ಸಿಎಂ ಸಿದ್ದರಾಮಯ್ಯರನ್ನು ಅಧಿಕಾರದಿಂದ ಇಳಿಸಲು ಅವಕಾಶ ಮಾಡಿಕೊಡಬೇಡಿ: ಸಚಿವ ಭೈರತಿ ಸುರೇಶ್
ಕೋಲಾರ ಲೋಕಸಭಾ ಕ್ಷೇತ್ರ ಸೇರಿದಂತೆ ಸುತ್ತಮುತ್ತ ಕಾಂಗ್ರೆಸ್ ಸೋತರೆ ಸಿದ್ದರಾಮಣ್ಣ ಮುಖ್ಯಮಂತ್ರಿ ಕುರ್ಚಿಗೆ ಸಂಚಕಾರ ಬರುವುದರಿಂದಾಗಿ ಜನಾಂಗದವರು ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಹೇಳಿದರು.
ಕೋಲಾರ (ಏ.19): ಕೋಲಾರ ಲೋಕಸಭಾ ಕ್ಷೇತ್ರ ಸೇರಿದಂತೆ ಸುತ್ತಮುತ್ತ ಕಾಂಗ್ರೆಸ್ ಸೋತರೆ ಸಿದ್ದರಾಮಣ್ಣ ಮುಖ್ಯಮಂತ್ರಿ ಕುರ್ಚಿಗೆ ಸಂಚಕಾರ ಬರುವುದರಿಂದಾಗಿ ಜನಾಂಗದವರು ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಹೇಳಿದರು. ನಗರದ ಹಾಲಿಸ್ಟರ್ ಭವನದಲ್ಲಿ ನಡೆದ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್‌ಗೆ ಸಹಾಯ ಮಾಡಬೇಕಿದ್ದು ಬೇರೆ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಈಡಾಗುತ್ತಾರೆ.
ಸಿಎಂರನ್ನು ಅಧಿಕಾರದಿಂದ ಇಳಿಸಲು ಅವಕಾಶ ಮಾಡಿಕೊಡಬೇಡಿ: ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನ ಆಗುವ ಜತೆಗೆ ಸಿದ್ದರಾಮಯ್ಯ ಅವರನ್ನು ಕಿತ್ತು ಒಗೆಯಲಾಗುತ್ತದೆ ಎಂದು ಹೇಳುತ್ತಿದ್ದು ಇದಕ್ಕೆಲ್ಲಾ ಅವಕಾಶ ಮಾಡಿಕೊಡಬೇಡಿ ಎಂದರು. ಸಮುದಾಯದವರೆಲ್ಲಾ ಒಂದಾಗಿ ಒಮ್ಮನಸಿನಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದ್ದು ಬೇರೆ ಮನಸು ಮಾಡಿದರೆ ಸಿದ್ದರಾಮಣ್ಣಗೆ ಸಮಸ್ಯೆ ಆಗುತ್ತದೆ ಎಂದು ಎಚ್ಚರಿಸಿದರು. ಇದು ಗೌತಮ್ ಅಥವಾ ಬೈರತಿ ಸುರೇಶ್ ಚುನಾವಣೆ ಅಲ್ಲ.
ಇಂದಿನಿಂದ ಮತದಾನ: 21 ರಾಜ್ಯಗಳಲ್ಲಿ ಮೊದಲ ಹಂತದ ಚುನಾವಣೆ ಆರಂಭ
ಸಿದ್ದರಾಮಯ್ಯ ಚುನಾವಣೆ ಎಂದೇ ಮತ ಹಾಕಿ. ಗೌತಮ್ ಗೆದ್ದರೆ ಸಿಎಂ, ನನ್ನನ್ನು ಗೆಲ್ಲಿಸಿದಂತೆ. ಬೇರೆ ಅಭ್ಯರ್ಥಿ ಗೆದ್ದರೆ ಸಿದ್ದರಾಮಯ್ಯ ಸ್ಥಾನಕ್ಕೆ ತೊಂದರೆ ಇದಕ್ಕೆ ಅವಕಾಶ ಬೇಡ ಎಂದು ಮನವಿ ಮಾಡಿದರು. ಬಂಧುಗಳಾದ ನಿಮ್ಮನ್ನು ಮೊದಲು ಮತ ಕೇಳಬೇಕು. ರಾಜಕೀಯ ಪ್ರಾತಿನಿದ್ಯ ಕಡಿಮೆ ಇರುವ ಸಮಾಜ ನಮ್ಮದು. ಆರ್ಥಿಕವಾಗಿ, ರಾಜಕೀಯವಾಗಿ ಈಗೀಗ ಮುಂದೆ ಬರುತ್ತಿದ್ದೇವೆ. ನಮ್ಮದು ಮುಗ್ದ ಸಮಾಜ. ಕುರುಬರು ಒಂದು ಬಾರಿ ನಿರ್ಧಾರ ಮಾಡಿದರೆ ಬದಲಾಗಲ್ಲ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಲ್ಲ. ಕುರುಬರಿಗೆ ಮೊದಲ ಬಿ ಫಾರಂ ನೀಡಿದರೆ ಚುನಾವಣೆಯಲ್ಲಿ ಗೆಲುವು ಎಂಬ ಭಾವನೆಯಿಂದ ನನಗೆ ನೀಡಿದ್ದರು.
ಹಾಲು ಮತಸ್ಥರು ಎಂದು ಬರೆದುಕೊಳ್ಳಬೇಡಿ. ಕುರುಬರು ಎಂದೇ ಬರೆಯಿರಿ. ಬೇರೆ ಶಬ್ಧ ಬಳಕೆ ಬೇಡ. ಎರಡು ಇಲಾಖೆಗಳಿಗೆ ನಾನು ಸಚಿವನಾಗಿದ್ದು ಸಿದ್ದರಾಮಯ್ಯ ಅವರಿಂದ ನನಗೆ ಸ್ಥಾನಮಾನ ಸಿಕ್ಕಿದ್ದು ಇಲ್ಲದಿದ್ದರೆ ವ್ಯವಹಾರ ಮಾಡಿಕೊಂಡು ಇರುತ್ತಿದ್ದು ಅಧಿಕಾರ ಬರುತ್ತಿರಲಿಲ್ಲ. ವರ್ತೂರು ಪ್ರಕಾಶ್ ಸಹ ನಮ್ಮ ಬಂಧು. ಬೇರೆ ಪಕ್ಷದಲ್ಲಿ ಬೆಳೆದುಕೊಳ್ಳಲಿ ಅಭ್ಯಂತರವಿಲ್ಲ. ರಾಜಕೀಯ ಭಿನ್ನಾಭಿಪ್ರಾಯ ಸಹಜವಾದರೂ ನಮ್ಮೆಲ್ಲರ ಬೇರು ಸಿದ್ದರಾಮಯ್ಯ ಎಂದು ವಿಶ್ಲೇಷಿಸಿದರು.ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಅಂಜನಿ ಸೋಮಣ್ಣ, ಕುರಿಗಳ ರಮೇಶ್, ಜೆ.ಕೆ.ಜಯರಾಮ್ ಮಾತನಾಡಿದರು. ಪ್ರಸಾದ್ ಬಾಬು ಇದ್ದರು.
ಪುರಾಣದಲ್ಲಿ ಉಲ್ಲೇಖಿತ ಶ್ರೀಕೃಷ್ಣನೊಂದಿಗೆ ನಂಟು ಹೊಂದಿರುವ ದೈತ್ಯ ಹಾವು ವಾಸುಕಿ ಇದ್ದಿದ್ದು ನಿಜ!
ಹಣ ನೀಡಿ ಸಿಎಂ ಆಗುವವರು ಬೇರೆ, ಧೈರ್ಯ, ಸ್ವಂತ ಶ್ರಮದಿಂದ ಮುಖ್ಯಮಂತ್ರಿ ಆಗೋದು ಬೇರೆ. ಸಿದ್ದರಾಮಣ್ಣ ನಿಷ್ಠಾವಂತ, ಧೈರ್ಯವಂತ ರಾಜಕಾರಣಿ. ಆಸ್ತಿ, ಹಣ ಇದ್ದಿದ್ದರೆ ಇಡಿ, ಐಟಿಯವರು ಬಿಡುತ್ತಿರಲಿಲ್ಲ. ಪ್ರಾಮಾಣಿಕ ಸಿಎಂ ಕೇಜ್ರಿವಾಲ್ ಅವರನ್ನೇ ಬಿಡಲಿಲ್ಲ. ಆದರೂ ಸಿದ್ದರಾಮಯ್ಯ ಪ್ರತಿದಿನ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡುತ್ತಿದ್ದು ಕಾರಣ ನಿಷ್ಠಾವಂತ ರಾಜಕಾರಣ. ಅಂತಹವರ ನಾಯಕತ್ವ ಉಳಿಸುವುದು ಎಲ್ಲರ ಕರ್ತವ್ಯ. ಅಧಿಕಾರದಿಂದ ಕೆಳಗಿಳಿಸಬೇಕೆಂದು ಏನೇನೋ ಮಾಡ್ತಿದ್ದಾರೆ. ಅವರ ಬಳಿ ೨೦೦-೩೦೦ ಶರ್ಟ್, ಪಂಚೆಗಳಿವೆ ಅಷ್ಟೇ. ಒಂದು ಒಂದು ಕಪ್ಪು ಚುಕ್ಕೆ ಇಲ್ಲದ ರಾಜಕಾರಣ ಮಾಡಿರುವ ಏಕೈಕ ವ್ಯಕ್ತಿ ಸಿದ್ದರಾಮಯ್ಯ.
-ಭೈರತಿ ಸುರೇಶ್, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ.