ಸಿಎಂ ರೇಸ್‌ನಲ್ಲಿ ನಾನು ಮುಂಚೂಣಿಯಲ್ಲಿರುವೆ: ಕೈ ಎತ್ತಿದ ಬಿಜೆಪಿ ನಾಯಕ
* ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ವಿಚಾರ
* ರಾಜ್ಯ ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು
* ಬಿಎಸ್‌ವೈ ರಾಜೀನಾಮೆ ನೀಡಿದ್ರೆ ಮುಂದಿನ ಸಿಎಂ ಯಾರು ಎನ್ನುವ ಬಗ್ಗೆ ಚರ್ಚೆ ಜೋರು
* ಇದರ ಮಧ್ಯೆ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ನಾನು ಮುಂಚೂಣಿಯಲ್ಲಿರುವೆ ಎಂದ ಹಿರಿಯ ನಾಯಕ
ಬೆಳಗಾವಿ, (ಜು.19): ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪವಾಗಿರುವುದು ರಾಜ್ಯ ರಾಜಕಾರಣದಲ್ಲಿ ಹಲ್ಚಲ್ ಎಬ್ಬಿಸಿದೆ
ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆಗಳು ಭಾರೀ ಸಂಚಲನ ಮೂಡಿಸುತ್ತಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಯಿತಾ ಎಂಬ ಪ್ರಶ್ನೆ ಬಲವಾಗಿ ಕಾಡಲಾರಂಭಿಸಿದೆ. ಒಂದು ವೇಳೆ ಸಿಎಂ ರಾಜೀನಾಮೆ ನೀಡಿದ್ರೆ ಬಿಜೆಪಿಯಲ್ಲಿ ಮುಂದಿ ಸಿಎಂ ಯಾರು ಎನ್ನವುದನ್ನು ನೋಡಿದ್ರೆ ಪ್ರಮುಖ ಹೆಸರುಗಳು ಕೇಳಿಬರುತ್ತಿವೆ.
ಇತ್ತ ಬಿಎಸ್‌ವೈ ರಾಜೀನಾಮೆ ಸುದ್ದಿ, ಅತ್ತ ದಿಲ್ಲಿಗೆ ತೆರಳಿದ ರಾಜ್ಯಪಾಲರ ನಡೆ ಕುತೂಹಲ
ಇದರ ಮಧ್ಯೆ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ನಾನು ಮುಂಚೂಣಿಯಲ್ಲಿರುವೆ ಎಂದು ಬಿಜೆಪಿ ಹಿರಿಯ ನಾಯಕ, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಕೈ ಎತ್ತಿದ್ದಾರೆ.
ಬೆಳಗಾವಿಯಲ್ಲಿ ಇಂದು (ಸೋಮವಾರ) ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿರಿತನವಿದೆ. ಕಳಂಕರಹಿತನಾಗಿರುವೆ. ನಸೀಬು ಗಟ್ಟಿ ಇದ್ದರೆ ಮತ್ತು ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ ಜವಾಬ್ದಾರಿ ನಿರ್ವಹಿಸುವೆ. ನಾನೂ ಆಸೆ ಇಟ್ಟುಕೊಂಡಿರುವೆ ಎಂದು ಮನಸ್ಸಿನಲ್ಲಿರುವ ಆಸೆಯನ್ನು ಹೊರಹಾಕಿದರು.
ಮುಖ್ಯಮಂತ್ರಿ ಬದಲಾವಣೆ ಕೂಗು ವರ್ಷದಿಂದಲೂ ಇದೆ. ಆ ಕೂಗನ್ನು ಯಾರು ಹಾಕುತ್ತಿದ್ದಾರೆಯೋ ಗೊತ್ತಿಲ್ಲ. ಆ ಬಗ್ಗೆ ನಾನೇನು ಪ್ರತಿಕ್ರಿಯಿಸುವುದಿಲ್ಲ. ಆದ್ರೆ, ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆಯೂ ನನಗಿದೆ. ಎಲ್ಲರ ಆಶೀರ್ವಾದವಿದ್ದರೆ, ಮುಂದಿನ ಮುಖ್ಯಮಂತ್ರಿ ನಾನೇ ಆಗಿ ಕೆಲಸ ಮಾಡುತ್ತೇನೆ ಎಂದರು.