ಗಿಗ್ ಕಾರ್ಮಿಕರಿಗೆ, ಮೋಟಾರು ಸಾರಿಗೆ ಕಾರ್ಮಿಕರಿಗೆ ಹಾಗೂ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರಿಗಾಗಿ ಹೊಸ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಬೆಂಗಳೂರು (ಮೇ.28): ರಾಜ್ಯದ ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರ ಸಬಲೀಕರಣಕ್ಕಾಗಿ ಕಳೆದೆರಡು ವರ್ಷಗಳಲ್ಲಿ ಕಾರ್ಮಿಕ ಇಲಾಖೆಯು ಹಲವು ಹೊಸ ಕ್ರಮಗಳ ಜತೆಗೆ ಕಾನೂನುಗಳನ್ನು ರೂಪಿಸಿದ್ದು, ಪ್ರಮುಖವಾಗಿ ಗಿಗ್ ಕಾರ್ಮಿಕರಿಗೆ, ಮೋಟಾರು ಸಾರಿಗೆ ಕಾರ್ಮಿಕರಿಗೆ ಹಾಗೂ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರಿಗಾಗಿ ಹೊಸ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ತಮ್ಮ ಕಾರ್ಮಿಕ ಇಲಾಖೆ ಕೈಗೊಂಡಿರುವ ಹೊಸ ಕ್ರಮಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಂತೋಷ್ ಲಾಡ್, ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಮತ್ತು ಅವರ ಸಬಲೀಕರಣಕ್ಕಾಗಿ ಹಲವು ವಿನೂತನ ಕ್ರಮ ಕೈಗೊಳ್ಳಲಾಗಿದೆ. ಪ್ರಮುಖವಾಗಿ ವಿಧೇಯಕ, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಅಧಿನಿಯಮ ಹಾಗೂ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕದಂಥ ಮೂರು ಕ್ರಾಂತಿಕಾರಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದಿದ್ದಾರೆ.
ಗಿಗ್ ಕಾರ್ಮಿಕರಿಗೆ ಸಂಬಂಧಿಸಿದ ಕಾಯ್ದೆಯಲ್ಲಿ ಫಲಾನುಭವಿ ಮರಣದ ನಂತರ ವಾರಸುದಾರರಿಗೆ 2 ಲಕ್ಷ ರು. ಜೀವವಿಮೆ ಪರಿಹಾರ, ಅಪಘಾತ ಮರಣ ಪ್ರಕರಣದಲ್ಲಿ 2 ಲಕ್ಷ ರು. ಅಪಘಾತ ವಿಮಾ ಪರಿಹಾರ, ಅಂಗವಿಕಲತೆಗೆ ಶೇಕಡಾವಾರು ದುರ್ಬಲತೆ ಆಧಾರದಲ್ಲಿ 2 ಲಕ್ಷ ರು. ಪರಿಹಾರ ಹಾಗೂ ಆಸ್ಪತ್ರೆ ವೆಚ್ಚ ಮರುಪಾವತಿಗೆ 1 ಲಕ್ಷ ರು. ಸಹಾಯಧನ ನೀಡಲಾಗುತ್ತದೆ. ಇದು ದೇಶದಲ್ಲಿಯೇ ಮಾದರಿ ಕಾಯ್ದೆಯಾಗಿದೆ.
ಅದೇ ರೀತಿ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರಿಗೆ ಸಂಬಂಧಿಸಿದ ಕಾಯ್ದೆಯಲ್ಲಿ ಅಪಘಾತ ಮರಣ ಪ್ರಕರಣದಲ್ಲಿ 1 ಲಕ್ಷ ರು. ವಿಮಾ ಪರಿಹಾರ, ಅಂಗವಿಕಲತೆಗೆ 1 ಲಕ್ಷ ರು.ವರೆಗೆ ಪರಿಹಾರ ಹಾಗೂ 50 ಸಾವಿರ ರು. ಆಸ್ಪತ್ರೆ ವೆಚ್ಚ ಮರುಪಾವತಿ ಸಹಾಯಧನ ದೊರೆಯಲಿದೆ. ಹಾಗೆಯೇ, ಸಾರಿಗೆ ಕಾರ್ಮಿಕರ ಕಾಯ್ದೆಯಲ್ಲಿ ಅಪಘಾತದಿಂದ ಮರಣ ಹೊಂದಿದರೆ 5 ಲಕ್ಷ ರು. ಪರಿಹಾರ, ಅಪಘಾತದಿಂದ ಶಾಶ್ವತ ಅಂಗವಿಕಲತೆಗೆ 2 ಲಕ್ಷ ರು, ತಾತ್ಕಾಲಿಕ ದುರ್ಬಲರಾದರೆ ಗರಿಷ್ಠ 1 ಲಕ್ಷ ರು. ಹಾಗೂ ಆಸ್ಪತ್ರೆ ವೆಚ್ಚ ಮರುಪಾವತಿ ಸಹಾಯಧನ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಹೊರಗುತ್ತಿಗೆ ಕಾರ್ಮಿಕ ಸೇವೆಗೆ ಸೊಸೈಟಿ ರಚನೆ: ಹೊರಗುತ್ತಿಗೆ ಕಾರ್ಮಿಕರ ನೇಮಕದಲ್ಲಿದ್ದ ಗೊಂದಲಗಳ ನಿವಾರಣೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ಜಿಲ್ಲೆಯಲ್ಲಿ ಹೊರಗುತ್ತಿಗೆ ಕಾರ್ಮಿಕ ಸೇವೆ ಒದಗಿಸುವ ಸೊಸೈಟಿ ರಚಿಸುವ ಹೊಸ ಪರಿಕಲ್ಪನೆ ಜಾರಿಗೊಳಿಸಲಾಗಿದೆ. ಮೊದಲಿಗೆ ಬೀದರ್ ಜಿಲ್ಲೆಯಲ್ಲಿ ಈ ಪ್ರಯೋಗ ಮಾಡಲಾಗಿದ್ದು, ಅದು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ತುಮಕೂರು, ಮೈಸೂರು ಹಾಗೂ ಧಾರವಾಡ ಜಿಲ್ಲೆಗಳಲ್ಲೂ ಸೊಸೈಟಿ ರಚಿಸಲಾಗುತ್ತದೆ. ಅದಾದ ನಂತರ ರಾಜ್ಯಾದ್ಯಂತ ಅದನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಖಾಸಗಿ ಸಂಸ್ಥೆಗಳಲ್ಲಿ ಎಸ್ಸಿ/ಎಸ್ಟಿಗಳಿಗೆ ಉದ್ಯೋಗ: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕಾರ್ಮಿಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಆಶಾ ದೀಪ ಯೋಜನೆ ಜಾರಿಗೊಳಿಸಲಾಗಿದ್ದು, ಅದರಿಂದ ಒಟ್ಟಾರೆ 5,733 ಮಂದಿ ಪ್ರಯೋಜನ ಪಡೆದಿದ್ದಾರೆ. ಅದರ ಜತೆಗೆ ವಲಸೆ ಕಟ್ಟಡ ಕಾರ್ಮಿಕರಿಗಾಗಿ ವಸತಿ ಸಮುಚ್ಚಯ ನಿರ್ಮಾಣ, 43 ಸ್ಥಳಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರಗಳ ಸ್ಥಾಪನೆ, 65 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಕಡ್ಡಾಯ ಉಪಧನ ಕಾಯ್ದೆ, ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಎಲ್ಲ ಜಿಲ್ಲೆಗಳಲ್ಲಿ ಶ್ರಮಿಕ ವಸತಿ ಶಾಲೆಗಳ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
