ಟಿಕೆಟ್ ವಿಚಾರವಾಗಿ ಬಹಿರಂಗವಾಗಿ ಮಾತನಾಡದೇ ಪಕ್ಷದ ನಿರ್ಧಾರಕ್ಕೆ ಬಿಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಲಕ್ಷ್ಮಣ ಸವದಿ ಹಾಗೂ ಮಹೇಶ್ ಕುಮಟಳ್ಳಿ ಅವರಿಗೆ ಸೂಚನೆ ನೀಡಿದ್ದಾರೆ. 

ಬೆಳಗಾವಿ (ಏ.04): ಟಿಕೆಟ್ ವಿಚಾರವಾಗಿ ಬಹಿರಂಗವಾಗಿ ಮಾತನಾಡದೇ ಪಕ್ಷದ ನಿರ್ಧಾರಕ್ಕೆ ಬಿಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಲಕ್ಷ್ಮಣ ಸವದಿ ಹಾಗೂ ಮಹೇಶ್ ಕುಮಟಳ್ಳಿ ಅವರಿಗೆ ಸೂಚನೆ ನೀಡಿದ್ದಾರೆ. ಬೆಳಗಾವಿಯಲ್ಲಿ ಇಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ ಜಿಲ್ಲಾ ನಾಯಕರ ಜೊತೆ ಚರ್ಚಿಸಿದ ಜೋಶಿಯವರು, ಟಿಕೆಟ್ ಆಯ್ಕೆಯನ್ನು ಪಕ್ಷ ತೀರ್ಮಾನಿಸುತ್ತದೆ. ಪಕ್ಷದ ತೀರ್ಮಾನವನ್ನ ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. 

ಏನೇ ಹೇಳುವುದಿದ್ದರೂ ಸಹ ಮಾಧ್ಯಮಗಳ ಎದುರಿಗೆ ಹೇಳುವ ಬದಲು ತಮ್ಮ ಗಮನಕ್ಕೆ ತರುವಂತೆ ಬೆಳಗಾವಿ ಬಿಜೆಪಿ ನಾಯಕರಿಗೆ ಪ್ರಲ್ಹಾದ್ ಜೋಶಿ ಇದೇ ವೇಳೆ ಸಲಹೆ ನೀಡಿದರು. ಬೆಳಗಾವಿಯ 18 ಕ್ಷೇತ್ರಗಳು ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಪಕ್ಷದ ಗೆಲುವಿಗೆ ಎಲ್ಲರೂ ಕೈ ಜೋಡಿಸಬೇಕು. ಸಣ್ಣ ಪುಣ್ಣ ವ್ಯತ್ಯಾಸಗಳನ್ನ ಮರೆತು ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡುವಂತೆ ಬೆಳಗಾವಿ ಬಿಜೆಪಿ ನಾಯಕರಿಗೆ ಪ್ರಲ್ಹಾದ್ ಜೋಶಿ ಕರೆ ನೀಡಿದರು. 

ಬಿಜೆಪಿಗೆ ಸೇರ್ಪಡೆಯಾದ ರಾಮಕೃಷ್ಣ ಹೆಗಡೆ ಕುಟುಂಬದ ಕುಡಿ: ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದ ಶಶಿಭೂಷಣ ಹೆಗಡೆ

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿಯವರು, ಬೆಳಗಾವಿ ಬಿಜೆಪಿಯಲ್ಲಿ ಒಗ್ಗಟ್ಟಿದೆ. ಒಗ್ಗಟ್ಟಿಲ್ಲ ಎಂದು ಬಿಂಬಿಸುವ ಅಗತ್ಯವಿಲ್ಲ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈಗಾಗಲೇ ಬೆಳಗಾವಿ ನಾಯಕರ ಜೊತೆ ಒಂದು ಸುತ್ತಿನ ಸಭೆ ನಡೆಸಿ ಸರಿಪಡಿಸಿದ್ದಾರೆ. ಇಂದು ನಾನು ಕೂಡ ಜಿಲ್ಲಾ ನಾಯಕರ ಜೊತೆ ಚರ್ಚಿಸಿದ್ದೇನೆ. ಕೆಲವು ಸಣ್ಣ ಪುಟ್ಟ ವಿಚಾರಗಳನ್ನ ಹೇಳಿಕೊಂಡಿದ್ದು, ಅದನ್ನು ಪಕ್ಷದ ಹಿರಿಯ ನಾಯಕರ ಜೊತೆ ಚರ್ಚಿಸಿ ಸರಿಪಡಿಸಲಾಗುವುದು ಎಂದರು. 

ಲಕ್ಷ್ಮಣ್ ಸವದಿ ಹಾಗೂ ಮಹೇಶ್ ಕುಮಟಹಳ್ಳಿ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ ಪಕ್ಷ ತೆಗೆದುಕೊಳ್ಳು ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧರಾಗಬೇಕು ಎಂದು ಇಬ್ಬರಿಗೂ ಸೂಚಿಸಲಾಗಿದೆ. ಇಬ್ಬರು ಪಕ್ಷದ ತೀರ್ಮಾನವನ್ನ ಒಪ್ಪಿಕೊಳ್ಳುವುದಾಗಿ ನನ್ನ ಬಳಿ ಹೇಳಿದ್ದಾರೆ ಎಂದು ಇದೇ ವೇಳೆ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ಬೆಳಗಾವಿಯ 18 ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿನ ರಣತಂತ್ರಗಳ ಕುರಿತಂತೆ ಕೋರ್ ಕಮಿಟಿ ಸಭೆಯಲ್ಲಿ ಸಚಿವರು ಚರ್ಚಿಸಿದರು. 

ಸಿದ್ದು ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗಿಲ್ಲ: ಡಾ.ಜಿ.ಪರಮೇಶ್ವರ್

ಇದೇ ವೇಳೆ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನ ಈ ಬಾರಿ ಬಿಜೆಪಿ ಬೆಳಗಾವಿಯಲ್ಲಿ ಗೆಲ್ಲಲಿದೆ ಎಂದೂ ಪ್ರಲ್ಹಾದ್ ಜೋಶಿಯವರು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.