ಬಿಜೆಪಿ ಗೆದ್ದರೆ ರಾಜ್ಯದಲ್ಲಿ ಯುಪಿ ರೀತಿ ಆಡಳಿತ: ಶಾಸಕ ಬಸನಗೌಡ ಯತ್ನಾಳ
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮಾದರಿಯ ಆಡಳಿತವನ್ನು ಜಾರಿಗೆ ತರುತ್ತೇವೆ. ದೇಶ, ಹಿಂದುಗಳ ವಿರುದ್ಧ ಮಾತಾಡಿದವರಿಗೆ ಎನ್‌ಕೌಂಟರ್ ಪಕ್ಕಾ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಹುಬ್ಬಳ್ಳಿ (ಮೇ.02): ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮಾದರಿಯ ಆಡಳಿತವನ್ನು ಜಾರಿಗೆ ತರುತ್ತೇವೆ. ದೇಶ, ಹಿಂದುಗಳ ವಿರುದ್ಧ ಮಾತಾಡಿದವರಿಗೆ ಎನ್‌ಕೌಂಟರ್ ಪಕ್ಕಾ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಕುಂದಗೋಳ ತಾಲೂಕಿನ ಹಿರೇಹರಕುಣಿಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಆರ್.ಪಾಟೀಲ ಪರ ಪ್ರಚಾರ ನಡೆಸಿದರು.
ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯುಪಿಯಲ್ಲಿ ಯೋಗಿ ಆದಿತ್ಯನಾಥರು ಅತ್ಯುತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಯುಪಿಯಲ್ಲಿ ಮೊನ್ನೆ ಅಣ್ಣ-ತಮ್ಮಂದಿರ ಎನ್‌ಕೌಂಟರ್ ಆಯಿತು. ಇದರಿಂದಾಗಿ ಜೈಲಿನಲ್ಲಿರುವವರು ಹೊರಗೆ ಬರಲು ಹೆದರುವಂತಾಗಿದೆ. ಅದೇ ಮಾದರಿಯ ಸರ್ಕಾರವನ್ನು ಇಲ್ಲೂ ತರುತ್ತೇವೆ. ದೇಶ ಹಾಗೂ ಹಿಂದುಗಳ ವಿರುದ್ಧ ಮಾತನಾಡಿದರೆ ಎನ್‌ಕೌಂಟರ್ ಮಾಡುತ್ತೇವೆ ಎಂದರು.
ವಿಜಯಪುರ ಜಿಲ್ಲೆಯಲ್ಲಿ ಎಚ್‌ಡಿಕೆ ಪ್ರಚಾರ ಪರೇಡ್: ಜೆಡಿಎಸ್ ಪಕ್ಷಕ್ಕೆ ಭರವಸೆ ಮೂಡಿಸಿದ ಕ್ಷೇತ್ರಗಳು ಯಾವುವು ಗೊತ್ತಾ?
ರಾಹುಲ್ ಅರೇ ಹುಚ್ಚ: ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ರಾಹುಲ್ ಗಾಂಧಿ ಆಲೂಗಡ್ಡೆಯಿಂದ ಚಿನ್ನ ತೆಗೆಯುತ್ತೇನೆ ಅಂತಾರೆ, ಚೀನಾ ರಾಯಭಾರಿ ಜತೆಗೆ ಸಭೆ ಮಾಡಿ ದೇಶ ವಿರೋಧಿಗಳ ಜೊತೆ ಕೈಜೋಡಿಸುತ್ತಾರೆ. ಹೀಗಾಗಿ, ಅವರನ್ನು ಬುದ್ಧಿವಂತ ಎಂದು ಕರೆಯಬೇಕಾ? ದೊಡ್ಡ ಬುದ್ಧಿವಂತ ಅನ್ನಬೇಕಾ..? ಎಂದು ಪ್ರಶ್ನಿಸಿ, ರಾಹುಲ್ ಗಾಂಧಿ ಅವರನ್ನು ಹುಚ್ಚ ಅಲ್ಲ, ಅರೇ ಹುಚ್ಚ ಅಂತಲೇ ಕರೆಯಬೇಕು ಎಂದರು.
ವಿದೇಶದಿಂದ ಬಂದ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆಯಾ? ಎಂದು ಪ್ರಶ್ನಿಸಿದ್ದೆ. ಆದರೆ, ಮಾಧ್ಯಮಗಳು ಪ್ರಶ್ನಾರ್ಥಕ ಚಿಹ್ನೆಯನ್ನೇ ತೆಗೆದುಬಿಟ್ಟಿವೆ. ಕಾಂಗ್ರೆಸ್‌ನವರು ಮೋದಿ ವಿರುದ್ಧ 91 ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ನಾನು ಸೋನಿಯಾ ಗಾಂಧಿ ಬಗ್ಗೆ ಪ್ರಶ್ನಿಸಿದ್ದೇನೆ. ಈಗಲೂ ನನ್ನ ಹೇಳಿಕೆಗೆ ಬದ್ಧನಿದ್ದೇನೆ. ಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಆದರೆ, ಕ್ಷಮೆ ಮಾತ್ರ ಕೇಳುವುದಿಲ್ಲ ಎನ್ನುತ್ತಾ ಸೋನಿಯಾ ವಿಷಕನ್ಯೆ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಗ್ಯಾರಂಟಿ ಕಾರ್ಡ್ ನೀಡಿ ಕಾಂಗ್ರೆಸ್ ಮತಭಿಕ್ಷೆ: ಯಡಿಯೂರಪ್ಪ ಲೇವಡಿ
ಶೆಟ್ಟರ್‌ರನ್ನು ಸಿಎಂ ಎಂದು ಘೋಷಿಸಿ: ಲಿಂಗಾಯತ ಸಮುದಾಯವನ್ನು ಬಿಜೆಪಿ ಓಲೈಕೆ ಮಾಡುತ್ತಿಲ್ಲ. ಆ ಸಮುದಾಯ ನಮ್ಮ ಪಕ್ಷದ ಜತೆಯೇ ಇದೆ. ಇದರಿಂದ ಆ ಮತಗಳು ಬಿಜೆಪಿ ಬಿಟ್ಟು ಹೋಗುವುದಿಲ್ಲ. ಆದರೆ, ಕಾಂಗ್ರೆಸ್ ಆ ಸಮುದಾಯವನ್ನು ಓಲೈಕೆ ಮಾಡಲು ಮುಂದಾಗಿದೆ. ಬಿಜೆಪಿ ಲಿಂಗಾಯತರಿಗೆ ಹೆಚ್ಚಿನ ಸೀಟು ನೀಡುವ ಮೂಲಕ ನ್ಯಾಯ ಒದಗಿಸಿದೆ. ನಿಜಕ್ಕೂ ಕಾಂಗ್ರೆಸ್ಸಿಗೆ ಲಿಂಗಾಯತರ ಮೇಲೆ ಪ್ರೀತಿ ಇದ್ದರೆ, ಮಾಜಿ ಸಿಎಂ ಜಗದೀಶ ಶೆಟ್ಟರ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ. ಆ ಮೂಲಕ ದಮ್ಮು, ತಾಕತ್ತು ಪ್ರದರ್ಶಿಸಲಿ ಎಂದು ಸವಾಲು ಹಾಕಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.