Asianet Suvarna News Asianet Suvarna News

ಪಕ್ಷ ಬಿಟ್ಟರೆ ಹಿನ್ನಡೆ ಸಾಧ್ಯತೆ; ಸೋಮಣ್ಣ ಮನ ಒಲಿಸುವಂತೆ ಬಿಜೆಪಿಗರ ಕೂಗು

ಪ್ರಬಲ ಸಂಘಟಕ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಗಂಭೀರವಾಗಿ ನಡೆಯಬೇಕು ಎಂಬ ಕೂಗು ಬಿಜೆಪಿ ಪಾಳೆಯದಲ್ಲಿ ಕೇಳಿಬರುತ್ತಿದೆ.

If V Somanna leaves the party, it will be a setback for the BJP Karnataka rav
Author
First Published Dec 10, 2023, 6:35 AM IST

ಬೆಂಗಳೂರು (ಡಿ.10) : ಪ್ರಬಲ ಸಂಘಟಕ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಗಂಭೀರವಾಗಿ ನಡೆಯಬೇಕು ಎಂಬ ಕೂಗು ಬಿಜೆಪಿ ಪಾಳೆಯದಲ್ಲಿ ಕೇಳಿಬರುತ್ತಿದೆ.

ಮುಂಬರುವ ಲೋಕಸಭಾ ಚುನಾವಣೆ ಉದ್ದೇಶದಿಂದ ಸೋಮಣ್ಣ ಅವರನ್ನು ಮನವೊಲಿಸಿ ಸೂಕ್ತ ಸ್ಥಾನಮಾನ ಕಲ್ಪಿಸಬೇಕು. ಅವರ ಸಾಮರ್ಥ್ಯವನ್ನು ಬಳಸಿಕೊಳ್ಳುವಂತಾಗಬೇಕು. ಇಲ್ಲದಿದ್ದರೆ ಪಕ್ಷಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವನ್ನು ಪಕ್ಷದಲ್ಲಿನ ಅವರ ಬೆಂಬಲಿಗರು ಹಾಗೂ ಹಿತೈಷಿಗಳು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ಮನವಿಯನ್ನೂ ಮಾಡಿದ್ದಾರೆ.

ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ನೆರವು ಸಿಎಂ ಹೇಳಿಕೆಗೆ ಎಂಪಿ ರೇಣುಕಾಚಾರ್ಯ ಫುಲ್ ಗರಂ!

ಹಿಂದೆ ಎರಡು ಬಾರಿ ಬಿಜೆಪಿ ಸರ್ಕಾರ ರಚನೆ ಬಳಿಕ ನಡೆದ ಹಲವು ಉಪಚುನಾವಣೆಗಳಲ್ಲಿ ಸೋಮಣ್ಣ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ವಿವಿಧ ಹಂತದಲ್ಲಿ ತಮಗೆ ವಹಿಸಿದ್ದ ಸುಮಾರು 9 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಲ್ಲಿ ಸೋಮಣ್ಣ ಅವರ ತಂತ್ರಗಾರಿಕೆ ಯಶಸ್ಸು ಕಂಡಿದೆ. ಅಲ್ಲದೆ, ವಿಧಾನಪರಿಷತ್ತಿನ ವಿವಿಧ ಕ್ಷೇತ್ರಗಳ ಚುನಾವಣೆ, ಕಳೆದ 2014 ಮತ್ತು 2019ರ ಲೋಕಸಭಾ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಗಳಲ್ಲಿ ಸೋಮಣ್ಣ ಅವರ ಪ್ರಭಾವ ನಿರೂಪಿತವಾಗಿದೆ. ಈಗ ವಿಧಾನಸಭಾ ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ಅವರನ್ನು ಪಕ್ಷ ಕೈಬಿಡುವುದು ಸರಿಯಲ್ಲ ಎಂಬ ಆಕ್ರೋಶ ಅವರ ಬೆಂಬಲಿಗರಿಂದ ವ್ಯಕ್ತವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಅವರು ತಮ್ಮ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ತೊರೆದು ಚಾಮರಾಜನಗರ ಮತ್ತು ವರುಣಾ ಕ್ಷೇತ್ರಗಳಿಂದ ಸ್ಪರ್ಧಿಸಿ ಸೋಲುಂಡರು. ತಮ್ಮ ಸೋಲಿಗೆ ಸ್ವಪಕ್ಷೀಯರೇ ಕಾರಣ ಎಂದು ಆರೋಪಿಸಿ ಮುನಿಸಿಕೊಂಡಿರುವ ಸೋಮಣ್ಣ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಈವರೆಗೆ ಗಂಭೀರವಾಗಿ ನಡೆದಿಲ್ಲ.

ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಮನವೊಲಿಸಲು ಚುನಾವಣೆಗೂ ಮುನ್ನ ಸ್ವತಃ ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರು ಸೋಮಣ್ಣ ಅವರ ಮನೆಗೇ ತೆರಳಿ ಸುದೀರ್ಘ ಮಾತುಕತೆ ನಡೆಸಿದ್ದರು. ಪಕ್ಷದ ವರಿಷ್ಠರ ಸೂಚನೆಯನ್ನು ತಲೆ ಮೇಲೆ ಹೊತ್ತು ಶ್ರಮಿಸಿದರೂ ವಿವಿಧ ಕಾರಣಗಳಿಂದಾಗಿ ಗೆಲುವು ದಕ್ಕಲಿಲ್ಲ. ಆದರೆ, ಸೋತ ಬಳಿಕ ಸೋಮಣ್ಣ ಅವರನ್ನು ಸಂತೈಸುವ ಪ್ರಯತ್ನ ವರಿಷ್ಠರಿಂದ ಆಗಲಿಲ್ಲ. ಇದು ಸೋಮಣ್ಣ ಮತ್ತವರ ಬೆಂಬಲಿಗರಿಗೆ ನೋವು ಉಂಟು ಮಾಡಿದೆ.

ಈ ಮಧ್ಯೆ ಆಡಳಿತಾರೂಢ ಕಾಂಗ್ರೆಸ್ ನಾಯಕರು ಸೋಮಣ್ಣ ಅವರನ್ನು ಸೆಳೆಯುವ ಪ್ರಯತ್ನ ತೀವ್ರವಾಗಿ ನಡೆಸಿರುವುದು ಗುಟ್ಟಿನ ವಿಷಯವೇನಲ್ಲ. ಇದೇ ವೇಳೆ ಸೋಮಣ್ಣ ಅವರು ತಾವು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂಬುದನ್ನು ಬಹಿರಂಗವಾಗಿಯೇ ಹೇಳಿದ್ದರು. ಆದರೂ ಪಕ್ಷದ ವರಿಷ್ಠರು ಅದನ್ನು ಲೆಕ್ಕಿಸದೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿತು.

ಈಗ ರಾಜ್ಯಾಧ್ಯಕ್ಷ ಸ್ಥಾನದಿಂದ ವಂಚಿತರಾಗಿರುವುದರಿಂದ ಅವರನ್ನು ಕಾಂಗ್ರೆಸ್ಸಿಗೆ ಸೆಳೆಯುವ ಪ್ರಯತ್ನ ಇನ್ನಷ್ಟು ತೀವ್ರವಾಗಿದೆ ಎನ್ನಲಾಗಿದೆ. ಹೀಗಾಗಿ, ಪಕ್ಷದ ಇತರ ಸ್ಥಾನಮಾನ ನೀಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಕ್ಷೇತ್ರವೊಂದರಿಂದ ಸೋಮಣ್ಣ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬಹುದು. ಆದರೆ, ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲೂ ಸ್ವಪಕ್ಷೀಯರೇ ಸೋಲಿಗೆ ಪ್ರಯತ್ನಿಸಬಹುದು ಎಂಬ ಆತಂಕ ಇರುವುದರಿಂದ ಜೂನ್‌ನಲ್ಲಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಸೋಮಣ್ಣ ಅವರನ್ನು ಪರಿಗಣಿಸಬಹುದು. ಲೋಕಸಭಾ ಚುನಾವಣೆಯ ಕಾವು ಏರುವ ಮೊದಲೇ ಸೋಮಣ್ಣ ಅವರ ಕೋಪವನ್ನು ಶಮನಗೊಳಿಸಿ ಅವರ ಸಂಘಟನಾ ಸಾಮರ್ಥ್ಯವನ್ನು ಬಳಸಿಕೊಳ್ಳುವಂತಾಗಬೇಕು ಎಂಬ ಒತ್ತಾಯದ ಮಾತು ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬರುತ್ತಿದೆ.

ಪಕ್ಷ ವಿರೋಧಿ ಚಟುವಟಿಕೆ; ಜೆಡಿಎಸ್‌ನಿಂದ ಸಿಎಂ ಇಬ್ರಾಹಿಂ,ಕೇರಳದ ಸಿಕೆ ನಾನು ಉಚ್ಚಾಟನೆ

ಸಂಸತ್‌ ಸ್ಥಾನಕ್ಕೆ ಪರಿಗಣಿಸಿ: ಬೇಡಿಕೆ

ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಕ್ಷೇತ್ರವೊಂದರಿಂದ ಸೋಮಣ್ಣ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬಹುದು. ಆದರೆ, ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲೂ ಸ್ವಪಕ್ಷೀಯರೇ ಸೋಲಿಗೆ ಪ್ರಯತ್ನಿಸಬಹುದು ಎಂಬ ಆತಂಕ ಇರುವುದರಿಂದ ಜೂನ್‌ನಲ್ಲಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಸೋಮಣ್ಣ ಅವರನ್ನು ಪರಿಗಣಿಸಬಹುದು ಎಂದು ಬೆಂಬಲಿಗರು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios