ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ರಾಜಕೀಯ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ರಾಜಕೀಯ ಬಿಟ್ಟರೂ ನಾನು ಮಂಡ್ಯ ಬಿಡಲ್ಲ ಎಂದಿದ್ದಾರೆ.
ಬೆಂಗಳೂರು (ನ.17): ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎನ್ನುವ ಚರ್ಚೆಗೆ ಈಗ ತೆರೆ ಬಿದ್ದಿದೆ. ರಾಜಕೀಯ ಬಿಟ್ಟರೂ ನಾನು ಮಂಡ್ಯ ಬಿಡಲ್ಲ ಎಂದು ತಮ್ಮ ರಾಜಕೀಯ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸದೆ ಸುಮಲತಾ ಅಂಬರೀಶ್ , ಹೊಸ ಕ್ಷೇತ್ರ ಹುಡುಕ್ತಿರೋದು ಯಾರಾ ಕನಸು ಅಂತಾ ಗೊತ್ತಿಲ್ಲ. ಒಂದಷ್ಟು ಜನರು ಕನಸು ಕಾಣ್ತಿದ್ದಾರೆ. ಅವರ ಕನಸಿಗೆ ನೀರು ಚೆಲ್ಲಿದ ಹಾಗೇನೆ. ನಾನು ರಾಜಕೀಯಕ್ಕೆ ಬಂದಿರೋದೆ ಮಂಡ್ಯಕ್ಕೋಸ್ಕರ. ರಾಜಕೀಯದಿಂದ ಏನೇನೋ ಆಗ್ಲಿಕ್ಕೆ ಬಂದಿಲ್ಲ. ರಾಜಕೀಯ ಬೇಕಿದ್ರೆ ಇಂದು ಇರ್ತೀನಿ, ನಾಳೆ ಬಿಡ್ತೀನಿ ಆದ್ರೆ ಮಂಡ್ಯ ಬಿಡಲ್ಲ ಎಂದಿದ್ದಾರೆ. ನಾನು ಏನಾದರೂ ಚುನಾವಣೆಯಲ್ಲಿ ನಿಲ್ಲುತ್ತಿದೇನಾ..? ನಾನು ಯಾರಿಗೆ ಬೆಂಬಲ ಕೊಡಬೇಕು ಅನ್ನೋದನ್ನ ಮುಂದೆ ನೋಡೋಣ. ಇನ್ನು ಯಾರು ಕ್ಯಾಂಡಿಡೇಟ್ಸ್ ಅನ್ನೋದು ಗೊತ್ತಾಗಿಲ್ಲವಲ್ಲ. ಈಗಲೇ ನಾನು ಯಾರಿಗೆ ಅಂತ ಬೆಂಬಲ ಸೂಚಿಸಲಿ. ನನ್ನ ಪರವಾಗಿ ನಿಂತು ಎಲ್ಲರೂ ಹೋರಾಟ ಮಾಡಿದ್ದಾರೆ. ಯಾರಿಗೂ ಕೂಡ ನೋಯಿಸಬಾರದು ಅಲ್ವಾ. ಅಭಿ ಸದ್ಯಕ್ಕೆ ಎರಡ್ಮೂರು ಸಿನಿಮಾ ಮಾಡ್ತಿದ್ದಾನೆ. ಅವನ ರಾಜಕೀಯ ಭವಿಷ್ಯವನ್ನ ಅವನೆ ಡಿಸೈಡ್ ಮಾಡಬೇಕು ಎಂದಿದ್ದಾರೆ.
ಸುಮಲತಾ ಅಂಬರೀಶ್‌ರನ್ನು ಎದುರಿಸುವಷ್ಟು ಧೈರ್ಯವಿದೆ, ಟಿಕೆಟ್ ಗೆ ಬೇಡಿಕೆ ಇಟ್ಟ ಜೆಡಿಎಸ್ ಅಭ್ಯರ್ಥಿ: ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡುವಂತೆ ಜೆಡಿಎಸ್ ಜಿಲ್ಲಾ ಮಾಜಿ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ವರಿಷ್ಠರಲ್ಲಿ ಮನವಿ ಮಾಡಿದರು.
ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಲೋಕಸಭೆಗೆ ಸ್ಪರ್ಧಿಸಲು ಸಮರ್ಥರಿದ್ದಾರೆ. ಸಂಸದೆ ಸುಮಲತಾ ಅಂಬರೀಶ್‌ರನ್ನು ಎದುರಿಸುವಷ್ಟುಧೈರ್ಯವಿದೆ. ಹಾಗಾಗಿ ಅವರಿಗೆ ಲೋಕಸಭೆ ಟಿಕೆಟ್ ನೀಡುವಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ನಾನು ಕಳೆದ 30 ವರ್ಷಗಳಿಂದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷಕ್ಕೆ ಹೆಚ್ಚಿನ ಬಲ ತುಂಬಿದ್ದೇನೆ. ವಿಧಾನಸಭೆ, ವಿಧಾನಪರಿಷತ್, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿ ಗೆಲುವಿಗೆ ಶ್ರಮಿಸಿದ್ದೇನೆ. ಕೆಳ ಹಂತದಿಂದ ಜೆಡಿಎಸ್ ಬಲವರ್ಧನೆಗೆ ದುಡಿದಿರುವ ನನಗೆ ಈ ಬಾರಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಮನವಿ ಮಾಡುತ್ತಿರುವುದಾಗಿ ತಿಳಿಸಿದರು.
ಈಗಾಗಲೇ ವಿಧಾನಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿತನಾಗಿದ್ದು, ಹಲವಾರು ಬಾರಿ ಅವಕಾಶ ವಂಚಿತನಾಗಿದ್ದೇನೆ. ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲು ಕಳೆದ ಬಾರಿಯೇ ಆಕಾಂಕ್ಷೆ ವ್ಯಕ್ತಪಡಿಸಿದ್ದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಸಭೆಗಳಲ್ಲೂ ಒತ್ತಾಯ ಮಾಡಿದ್ದೆ. ಆದರೂ ಟಿಕೆಟ್ ಆಕಾಂಕ್ಷಿತರೊಂದಿಗೆ ಚರ್ಚಿಸದೆ ರವೀಂದ್ರ ಶ್ರೀಕಂಠಯ್ಯನವರಿಗೆ ಟಿಕೆಟ್ ನೀಡಲಾಯಿತು. ವರಿಷ್ಠರು ನನಗೆ ಕೊಟ್ಟಭರವಸೆಗಳಲ್ಲಿ ಯಾವುದೂ ಈಡೇರಲಿಲ್ಲ. ಎಲ್ಲಿಯೂ ಅವಕಾಶಗಳು ಸಿಗಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಭ್ರಷ್ಟಚಾರದ ರಾಜಕಾರಣ ನನಗೆ ಇಷ್ಟವಿಲ್ಲ: ಸಂಸದೆ ಸುಮಲತಾ
ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷನಾಗಿದ್ದ ನನ್ನನ್ನು ಜಿಲ್ಲಾಧ್ಯಕ್ಷ ಡಿ.ರಮೇಶ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಪಕ್ಷದ ಸಭೆ-ಸಮಾರಂಭಗಳಿಗೆ ನನ್ನನ್ನು ಕರೆಯದೆ ಮೂಲೆಗುಂಪು ಮಾಡಿದರು. ಕೆ.ಆರ್.ಪೇಟೆ ಉಪ ಚುನಾವಣೆಯಲ್ಲೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಬಿಡದಿಯಲ್ಲಿ ನಡೆದ ಕಾರ್ಯಕರ್ತರ ಶಿಬಿರದ ವಿಷಯವನ್ನೂ ನನಗೆ ತಿಳಿಸಲಿಲ್ಲ. ನನ್ನನ್ನು ಜಿಲ್ಲಾಧ್ಯಕ್ಷರು ನಿರ್ಲಕ್ಷಿಸುತ್ತಿರುವ ಬಗ್ಗೆ ವರಿಷ್ಠರಿಗೆ ತಿಳಿಸಿದರೂ ಇಬ್ಬರನ್ನೂ ಕೂರಿಸಿ ಮಾತನಾಡುವುದಾಗಿ ಹೇಳಿದರಾದರೂ ಕೊನೆಗೆ ಅದೂ ಕೂಡ ನಡೆಯಲಿಲ್ಲ ಎಂದರು.
ಸ್ಪರ್ಧೆಗೆ ಯಾರೂ ದೃಢ ನಿರ್ಧಾರ ಮಾಡಿಲ್ಲ: ಸಂಸದೆ ಸುಮಲತಾ
ಈ ಬೆಳವಣಿಗೆಗಳ ನಡುವೆಯೂ ನನಗಿನ್ನೂ ವರಿಷ್ಠರ ಮೇಲೆ ನಂಬಿಕೆ ಇದೆ. ಅವರು ಈ ಬಾರಿ ಟಿಕೆಟ್ ನೀಡುವರೆಂಬ ನಂಬಿಕೆ ನನಗಿದೆ. ಅದೇ ವಿಶ್ವಾಸದ ಮೇಲೆ ನಾನು ಅಭ್ಯರ್ಥಿಯಾಗಲು ಸಿದ್ಧನಾಗಿದ್ದೇನೆ. ಶೀಘ್ರದಲ್ಲೇ ಪ್ರತಿ ಗ್ರಾಮ ಪಂಚಾಯ್ತಿಗೆ ತೆರಳಿ ಸಭೆಗಳನ್ನು ನಡೆಸಿ ಕಾರ್ಯಕರ್ತರು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ಮಾಡಲಿದ್ದೇನೆ ಎಂದರು.
