ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಳ್ಳಾರಿಯನ್ನು ಜೀನ್ಸ್ ಕ್ಯಾಪಿಟಲ್ ಮಾಡುವೆ: ರಾಹುಲ್ ಗಾಂಧಿ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಳ್ಳಾರಿಯನ್ನು ‘ಜೀನ್ಸ್ ಕ್ಯಾಪಿಟಲ್ ಆಫ್ ಇಂಡಿಯಾ’ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿರುವ ಕಾಂಗ್ರೆಸ್‌ನ ಯುವನಾಯಕ ರಾಹುಲ್‌ಗಾಂಧಿ, ಈ ಸಂಬಂಧ 5 ಸಾವಿರ ಕೋಟಿ ನೀಡುವ ವಾಗ್ದಾನ ಮಾಡಿದ್ದಾರೆ.
ಬಳ್ಳಾರಿ (ಏ.29): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಳ್ಳಾರಿಯನ್ನು ‘ಜೀನ್ಸ್ ಕ್ಯಾಪಿಟಲ್ ಆಫ್ ಇಂಡಿಯಾ’ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿರುವ ಕಾಂಗ್ರೆಸ್‌ನ ಯುವನಾಯಕ ರಾಹುಲ್ ಗಾಂಧಿ, ಈ ಸಂಬಂಧ 5 ಸಾವಿರ ಕೋಟಿ ನೀಡುವ ವಾಗ್ದಾನ ಮಾಡಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆ ಬಳ್ಳಾರಿ ನಗರ ಹಾಗೂ ಗ್ರಾಮೀಣ ಕ್ಷೇತ್ರ ಅಭ್ಯರ್ಥಿಗಳ ಪರ ಪ್ರಚಾರಕ್ಕೆಂದು ನಗರಕ್ಕೆ ಶುಕ್ರವಾರ ಸಂಜೆ ಆಗಮಿಸಿದ ರಾಹುಲ್ ಗಾಂಧಿ, ರೋಡ್‌ಶೋ ಬಳಿಕ ಗವಿಯಪ್ಪ ವೃತ್ತದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಬಳ್ಳಾರಿಗೆ ದೇಶದ ಜೀನ್ಸ್ ರಾಜಧಾನಿಯಾಗುವ ಎಲ್ಲ ಅರ್ಹತೆ ಇದೆ. ಇಲ್ಲಿನ ಗುಣಮಟ್ಟದ ಜೀನ್ಸ್ ವಿಶ್ವದೆಲ್ಲೆಡೆ ರಫ್ತಾಗಬೇಕು. ಬಳ್ಳಾರಿಯ ಜೀನ್ಸ್ ವಿಶ್ವದೆಲ್ಲೆಡೆ ಪ್ರಸಿದ್ಧಿಯಾಗಬೇಕು. ಯಾವುದೇ ದೇಶದಲ್ಲಿ ಜೀನ್ಸ್ ಖರೀದಿಸಿದರೂ, ಆ ಜೀನ್ಸ್ ಪ್ಯಾಂಟ್ ಅಥವಾ ಶರ್ಚ್‌ನ ಮೇಲೆ ‘ಮೇಡ್ ಇನ್ ಬಳ್ಳಾರಿ’ ಎಂದು ನಮೂದಾಗಬೇಕು. ಆ ರೀತಿಯಲ್ಲಿ ಜೀನ್ಸ್ ಉದ್ಯಮ ವಿಪುಲವಾಗಿ ಬೆಳೆಯಲು ಸಹಕಾರ ನೀಡುತ್ತೇವೆ. ನಾನು ಎಲ್ಲರಂತಲ್ಲ. ಹೇಳಿದಂತೆ ಮಾಡುತ್ತೇನೆ. ಮಾಡುವುದಿದ್ದರೆ ಮಾತ್ರ ಹೇಳುತ್ತೇನೆ ಎಂದು ವಿಶ್ವಾಸ ತುಂಬಿದ ರಾಹುಲ್‌ಗಾಂಧಿ, ಜೀನ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರಿಗೆ ಹೆಚ್ಚಿನ ಪೋ›ತ್ಸಾಹ ಸಿಕ್ಕಲ್ಲಿ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಯುವ ಸಮುದಾಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ: ಜಮೀರ್ ಅಹಮದ್ ಖಾನ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಳ್ಳಾರಿ ಜೀನ್ಸ್ ಉದ್ಯಮದ ಪ್ರಗತಿಗೆ ಬೇಕಾದ ಪೂರಕ ಕ್ರಮಗಳನ್ನು ಕೈಗೊಳ್ಳುತ್ತೇವೆ. ಜೀನ್ಸ್ ಪಾರ್ಕ್ ಉದ್ಘಾಟನೆಗೆ ನಾನೇ ಬರುತ್ತೇನೆ ಎಂದರು. ಬಳ್ಳಾರಿ ಈ ಹಿಂದೆ ಭ್ರಷ್ಟಾಚಾರದ ಕೇಂದ್ರವಾಗಿತ್ತು. ಅಕ್ರಮ ಗಣಿಗಾರಿಕೆಯಿಂದ ಇಡೀ ದೇಶದಲ್ಲಿಯೇ ಹೆಸರು ಮಾಡಿತ್ತು. ಇನ್ನು ಮುಂದೆ ಬಳ್ಳಾರಿ ಪ್ರಗತಿಯ ವಿಚಾರದಲ್ಲಿ ಹೆಸರಾಗಬೇಕು. ಅಭಿವೃದ್ಧಿ ನೆಲೆಯಲ್ಲಿ ಹೆಸರಾಗಬೇಕು. ಜೀನ್ಸ್ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಬೇಕು. ಇದು ನನ್ನ ಬಯಕೆ ಎಂದರು. ಬಳ್ಳಾರಿ ಜಿಲ್ಲೆಯನ್ನು 371(ಜೆ) ವ್ಯಾಪ್ತಿಗೆ ಒಳಪಡಿಸಿದ್ದು ಕಾಂಗ್ರೆಸ್. ಈ ಜಿಲ್ಲೆಯ ಸೇರ್ಪಡೆಗೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸಿದರು. ಆದರೆ, ನಾವು ಬಳ್ಳಾರಿಯನ್ನು ಕೈ ಬಿಡಲಿಲ್ಲ. 371(ಜೆ) ಅನುಷ್ಠಾನದಿಂದಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
ಮೆಡಿಕಲ್, ಎಂಜಿನಿಯರಿಂಗ್ ಸೀಟ್‌ಗಳು ಸಿಕ್ಕು ಅವರ ಭವಿಷ್ಯ ಉಜ್ವಲವಾಗಿದೆ ಎಂದರು. ಇದೇ ವೇಳೆ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಯಕ್ರಮಗಳ ಕುರಿತು ಪ್ರಸ್ತಾಪಿಸಿದ ರಾಹುಲ್‌ಗಾಂಧಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಯುವ ಸಮುದಾಯ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಬಡ ಹಾಗೂ ಮಧ್ಯಮ ವರ್ಗದ ಹಿತ ಕಾಯಲು ಬೇಕಾದ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು. ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತರೆಡ್ಡಿ ಹಾಗೂ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ. ನಾಗೇಂದ್ರ ಮಾತನಾಡಿದರು. ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಪ್ರಾಸ್ತಾವಿಕ ಮಾತನಾಡಿದರು. ಪಕ್ಷದ ಹಿರಿಯ ಮುಖಂಡ ಸುರ್ಜೇವಾಲಾ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ವಿ.ಎಸ್. ಉಗ್ರಪ್ಪ, ಅಲ್ಲಂ ಪ್ರಶಾಂತ್, ಆಂಜಿನೇಯಲು, ವಿಷ್ಣು ಬೋಯಪಾಟಿ ಇತರರಿದ್ದರು.
ಟ್ರಾಫಿಕ್ ಜಾಮ್...: ಬಳ್ಳಾರಿಯ ಕೌಲ್‌ಬಜಾರ ಪ್ರದೇಶದಿಂದ ರೋಡ್‌ಶೋ ಮೂಲಕ ರಾಹುಲ್‌ಗಾಂಧಿ ಅವರು ಗವಿಯಪ್ಪ ವೃತ್ತ ತಲುಪಿದರು. ರಸ್ತೆಬದಿಯಲ್ಲಿ ಜಮಾಯಿಸಿದ್ದ ಸಾವಿರಾರು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ರಾಹುಲ್‌ಪರ ಘೋಷಣೆ ಕೂಗಿದರು. ರಾಹುಲ್ ಆಗಮನದಿಂದ ನಗರದ ರಸ್ತೆಗಳು ಜಾಮ್ ಆಗಿದ್ದವು.
ಬಿಜೆಪಿಯವರಿಗೆ 40 ಸಂಖ್ಯೆ ಇಷ್ಟ...: ವ್ಯಾಪಕ ಭ್ರಷ್ಟಾಚಾರದಿಂದ 40 ಪರ್ಸೆಂಟ್ ಸರ್ಕಾರ ಎಂದು ಕರ್ನಾಟಕದ ಬಿಜೆಪಿ ಸರ್ಕಾರ ಇಡೀ ದೇಶದಲ್ಲಿಯೇ ದೊಡ್ಡ ಹೆಸರು ಮಾಡಿದೆ. ಬಹುಶಃ ಇಷ್ಟೊಂದು ಪ್ರಮಾಣದ ಭ್ರಷ್ಟಾಚಾರ ದೇಶದಲ್ಲಷ್ಟೇ ಅಲ್ಲ; ವಿಶ್ವದಲ್ಲಿಯೇ ಅತಿ ಹೆಚ್ಚು ಇರಬಹುದು ಎಂದು ರಾಹುಲ್‌ಗಾಂಧಿ ಕುಟುಕಿದರು. ಬಿಜೆಪಿಯವರಿಗೆ 40 ಸಂಖ್ಯೆಯ ಮೇಲೆ ಬಹಳ ಇಷ್ಟವಿದ್ದಂತೆ ಕಾಣುತ್ತದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಅವರನ್ನು 40 ಸ್ಥಾನಕ್ಕೆ ನಿಲ್ಲಿಸಿಬಿಡಿ ಎಂದು ಮನವಿ ಮಾಡಿದರು.
ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ...: ಬಸವಾದಿ ಶರಣರ ಆಶಯದಂತೆ ಕಾಂಗ್ರೆಸ್ ನಡೆದುಕೊಳ್ಳುತ್ತದೆ. ಸರ್ವ ಸಮುದಾಯಗಳ ಪ್ರಗತಿಯನ್ನು ಕಾಂಗ್ರೆಸ್ ಬಯಸುತ್ತದೆ. ಬಿಜೆಪಿಯವರಂತೆ ದ್ವೇಷದ ಮಾತುಗಳನ್ನಾಡುವುದಿಲ್ಲ. ನಾವು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಬಂದಿದ್ದೇವೆ ಎಂದು ರಾಹುಲ್ ತಿಳಿಸಿದರು.
ನನ್ನನ್ನು ಸೋಲಿಸಲು ಕಾಂಗ್ರೆಸ್-ಬಿಜೆಪಿ ಷಡ್ಯಂತ್ರ: ನಿಖಿಲ್ ಕುಮಾರಸ್ವಾಮಿ
ಮಳೆಯಲ್ಲೂ ಭಾಷಣ...: ರಾಹುಲ್ ಮಾತನಾಡುವ ವೇಳೆ 10 ನಿಮಿಷ ಧಾರಾಕಾರ ಮಳೆ ಸುರಿಯಿತು. ಧಾರಾಕಾರ ಮಳೆಯ ನಡುವೆ ರಾಹುಲ್ ಭಾಷಣ ಮುಂದುವರಿಸಿದರು. ಮಳೆಯನ್ನು ಲೆಕ್ಕಿಸದೆ ಸಾವಿರಾರು ಜನರು ರಾಹುಲ್ ಭಾಷಣ ಕೇಳಲು ಕುತೂಹಲದಿಂದ ಕಾಯುತ್ತಿದ್ದರು. ಜನರ ಆಸಕ್ತಿಯನ್ನು ಕಂಡು ಸಂತಸಗೊಂಡ ರಾಹುಲ್‌ಗಾಂಧಿ, ಬಳ್ಳಾರಿ ಜನತೆಗೆ ನನ್ನ ಧನ್ಯವಾದಗಳು ಎಂದರು. ಮಸೀದಿಯಲ್ಲಿ ಆಜಾನ್ ನಡೆಯುತ್ತಿದ್ದರಿಂದ ರಾಹುಲ್ ಭಾಷಣ ನಿಲ್ಲಿಸಿ, ಬಳಿಕ ಮುಂದುವರಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.