Asianet Suvarna News Asianet Suvarna News

ಕರಾವಳಿ ಹಿಂದುತ್ವದ ಪ್ರಯೋಗ ಶಾಲೆಯಾಗುತ್ತಿದೆ: ಸಿದ್ದರಾಮಯ್ಯ

ಕರಾವಳಿಯನ್ನು ಬಿಜೆಪಿ ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಮಾಡಿದೆ. ಇಲ್ಲಿನ ಯುವಕರು ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಬಲಿಪಶುಗಳಾತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

Congress Leader Siddaramaiah Outraged Against BJP At Udupi gvd
Author
First Published Jan 23, 2023, 8:04 AM IST

ಉಡುಪಿ (ಜ.23): ಕರಾವಳಿಯನ್ನು ಬಿಜೆಪಿ ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಮಾಡಿದೆ. ಇಲ್ಲಿನ ಯುವಕರು ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಬಲಿಪಶುಗಳಾತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಭಾನುವಾರ ಇಲ್ಲಿನ ಕ್ರಿಶ್ಚಿಯನ್‌ ಹೈಸ್ಕೂಲ್‌ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಭಯೋತ್ಪಾದನೆ ಆರಂಭವಾದದ್ದೇ ಗೋಡ್ಸೆಯಿಂದ, ಹಿಂದುತ್ವ ಎಂಬ ಶಬ್ದವನ್ನು ಹುಟ್ಟಹಾಕಿದ್ದೇ ಸಾವರ್ಕರ್‌. ಬಿಜೆಪಿಯವರ ಹಿಂದುತ್ವ ಎಂದರೆ ಅದು ಗೋಡ್ಸೆ, ಸಾವರ್ಕರ್‌ ಅವರ ಹಿಂದುತ್ವವೇ ಆಗಿದೆ. ಇದನ್ನು ಕರಾವಳಿಯ ಯುವಕರು ಅರ್ಥ ಮಾಡಿಕೊಂಡು ಅದರಿಂದ ದೂರವಿರಬೇಕು ಎಂದವರು ಕರೆ ನೀಡಿದರು.

ನಾವು ಹಿಂದುಗಳು, ಹಿಂದುತ್ವವಾದಿಗಳಲ್ಲ: ಒಂದ ದೇಶ, ಒಂದು ಧರ್ಮ, ಒಂದು ಭಾಷೆ ಎನ್ನುವುದು ಹಿಂದುತ್ವವಾದಿಗಳ ಅಜೆಂಡಾ ಆಗಿದೆ. ಅವರು ಸಂವಿಧಾನದ ಮೇಲೆ ಗೌರವ ಇಲ್ಲದವರು, ದೇಶ ವಿರೋಧಿಗಳು ಎಂದು ವಾಕ್‌ಪ್ರಹಾರ ಮಾಡಿದ ಸಿದ್ದರಾಮಯ್ಯ, ನಾನು, ಡಿ.ಕೆ. ಶಿವಕುಮಾರ್‌, ಬಿ.ಕೆ. ಹರಿಪ್ರಸಾದ್‌, ಸುರ್ಜೆವಾಲ ಎಲ್ಲರೂ ಅಪ್ಪಟ ಹಿಂದುಗಳು, ಹಿಂದುವಾದಿಗಳು, ಆದರೆ ಹಿಂದುತ್ವವಾದಿ, ಮನುವಾದಿಗಳಲ್ಲ ಎಂದರು. ವಿಧಾನಸೌಧದ ಗೋಡೆಗಳಿಗೆ ಕಿವಿಕೊಟ್ಟರೇ ಅವು ಲಂಚ ಲಂಚ ಎನ್ನುತ್ತವೆ ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ, ಸ್ಯಾಂಟ್ರೋ ರವಿಯನ್ನು ಪೊಲೀಸರು ತಮ್ಮ ಕಸ್ಟಡಿಗೆ ಕೇಳಲೇ ಇಲ್ಲ, ನೇರವಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದರೆ ತನ್ನ ಗುಟ್ಟೆಲ್ಲಿ ಹೊರಗೆ ಬರುತ್ತದೋ ಎಂದು ಗೃಹಸಚಿವ ಉರಗ ಜ್ಞಾನೇಂದ್ರರಿಗೆ ಹೆದರಿಕೆ ಎಂದು ಆರೋಪಿಸಿದರು.

ಹಿಟ್ಲರ್‌ ರೀತಿ ಮೋದಿಯೂ ಪತನ: ಸಿದ್ದರಾಮಯ್ಯ ಭವಿಷ್ಯ

ಜಿಮ್‌ನಿಂದ ಕರಾವಳಿಗೆಷ್ಟು ಬಂತು?: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಂಗಳೂರಿಗೆ, ಉಡುಪಿಗೆ, ಉತ್ತರಕನ್ನಡ ಜಿಲ್ಲೆಗಳಲ್ಲಿ ಎಷ್ಟು ಹೂಡಿಕೆಯಾಗಿದೆ ಎಂಬುದನ್ನು ಯಡಿಯೂರಪ್ಪ, ಬೊಮ್ಮಾಯಿ, ಶೋಭಾ, ನಳಿನ್‌ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿಯಿಂದ ಕರಾವಳಿಯಲ್ಲಿ ಕೋಮವಾದ ಹೆಚ್ಚುತ್ತಿದ್ದು, ಇಲ್ಲಿ ಹೂಡಿಕೆದಾರರು 1 ಲಕ್ಷ ರು. ಬಂಡವಾಳ ಹಾಕುವುದಕ್ಕೆ ಮುಂದೆ ಬರುತ್ತಿಲ್ಲ. ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವುದಕ್ಕೆ ಹೊರಗಿನ ವಿದ್ಯಾರ್ಥಿಗಳು ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದರು. 

ಕರಪ್ಶನ್‌, ಕಮಿಷನ್‌, ಕಮ್ಯೂನಲ್‌: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ರಾಜ್ಯದಲ್ಲಿರುವುದು ಕರಪ್ಶನ್‌, ಕಮಿಷನ್‌, ಕಮ್ಯೂನಲ್‌ ಸರ್ಕಾರ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಎಐಸಿಸಿ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್‌, ಆಂಧ್ರಪ್ರದೇಶದ ಸಂಸದ ಜೆ.ಡಿ. ಸೀಲಂ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ, ಕೇರಳ ಶಾಸಕ ರೋಝೀ ಜಾನ್‌, ಶಾಸಕ ಯು.ಟಿ. ಖಾದರ್‌, ಮಾಜಿ ಸಚಿವರಾದ ವಿನಯ್‌ ಕುಮಾರ್‌ ಸೊರಕೆ, ಅಭಯ್‌ ಚಂದ್ರ ಜೈನ್‌, ಪಕ್ಷದ ನಾಯಕರಾದ ಪ್ರತಾಪ್‌ ಚಂದ್ರ ಶೆಟ್ಟಿ, ಐವನ್‌ ಡಿಸೋಜ, ಶಕುಂತಲಾ ಶೆಟ್ಟಿ, ಗೋಪಾಲ ಪೂಜಾರಿ, ಅಶೋಕ್‌ ಕುಮಾರ್‌, ಕೃಷ್ಣಮೂರ್ತಿ ಆಚಾರ್ಯ, ಪುಷ್ಪಾ ಅಮರನಾಥ್‌, ರಮೇಶ್‌ ಕಾಂಚನ್‌, ಅಮೃತ ಶೆಣೈ, ಪ್ರಸಾದ್‌ ಕಾಂಚನ್‌, ಪ್ರಖ್ಯಾತ್‌ ಶೆಟ್ಟಿಉಪಸ್ಥಿತರಿದ್ದರು.

ಕಳಪೆ ಫಲಿತಾಂಶಕ್ಕೆ ಬಿಜೆಪಿಯೇ ಕಾರಣ: ಪ್ರತಿಬಾರಿ ಎಸ್ಸೆಸ್ಸೆಲ್ಸಿ - ಪಿಯು ಫಲಿತಾಂಶದಲ್ಲಿ ದ.ಕ., ಉಡುಪಿ ಮೊದಲ ಸ್ಥಾನದಲ್ಲಿರುತ್ತಿದ್ದವು, ಆದರೆ ಕಳೆದ ಬಾರಿ ನಾವೆಲ್ಲರೂ ತಲೆತಗ್ಗಿಸುವಂತೆ ಬಿಜೆಪಿ ಸರ್ಕಾರ ಮಾಡಿದೆ. ಮೊದಲ ಸ್ಥಾನದಲ್ಲಿರುತ್ತಿದ್ದ ದಕ, ಉಡುಪಿ ಜಿಲ್ಲೆಗಳು 17, 18ನೇ ಸ್ಥಾನಕ್ಕೆ ಹೋಗಿವೆ. ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನಕ್ಕೆ ಬಂದಿದೆ. ಬಿಜೆಪಿ ದ.ಕ.- ಉಡುಪಿಯ ಮಕ್ಕಳನ್ನು ದಾರಿ ತಪ್ಪಿಸುತ್ತಿದೆ ಎಂದು ಬಿ.ಕೆ. ಹರಿಪ್ರಸಾದ್‌ ಆರೋಪಿಸಿದರು.

ಗೆದ್ದೆತ್ತಿನ ಬಾಲ ಹಿಡಿಯುವ ಪಕ್ಷ ಜೆಡಿಎಸ್‌: ಸಿದ್ದರಾಮಯ್ಯ

ಸಾಧ್ವಿ ಪ್ರಜ್ಞಾಸಿಂಗ್‌ ಭಯೋತ್ಪಾದಕಿ: ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಒಬ್ಬ ಭಯೋತ್ಪಾದಕಿ. ಆಕೆ ಇತ್ತೀಚೆಗೆ ಶಿವಮೊಗ್ಗಕ್ಕೆ ಭೇಟಿ ಕೊಟ್ಟು ಹಿಂದೂಗಳು ತಮ್ಮ ಮನೆಗಳಲ್ಲಿ ಪೆನ್ನು ಪುಸ್ತಕಗಳನ್ನು ಇಟ್ಟುಕೊಳ್ಳಬೇಕು ಎನ್ನದೆ, ತಲ್ವಾರು ಚಾಕು ಚೂರಿ ಆಯುಧಗಳನ್ನು ಹರಿತ ಮಾಡಿಟ್ಟಕೊಳ್ಳಿ ಎಂದು ಹೇಳಿ ಮಕ್ಕಳ ದಾರಿ ತಪ್ಪಿಸಿದ್ದಾಳೆ. ನಾನು ಆಕೆಯನ್ನು ಭಯೋತ್ಪಾದಕಿ ಎಂದು ಕರೆಯುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ವಿವಾದಾತ್ಮಕ ಹೇಳಿಕೆ ನೀಡಿದರು.

Follow Us:
Download App:
  • android
  • ios