ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪೆನ್‌ ಡ್ರೈವ್‌ ಪ್ರದರ್ಶಿಸಿ ಮಾಡುತ್ತಿರುವ ಆರೋಪಕ್ಕೆ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ಜು.09): ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪೆನ್‌ ಡ್ರೈವ್‌ ಪ್ರದರ್ಶಿಸಿ ಮಾಡುತ್ತಿರುವ ಆರೋಪಕ್ಕೆ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ, ತಾಕತ್‌ ಇದ್ದರೆ ಕುಮಾರಸ್ವಾಮಿ ಪೆನ್‌ಡ್ರೈವ್‌ನಲ್ಲೇನಿದೆ ಎಂಬುದನ್ನು ತೋರಿಸಲಿ ಎಂದು ಸಚಿವರಾದ ಕೆ.ಎನ್‌.ರಾಜಣ್ಣ, ಶರಣ ಪ್ರಕಾಶ್‌ ಪಾಟೀಲ್‌, ಎಸ್‌.ಎಸ್‌.ಮಲ್ಲಿಕಾರ್ಜುನ ತಿರುಗೇಟು ನೀಡಿದ್ದಾರೆ. ನನಗೆ ಕುಮಾರಸ್ವಾಮಿ ಅವರ ಪೆನ್‌ಡ್ರೈವ್‌ ವಿಚಾರದಲ್ಲಿ ಯಾವುದೇ ಕುತೂಹಲ ಇಲ್ಲ. ಹಳ್ಳಿಜಾತ್ರೆಗಳಲ್ಲಿ ಬುಟ್ಟಿಇಟ್ಟುಕೊಂಡು ಹಾವಿದೆ, ಹಾವಿದೆ ಎಂದು ಹೇಳುತ್ತಾರೆ. 

ಆ ಬುಟ್ಟಿಯಲ್ಲಿ ಹಾವು ಇರುವುದೇ ಇಲ್ಲ. ಅದೇ ರೀತಿ ಕುಮಾರಸ್ವಾಮಿ ಪೆನ್‌ಡ್ರೈವ್‌ ಇಟ್ಕೊಂಡು ಸಮ್ಮನೆ ಓಡಾಡುತ್ತಿದ್ದಾರೆ. ಒಂದು ವೇಳೆ ಪೆನ್‌ಡ್ರೈವ್‌ನಲ್ಲಿ ಅಂಥ ಮಹತ್ವದ ವಿಚಾರ ಇದ್ದರೆ ಬಿಡುಗಡೆಗೆ ತಡಯಾಕೆ? ತಾಕತ್ತಿದ್ದರೆ ಈಗಲೇ ಪೆನ್‌ಡ್ರೈವ್‌ನಲ್ಲೇನಿದೆ ಎಂಬುದನ್ನು ತೋರಿಸಲಿ, ಅದನ್ನು ಬಿಟ್ಟು ವಿಳಂಬ ಮಾಡುವ ಹಿಂದೆ ದಂಧೆ ಮಾಡುವ ಉದ್ದೇಶ ಇದೆಯಾ ಎಂದು ಪ್ರಶ್ನಿಸಿದರು. ಈ ಮಧ್ಯೆ, ಕುಮಾರಸ್ವಾಮಿ ಬಳಿ ಇರುವ ಪೆನ್‌ಡ್ರೈವ್‌ ತೋರಿಸಲು ನಾವೂ ಕೇಳಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಮತ್ತು ತೋಟಗಾರಿಕಾ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹೇಳಿದರೆ, ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್‌ ಅಸಮಾಧಾನ ಹೊರಹಾಕಿದ್ದಾರೆ.

ಅಮರನಾಥ ಭೂಕುಸಿತ: 80 ಕನ್ನಡಿಗರು ಅತಂತ್ರ, ರಕ್ಷಣೆಗೆ ರಾಜ್ಯ ಸರ್ಕಾರದಿಂದ ತಂಡ ರವಾನೆ

ಸುಮ್ಮನೆ ಪೆನ್‌ಡ್ರೈವ್‌ ತೋರಿಸಬೇಡಿ, ಸಾಕ್ಷಿ ಕೊಡಿ: ವರ್ಗಾವಣೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕುರಿತು ದಾಖಲೆಗಳಿದ್ದರೆ ನೀಡಿ. ತನಿಖೆ ನಡೆಸಲು ನಾವು ತಯಾರಿದ್ದೇವೆ. ಸುಮ್ಮನೇ ತೇಜೋವಧೆ ಮಾಡುವ ಕೆಲಸ ಮಾಡಬೇಡಿ ಎಂದು ಸಚಿವ ಕೆ.ಜೆ.ಜಾಜ್‌ರ್‍ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮೇಲೆ ಹರಿಹಾಯ್ದರು. ಕೆಎಸ್ಸಾರ್ಟಿಸಿ ಚಾಲಕ ಜಗದೀಶ್‌ ಆತ್ಮಹತ್ಯೆ ಯತ್ನ ಪ್ರಕರಣದ ಚರ್ಚೆ ವೇಳೆ ಎಚ್‌.ಡಿ. ಕುಮಾರಸ್ವಾಮಿ ಅವರು, ಡಿವೈಎಸ್ಪಿ ಗಣಪತಿ, ಐಎಎಸ್‌ ಅಧಿಕಾರಿ ಡಿ.ಕೆ. ರವಿ, ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಾಗ ಸಂಬಂಧಪಟ್ಟಸಚಿವರು ರಾಜೀನಾಮೆ ನೀಡಿದ್ದರು ಎಂದು ಪ್ರಸ್ತಾಪಿಸಿದರು. ಅದರಿಂದ ಸಿಟ್ಟಾದ ಕೆ.ಜೆ. ಜಾರ್ಜ್‌, ಡಿವೈಎಸ್ಪಿ ಗಣಪತಿ, ಐಎಎಸ್‌ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ವಿರುದ್ಧ ತೇಜೋವಧೆ ಮಾಡಿದಿರಿ. 

Mandya: ಕೆಆರ್‌ಎಸ್‌ ಒಳಹರಿವಿನಲ್ಲಿ ಹೆಚ್ಚಳ: ಒಂದೇ ದಿನದಲ್ಲಿ ಎರಡು ಅಡಿ ನೀರು ಏರಿಕೆ

ಆಗ ನಾವು ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದೆವು. ತನಿಖೆಯಲ್ಲಿ ನನ್ನ ಹಾಗೂ ಸರ್ಕಾರದ ತಪ್ಪಿಲ್ಲ ಎಂದು ವರದಿ ನೀಡಲಾಯಿತು. ಆನಂತರ ಆ ಬಗ್ಗೆ ಮಾತನಾಡಲೇ ಇಲ್ಲ. ಸುಮ್ಮನೆ ಸಚಿವರ ತೇಜೋವಧೆ ಮಾಡುವುದನ್ನು ಬಿಡಿ ಎಂದರು. ಆಗ ಎಚ್‌.ಡಿ.ಕುಮಾರಸ್ವಾಮಿ ಅವರು, ನಿಮ್ಮ ಮತ್ತು ನಿಮ್ಮ ಇಲಾಖೆ ಹಣೆಬರಹ ಗೊತ್ತಿದೆ. ತನಿಖೆ ಮಾಡುವ ತಾಕತ್ತಿದೆಯೇ? ನಾನು ಯಾರ ಹೆಸರನ್ನೂ ಹೇಳಿಲ್ಲ. ಸುಮ್ಮನೆ ನೀವೇಕೆ ಕೂಗಾಡುತ್ತೀರಿ ಎಂದು ತಿಳಿಸಿದರು. ಅದಕ್ಕೆ ಕೆ.ಜೆ. ಜಾಜ್‌ರ್‍ ಪ್ರತಿಕ್ರಿಯಿಸಿ, ನಮಗೆ ತಾಕತ್ತಿದೆ. ನೀವು ಸಾಕ್ಷಿ ನೀಡಿ. ಸುಮ್ಮನೆ ಪೆನ್‌ಡ್ರೈವ್‌ ಇದೆ ಎಂದೆಲ್ಲ ಹೇಳಬೇಡಿ ಎಂದರು. ಅಲ್ಲದೆ, ಬಿಜೆಪಿ ಕಡೆ ತಿರುಗಿ ನಿಮಗೆ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಎಚ್‌.ಡಿ. ಕುಮಾರಸ್ವಾಮಿ ಅವರನ್ನೇ ವಿರೋಧಪಕ್ಷದ ನಾಯಕನನ್ನಾಗಿ ಮಾಡಿಕೊಳ್ಳಿ ಎಂದು ಹೇಳಿದರು.