ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲವೆಂದರೆ ನನ್ನಂತ ಮೂರ್ಖ ಯಾರಿಲ್ಲ: ಕೆಂಪಣ್ಣ
ಕಾಂಗ್ರೆಸ್ ಆಳ್ವಿಕೆಯಲ್ಲೂ ಭ್ರಷ್ಟಾಚಾರವಿದೆ. ಹಿಂದೆ ಬಿಜೆಪಿ ಆಡಳಿತದಲ್ಲೂ ಭ್ರಷ್ಟಾಚಾರವಿತ್ತು. ಈಗ ಭ್ರಷ್ಟಾಚಾರ ಇಲ್ಲ ಎಂದು ಹೇಳಿದರೆ ನನ್ನಷ್ಟು ಮೂರ್ಖ ಇನ್ನೊಬ್ಬ ಇರುವುದಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ.

ಬೆಂಗಳೂರು (ಅ.18): ಕಾಂಗ್ರೆಸ್ ಆಳ್ವಿಕೆಯಲ್ಲೂ ಭ್ರಷ್ಟಾಚಾರವಿದೆ. ಹಿಂದೆ ಬಿಜೆಪಿ ಆಡಳಿತದಲ್ಲೂ ಭ್ರಷ್ಟಾಚಾರವಿತ್ತು. ಈಗ ಭ್ರಷ್ಟಾಚಾರ ಇಲ್ಲ ಎಂದು ಹೇಳಿದರೆ ನನ್ನಷ್ಟು ಮೂರ್ಖ ಇನ್ನೊಬ್ಬ ಇರುವುದಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಆದಾಯ ತರಿಗೆ ಇಲಾಖೆಯಿಂದ ಗುತ್ತಿಗೆದಾರರ ನಿವಾಸಗಳ ಮೇಲೆ ದಾಳಿ ನಡೆಸಿ ಕೋಟ್ಯಂತರ ರು. ವಶಪಡಿಸಿಕೊಳ್ಳುತ್ತಿರುವ ಬೆನ್ನ ಹಿಂದೆಯೇ ಕುಮಾರಕೃಪಾ ಅತಿಥಿ ಗೃಹದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನಾವು ಆರೋಪಿಸಿದ್ದೆವು. ಈಗಿನ ಕಾಂಗ್ರೆಸ್ ಸರ್ಕಾರದಲ್ಲೂ ಭ್ರಷ್ಟಾಚಾರವಿದೆ. ಇಲ್ಲ ಎಂದು ನಾವು ಹೇಳುತ್ತಿಲ್ಲ. ಹೇಳಿದರೆ ನನ್ನಷ್ಟು ಮೂರ್ಖ ಇನ್ನೊಬ್ಬನಿಲ್ಲ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಗುತ್ತಿಗೆದಾರರ ಬಿಲ್‌ಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡಬೇಕು. ಹಳೆಯ ಬಿಲ್‌ಗಳಿಗೆ ಆದ್ಯತೆ ನೀಡುತ್ತಿಲ್ಲ ಎಂಬುದು ಸೇರಿ ಹಲವು ಸಮಸ್ಯೆಗಳನ್ನು ಶಿವಕುಮಾರ್ ಅವರ ಗಮನಕ್ಕೆ ತಂದಿದ್ದೇವೆ. ಬಿಬಿಎಂಪಿ ಆಯುಕ್ತರ ವಿರುದ್ಧ ನಾನು ದೂರು ನೀಡಿಲ್ಲ. ಕೆಲವೊಂದು ಅಧಿಕಾರಿಗಳು ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಹಿಂದೆ ಆರೋಪಿಸಿದ್ದೆ. ಈಗಲೂ ಅದನ್ನೇ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಒರಿಜಿನಲ್ ಜೆಡಿಎಸ್‌ಗೆ ನಾನೇ ಅಧ್ಯಕ್ಷ, ಇಂಡಿಯಾಕ್ಕೆ ನಮ್ಮ ಬೆಂಬಲ: ಇಬ್ರಾಹಿಂ
ಬಿಲ್ ಪಾವತಿಯಲ್ಲಿ ಅವ್ಯವಹಾರ: ಸೀನಿಯಾರಿಟಿ ಬದಿಗಿಟ್ಟು ಬಿಲ್ ನೀಡುತ್ತಿರುವುದರಿಂದ ಬಿಲ್ ಪಾವತಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬುದನ್ನು ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು ಸರಿಪಡಿಸುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಈ ತಿಂಗಳಾಂತ್ಯದೊಳಗೆ ಹಣ ಬಿಡುಗಡೆ ಮಾಡಿಸುವುದಾಗಿ ತಿಳಿಸಿದ್ದಾರೆ. ಎಸ್‌ಐಟಿ ತನಿಖೆಗೆ ನಾವು ವಿರೋಧ ಮಾಡಿಲ್ಲ. ಸಮಸ್ಯೆ ಇರುವ ಕಾಮಗಾರಿಗಳನ್ನು ಬಿಟ್ಟು ಉಳಿದ ಕಾಮಗಾರಿಗಳ ಬಿಲ್ ಬಿಡುಗಡೆ ಮಾಡಿ ಎಂದು ಹೇಳಿದ್ದು ಈ ಭೇಟಿ ಸಮಾಧಾನ ತಂದಿದೆ ಎಂದು ಪ್ರತಿಕ್ರಿಯಿಸಿದರು.
‘ಐಟಿ ದಾಳಿಗೆ ಒಳಗಾಗಿರುವ ಗುತ್ತಿಗೆದಾರ ಅಂಬಿಕಾಪತಿ ಯಾರೆಂದು ಗೊತ್ತಿಲ್ಲ ಎಂದು ಕೆಂಪಣ್ಣ ಹೇಳಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಬಳಿಕ ಸಿದ್ದರಾಮಯ್ಯ ಸೂಚನೆ ಮೇರೆಗೆ ಅಂಬಿಕಾಪತಿಯನ್ನು ಕೆಂಪಣ್ಣ ಭೇಟಿ ಮಾಡಿದ್ದರು’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಸಿದ್ದರಾಮಯ್ಯ ಭೇಟಿ ಬಳಿಕ ನನ್ನ ತೋಟಕ್ಕೆ ತೆರಳಿದ್ದೆ. ಸಿದ್ದರಾಮಯ್ಯ ಸೂಚನೆ ಮೇರೆಗೆ ಅಂಬಿಕಾಪತಿ ಭೇಟಿಯಾಗಿದ್ದೆ ಎಂಬುದನ್ನು ಸದಾನಂದಗೌಡ ರುಜುವಾತು ಮಾಡಿದರೆ ಅವರ ಕಾಲ ಕೆಳಗೆ ನುಸುಳುತ್ತೇನೆ ಎಂದರು. ಅಲ್ಲದೆ, ಅಂಬಿಕಾಪತಿ ಯಾರೆಂದು ನನಗೆ ಗೊತ್ತಿಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. ನಾನು ಮತ್ತು ಅಂಬಿಕಾಪತಿ 45 ವರ್ಷದ ಸ್ನೇಹಿತರು. ಅಂಬಿಕಾಪತಿಗೆ ಕಿಡ್ನಿ ಸಮಸ್ಯೆ ಇರುವುದರಿಂದ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ ಎಂದು ವಿವರಿಸಿದರು.
ಇಬ್ರಾಹಿಂ ಒರಿಜಿನಲ್ ಪಕ್ಷ ಎಂಬ ಬೋರ್ಡ್ ಹಾಕಿಕೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ ಗರಂ
ತಪ್ಪಿದ್ದರೆ ಕ್ರಮ ಕೈಗೊಳ್ಳಲಿ: ಅಂಬಿಕಾಪತತಿ ಯಾವುದೇ ತಪ್ಪು ಮಾಡಿಲ್ಲ. ನಾನು ಈಗಲೂ ಅವರ ಪರವಾಗಿ ಇದ್ದೇನೆ. ಯಾವ ಗುತ್ತಿಗೆದಾರರೂ ಕಾಮಗಾರಿ ಬಿಲ್ ಬಿಡುಗಡೆಗೆ ಕಮಿಷನ್ ನೀಡಿಲ್ಲ. ಹಾಗೇನಾದರೂ ನೀಡಿದ್ದರೆ ಕೇಂದ್ರ ಸರ್ಕಾರ ಪ್ರಕರಣ ದಾಖಲಿಸಲಿ. ಅಂಬಿಕಾಪತಿ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಅವರನ್ನು ಜೈಲಿಗೆ ಹಾಕಲಿ ಎಂದು ತಿಳಿಸಿದರು.