ಒಂದು ಪೈಸೆ ಲಂಚ ಪಡೆದಿದ್ದರೆ ರಾಜಕೀಯ ನಿವೃತ್ತಿ: ಸಿದ್ದು ಸವಾಲು
ಹೊಟೇಲ್‌ನಲ್ಲಿ ಮೆನು ಕಾರ್ಡ್ ಇದ್ದಂತೆ ಮುಖ್ಯಮಂತ್ರಿ ಲಂಚದ ಪಟ್ಟಿ ಹಿಡಿದು ಕೂತಿದ್ದಾರೆ. ಹಣ ನೀಡದೆ ಟ್ರಾನ್ಸ್‌ಫರ್ ಆಗಲ್ಲ, ಎನ್‌ಒಸಿ ಸಿಗಲ್ಲ. ಮೇಲಾಗಿ 40 ಪರ್ಸೆಂಟ್ ಗಂಭೀರ ಆರೋಪ ಅವರ ಮೇಲಿದೆ.
ಮಂಗಳೂರು (ಜ.23): ಹೊಟೇಲ್‌ನಲ್ಲಿ ಮೆನು ಕಾರ್ಡ್ ಇದ್ದಂತೆ ಮುಖ್ಯಮಂತ್ರಿ ಲಂಚದ ಪಟ್ಟಿ ಹಿಡಿದು ಕೂತಿದ್ದಾರೆ. ಹಣ ನೀಡದೆ ಟ್ರಾನ್ಸ್‌ಫರ್ ಆಗಲ್ಲ, ಎನ್‌ಒಸಿ ಸಿಗಲ್ಲ. ಮೇಲಾಗಿ 40 ಪರ್ಸೆಂಟ್ ಗಂಭೀರ ಆರೋಪ ಅವರ ಮೇಲಿದೆ. ಆದರೆ ನನ್ನ ಸರ್ಕಾರದಲ್ಲಿ ನಾನು ಒಂದೇ ಒಂದು ಪೈಸೆ ಲಂಚ ತಕೊಂಡಿದ್ದೇನೆ ಎಂದು ಯಾರಾದರೊಬ್ಬ ಕಾಂಟ್ರಾಕ್ಟರ್ ಹೇಳಲಿ, ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ಸರ್ಕಾರ ಮೊಗವೀರರು, ಬಿಲ್ಲವರು, ಬಂಟ ಸಮುದಾಯಕ್ಕೆ ಏನು ಮಾಡಿದೆ? ಅಲ್ಲದೆ ರಾಜ್ಯದ ಜನರಿಗೆ ಯಾವ ಅಭಿವೃದ್ಧಿ ಮಾಡಿಲ್ಲ. ಮೇಲಾಗಿ ಸರ್ಕಾರದ ಗೋಡೆ ಗೋಡೆಗಳೂ ಕಾಸು ಕಾಸು ಅಂತ ಅಂತಿವೆ. ಹಾಗಾಗಿಯೇ ಬಿಜೆಪಿಯ ‘ಪಾಪದ ಪುರಾಣ’ ಬಿಡುಗಡೆ ಮಾಡಿದ್ದೇವೆ. ಜನರ ಸಮಸ್ಯೆಗೆ ಸ್ಪಂದಿಸದ ಸರ್ಕಾರ ಏಕೆ ಬೇಕು? ನಮ್ಮ ಪ್ರಣಾಳಿಕೆ ನಮ್ಮ ಪಕ್ಷದ ಬದ್ಧತೆ ಎಂದು ಭರವಸೆ ನೀಡಿದರು.
ಕರಾವಳಿ ಹಿಂದುತ್ವದ ಪ್ರಯೋಗ ಶಾಲೆಯಾಗುತ್ತಿದೆ: ಸಿದ್ದರಾಮಯ್ಯ
ಅರ್ಜಿ ಹಾಕಿದೋರಿಗೆಲ್ಲ ಟಿಕೆಟ್ ಸಿಗಲ್ಲ: ಚುನಾವಣೆ ಸ್ಪರ್ಧೆಗೆ ಹಲವರು ಅರ್ಜಿ ಹಾಕಿದ್ದಾರೆ. ಅವರಲ್ಲಿ ಯಾರಿಗಾದರೂ ಟಿಕೆಟ್ ಕೊಡ್ತೀವಿ. ಒಟ್ಟಿನಲ್ಲಿ ಕಾಂಗ್ರೆಸ್ ಗೆಲ್ಲಬೇಕು, ಗೆಲ್ಲಿಸಬೇಕು ಅಷ್ಟೇ. ಈ ಚುನಾವಣೆಯಲ್ಲಿ 135-140 ಸೀಟ್ ಪಡೆದು ಅಧಿಕಾರಕ್ಕೆ ಬಂದೇ ಬರ್ತೀವಿ ಎಂದರು. ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಕರಾವಳಿ ಅವರು ಕರಾವಳಿ ಭಾಗಕ್ಕೆ 8 ಭರವಸೆಗಳ ಘೋಷಣೆ ಮಾಡಿದರು.
ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ತಮ್ಮ ಅನಾರೋಗ್ಯದ ನಡುವೆಯೂ ಸಮಾವೇಶಕ್ಕೆ ಆಗಮಿಸಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖಂಡರಾದ ಡಾ.ಜಿ. ಪರಮೇಶ್ವರ್, ರೋಜಿ ಜಾನ್, ರಮಾನಾಥ ರೈ, ಯು.ಟಿ. ಖಾದರ್, ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೊ, ಮಿಥುನ್ ರೈ, ಮೊಹಿಯುದ್ದೀನ್ ಬಾವ, ವಿನಯ ಕುಮಾರ್ ಸೊರಕೆ ಮತ್ತಿತರರಿದ್ದರು. ಪುತ್ತೂರಿನ ಉದ್ಯಮಿ ಅಶೋಕ್ ರೈ ಕೋಡಿಂಬಾಡಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಹಿಟ್ಲರ್ ರೀತಿ ಮೋದಿಯೂ ಪತನ: ಸಿದ್ದರಾಮಯ್ಯ ಭವಿಷ್ಯ
ಕೋಲಾರದಲ್ಲಿ ನಾನು ಮನೆ ಹುಡುಕುತ್ತಿಲ್ಲ: ಕೋಲಾರದಲ್ಲಿ ನಾನು ಮನೆ ಹುಡುಕುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೋಲಾರದಲ್ಲಿ ನೀವು ಮನೆ ಮಾಡುತ್ತಿದ್ದೀರಿ ಎಂಬ ಸುದ್ದಿ ಇದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೋಲಾರದಲ್ಲಿ ನಾನು ಮನೆ ಹುಡುಕುತ್ತಿಲ್ಲ. ಈ ಬಗ್ಗೆ ನನಗೇನೂ ಅರಿವಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ನನಗೆ ಮನೆ ಹುಡುಕುತ್ತಿದ್ದಾರೆ. ಆದರೆ, ಈ ಬಗ್ಗೆ ನನಗೇನೂ ಮಾಹಿತಿಯಿಲ್ಲ ಎಂದರು. ಕೋಲಾರ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ, ನಾನು ಈ ಬಾರಿ ಕೋಲಾರದಲ್ಲೇ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಏನು ಹೇಳುತ್ತದೆ ಅದರಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಪುನರುಚ್ಚರಿಸಿದರು.