ಬಿಜೆಪಿಗೆ ಸೇರ್ಪಡೆಯಾದ ರಾಮಕೃಷ್ಣ ಹೆಗಡೆ ಕುಟುಂಬದ ಕುಡಿ: ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದ ಶಶಿಭೂಷಣ ಹೆಗಡೆ

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕುಟುಂಬದ ಡಾ. ಶಶಿಭೂಷಣ ಹೆಗಡೆ ಸೋಮವಾರ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಂತೆಯೇ ಪಕ್ಷದಲ್ಲಿ ಹೊಸ ಸಂಚಲನ ಮೂಡಿದೆ.

Karnataka Election 2023 Shashibhushan Hegde joined BJP Party gvd

ಮಂಜುನಾಥ ಸಾಯೀಮನೆ

ಶಿರಸಿ (ಏ.03): ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕುಟುಂಬದ ಡಾ. ಶಶಿಭೂಷಣ ಹೆಗಡೆ ಸೋಮವಾರ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಂತೆಯೇ ಪಕ್ಷದಲ್ಲಿ ಹೊಸ ಸಂಚಲನ ಮೂಡಿದೆ. ಕಳೆದ ಕೆಲ ದಿನಗಳಿಂದ ಮೂಲೆಗುಂಪಾಗಿದ್ದ ಅಂತೆ- ಕಂತೆಗಳಿಗೆ ಈಗ ಮರು ಜೀವ ಸಿಕ್ಕಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಈ ಬಾರಿ ಕಾರವಾರ ಅಥವಾ ಕುಮಟಾದಲ್ಲಿ ಟಿಕೆಟ್‌ ಕೊಡುತ್ತಾರಂತೆ... ಶಶಿಭೂಷಣ ಹೆಗಡೆ ಅವರಿಗೆ ಶಿರಸಿ- ಸಿದ್ದಾಪುರ ಟಿಕೆಟ್‌ ಅಂತೆ... ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಶಶಿಭೂಷಣ ಹೆಗಡೆ ಅವರನ್ನು ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಮಾಡುವ ಉದ್ದೇಶದಿಂದ ಬಿಜೆಪಿಗೆ ಕರೆತಂದಿದ್ದಾರಂತೆ... ಅನಂತಕುಮಾರ ಬದಲು ಇವರಂತೆ... ಕಾಗೇರಿ ಅವರನ್ನೇ ಲೋಕಸಭೆಗೆ ನಿಲ್ಲಿಸ್ತಾರಂತೆ. 

ಇಲ್ಲಿ ಶಶಿಭೂಷಣ ಹೆಗಡೆ ಅವರಿಗೆ ಟಿಕೆಟ್‌ ಅಂತೆ... ನಗರದ ಪಾನಂಗಡಿಗಳ ಮುಂದೆ ನಿಂತು ಪಾನ್‌ ಅಗೆಯುತ್ತಿರುವವರು, ಗೂಡಂಗಡಿಗಳಲ್ಲಿ ಕುಳಿತು ಚಹಾ ಹೀರುತ್ತಿರುವವರು, ಹಳ್ಳಿಗಳ ಹಾಲು ಡೇರಿಯಲ್ಲಿ ಕುಳಿತವರ ಬಾಯಲ್ಲಿ ಬರುತ್ತಿರುವ ಮಾತುಗಳಿವು. ಶಶಿಭೂಷಣ ಹೆಗಡೆ ರಾಮಕೃಷ್ಣ ಹೆಗಡೆ ಕುಟುಂಬದವರೇ ಆದರೂ ರಾಜಕೀಯದಲ್ಲಿ ತಮ್ಮದೇ ಆದ ಇಮೇಜು ಬೆಳೆಸಿಕೊಂಡು ಬಂದವರು. ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಾಬಲ್ಯ ಅಷ್ಟಾಗಿ ಇಲ್ಲ. ಅಲ್ಲದೇ ರಾಮಕೃಷ್ಣ ಹೆಗಡೆ ಅವರಿಗೆ ಜೆಡಿಎಸ್‌ನಲ್ಲಿ ಅನ್ಯಾಯ ಮಾಡಲಾಗಿತ್ತು ಎಂಬುದನ್ನು ಕ್ಷೇತ್ರದ ಜನತೆ ಇಂದಿಗೂ ಹೇಳುತ್ತಾರೆ. 

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಈ ಎಲ್ಲದರ ನಡುವೆ 2013ರ ಚುನಾವಣೆಯಲ್ಲಿ ಶಶಿಭೂಷಣ ಹೆಗಡೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮದವರೆಗೂ ಮತ ಪಡೆದು ಸೋಲುಂಡಿದ್ದರು. ಈ ಮಟ್ಟದ ಸಾಧನೆಗೆ ಶಶಿಭೂಷಣ ಹೆಗಡೆ ಅವರ ವ್ಯಕ್ತಿತ್ವವೇ ಕಾರಣ ಎಂಬುದನ್ನು ಎಲ್ಲ ಪಕ್ಷದ ಮುಖಂಡರೂ ಒಪ್ಪುತ್ತಾರೆ. ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯವಿದೆ. ಕಳೆದ ಹಲವು ಅವಧಿಯಿಂದಲೂ ಇಲ್ಲಿ ಬಿಜೆಪಿ ಅಭ್ಯರ್ಥಿಗಳೇ ಅಯ್ಕೆ ಆಗಿದ್ದಾರೆ. ಈ ಬಾರಿಯೂ ವಿಧಾನಸಭಾಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಅವರಿಗೆ ಇಲ್ಲಿಂದಲೇ ಟಿಕೆಟ್‌ ಎಂಬುದೂ ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಈ ವಿಷಯಯವನ್ನು ಶಿರಸಿಗೆ ಆಗಮಿಸಿದ್ದಾಗ ಹೇಳಿದ್ದಾರೆ.

ಆದರೆ, ಕ್ಷೇತ್ರದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಗ್ಗೆ ಪಕ್ಷದ ಒಳಗೂ ಕೆಲ ಅಸಮಾಧಾನಗಳಿವೆ. ಮಾಜಿ ಜಿಲ್ಲಾಧ್ಯಕ್ಷ, ಸಿದ್ದಾಪುರದ ಕೆ.ಜಿ. ನಾಯ್ಕ ಅವರೊಂದಿಗಿನ ಕಾಗೇರಿ ಅವರ ಸಂಬಂಧ ಇತ್ತೀಚೆಗೆ ಮೊದಲಿನಂತಿಲ್ಲ. ಪಕ್ಷದ ಆಂತರಿಕ ಸಭೆಗಳಲ್ಲಿಯೂ ಕೆಲವರು ಕಾಗೇರಿ ಬದಲು ಬೇರೆ ಅಭ್ಯರ್ಥಿ ಕಣಕ್ಕಿಳಿಸಿ ಎಂದು ಆಗ್ರಹಿಸಿರುವ ಘಟನೆಗಳೂ ನಡೆದಿವೆ. ಶಶಿಭೂಷಣ ಹೆಗಡೆ ಬಿಜೆಪಿಗೆ ಸೇರ್ಪಡೆ ಪಕ್ಷಕ್ಕೆ ಇನ್ನಷ್ಟುಬಲ ತುಂಬಿತೆ ಅಥವಾ ಈಗಾಗಲೇ ಪಕ್ಷದಲ್ಲಿ ಬಲವಾಗಿರುವವರಿಗೆ ಬಲ ಕುಸಿಯುವಂತಾಯಿತೆ ಎಂಬುದು ಎಲ್ಲರ ಪ್ರಶ್ನೆ. 

ಟಿಕೆಟ್‌ ಘೋಷಣೆ ಆದ ಮೇಲೆ ಶಶಿಭೂಷಣ ಬಿಜೆಪಿಗೆ ಬಂದಿದ್ದರೆ ಈ ಪ್ರಶ್ನೆ ಬರುತ್ತಿರಲಿಲ್ಲ. ಈ ಕ್ಷಣದಲ್ಲಿ ತುರ್ತಾಗಿ ಪಕ್ಷ ಸೇರಿದ್ದು ನೋಡಿದರೆ ಟಿಕೆಟ್‌ ಅವರಿಗೆ ಅಂತಮವಾದಂತಿದೆ ಎನ್ನುತ್ತಿದ್ದಾರೆ. ಶಶಿಭೂಷಣ ಹೆಗಡೆ ಪಕ್ಷಕ್ಕೆ ಆಗಮಿಸುವುದು ಮೊದಲೇ ನಿಶ್ಚಿತವಾಗಿತ್ತು. ಸ್ವಲ್ಪ ವಿಳಂಬ ಆಗಿದೆ ಅಷ್ಟೇ. ಅವರ ಆಗಮನಕ್ಕೂ ಟಿಕೆಟಿಗೂ ಸಂಬಂಧ ಇಲ್ಲ ಎಂದು ಇನ್ನು ಕೆಲವರು ವಾದಿಸುತ್ತಿದ್ದಾರೆ. ಶಶಿಭೂಷಣ ಹೆಗಡೆ ಪಕ್ಷ ಸೇರ್ಪಡೆ ಕ್ಷೇತ್ರದಲ್ಲಿ ಸಂಚಲನವಂತೂ ಮೂಡಿಸಿದೆ. ಬಿಜೆಪಿ ಟಿಕೆಟ್‌ ಘೋಷಣೆ ಆಗುವ ವರೆಗೂ ಗೊಂದಲಗಳ ಚರ್ಚೆ ಕ್ಷೇತ್ರದ ಎಲ್ಲೆಡೆ ಕೇಳಿಬರಲಿದೆ.

ಕಾಂಗ್ರೆಸ್‌ನಿಂದ ಮಾತ್ರ ಬಡವರ ಏಳ್ಗೆ: ಮಾಜಿ ಸಚಿವ ಮೇಟಿ

ಮೌಲ್ಯಾಧಾರಿತ ರಾಜಕಾರಣದ ಮೇರು ನಾಯಕ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದೊಡ್ಮನೆ ಅವರ ಮೊಮ್ಮಗ ಶಶಿಭೂಷಣ ಹೆಗಡೆ ಅವರ ಬಿಜೆಪಿ ಸೇರ್ಪಡೆ ಸಂತಸ ತಂದಿದೆ. ಶೈಕ್ಷಣಿಕ ರಂಗದಲ್ಲಿ ತನ್ನದೆ ಆದ ಕಾರ್ಯ ಚಟುವಟಿಕೆ ಹೊಂದಿರುವ ಶಶಿಭೂಷಣ್‌ ಪಕ್ಷಕ್ಕೆ ಶಕ್ತಿ ನೀಡಬಲ್ಲರು. ತಮ್ಮ ಅಪಾರ ಬೆಂಬಲಿಗರೊಂದಿಗೆ ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿರುವುದನ್ನು ನಾನು ಆತ್ಮೀಯವಾಗಿ ಸ್ವಾಗತಿಸುತ್ತೇನೆ.
-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ

Latest Videos
Follow Us:
Download App:
  • android
  • ios