬರು ಶಾಸಕರು ಹಾಗೂ ಗನ್‌ ಮ್ಯಾನ್‌ ಆ ಮುಖಂಡನಿಗೆ ಚೆನ್ನಾಗಿ ಥಳಿಸಿದರಂತೆ. ಈ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದ ವಿಧಾನ ಪರಿಷತ್ ಮಾಜಿ ಸದಸ್ಯರು ಇದನ್ನೆಲ್ಲ ಅಸಹಾಯಕರಾಗಿ ನೋಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಘಟನೆಯನ್ನು ಅಲ್ಲಿದ್ದ ಕೆಲವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ಅದನ್ನು ಡಿಲೀಟ್ ಮಾಡಿ ಕಳುಹಿಸಲಾಗಿದೆ. ಈ ಘಟನೆ ಕುರಿತು ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ಪ್ರಸ್ತಾಪಿಸುತ್ತಲೇ ಸಚಿವರು, ಶಾಸಕರು ಹಾಗೂ ಆ ಮುಖಂಡನ ನಡುವೆ ರಾಜಿ ಮಾಡಿಸುವ ಪ್ರಯತ್ನಗಳು ನಡೆದಿವೆ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಈ ದಂಧೆ ವಿಚಾರವಾಗಿಯೇ ಮೈಸೂರಿನಲ್ಲಿ ಸಚಿವರು, ಮತ್ತಿತರರು ಹೊಡೆದಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಒಬ್ಬ ಸಚಿವರನ್ನು ಬಹಿರಂಗವಾಗಿ ಹೊಡೆದಿದ್ದಾರೆ. ರಾಜ್ಯದ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ.
- ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ಬಿಎಸ್‌ವೈ, ಶ್ರೀರಾಮುಲು ವಿರುದ್ಧ ಕೊರೋನಾ ಕೇಸ್‌ಗೆ ಸಿದ್ಧತೆ: ಶಿಫಾರಸಲ್ಲೇನಿದೆ?

ಮೈಸೂರಲ್ಲಿ ಆಗಿದ್ದೇನು?
- ಮೈಸೂರಿನ ಹೋಟೆಲ್‌ವೊಂದರಲ್ಲಿ ರಾಜ್ಯದ ಸಚಿವ, ಶಾಸಕರು, ಮುಖಂಡರು ಶುಕ್ರವಾರ ರಾತ್ರಿ ಸಭೆ ಸೇರಿದ್ದರು ಎನ್ನಲಾಗಿದೆ
- ಮೇಲ್ಮನೆ ಚುನಾವಣೆ ವೇಳೆ ಮುಖಂಡರೊಬ್ಬರಿಗೆ ಹಣದ ಭರವಸೆ ಕೊಡಲಾಗಿತ್ತು. ಆದರೆ ಪೂರ್ತಿ ಕೊಟ್ಟಿರಲಿಲ್ಲ ಎಂದು ಹೇಳಲಾಗಿದೆ
- ಶುಕ್ರವಾರದ ಸಭೆ ವೇಳೆ ಆ ವ್ಯಕ್ತಿ ಹಣಕ್ಕೆ ಬೇಡಿಕೆ ಇಟ್ಟಾಗ ಮಾತಿನ ಚಕಮಕಿ ಆಗಿ ಸಚಿವರಿಂದ ಕಪಾಳಮೋಕ್ಷ ನಡೆಯಿತೆನ್ನಲಾಗಿದೆ
- ಕೆರಳಿದ ಮುಖಂಡ ಕೂಡ ಸಚಿವರ ಕೆನ್ನೆಗೆ ನಾಲ್ಕು ಬಾರಿಸಿದಾಗ ಶಾಸಕರು, ಇತರರು ಸೇರಿ ಆ ವ್ಯಕ್ತಿಗೆ ಥಳಿಸಿದರು ಎಂದು ಹೇಳಲಾಗಿದೆ
- ಈ ವೇಳೆ ಕೆಲವರಿಂದ ಮೊಬೈಲ್‌ನಲ್ಲಿ ದೃಶ್ಯ ಚಿತ್ರೀಕರಣ. ಅದನ್ನು ಬಳಿಕ ಮುಖಂಡರು ಸೇರಿ ಅಳಿಸಿ ಹಾಕಿಸಿದರು ಎನ್ನಲಾಗಿದೆ

Latest Videos
Follow Us:
Download App:
  • android
  • ios