* ರಾಜ್ಯ ರಾಜಕೀಯದಲ್ಲಿ ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ ರಾಜ್ಯಪಾಲ ದಿಲ್ಲಿಗೆ* ಬಿಎಸ್‌ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಸುದ್ದಿ ಬೆನ್ನಲ್ಲೇ ದೆಹಲಿಗೆ ತೆರಳಿದ ತಾವರ್ ಚಂದ್ ಗೆಹ್ಲೋಟ್ * ಕುತೂಹಲ ಮೂಡಿಸಿದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ನಡೆ

ಬೆಂಗಳೂರು, (ಜು.19): ಸದ್ಯ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಬಹಿರಂಗವಾಗುತ್ತಿದ್ದಂತೆಯೇ ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ.

ಇದೇ ಜುಲೈ 26ಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗುತ್ತೆ. ಅಂದೇ ಯಡಿಯೂರಪ್ಪ ಅವರು ವಿದಾಯದ ಭಾಷಣ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬೆಳವಣಿಗೆಗಳ ಮಧ್ಯೆ ನೂತನ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ದಿಢೀರ್ ನವದೆಹಲಿಗೆ ತೆರಳಿದ್ದು, ತೀವ್ರ ಕುತೂಹಲ ಮೂಡಿಸಿದೆ.

ನಾಯಕತ್ವ ಬದಲಾವಣೆ ನಿಶ್ಚಿತವಾ? ಬಿಜೆಪಿ ಅಧ್ಯಕ್ಷರದ್ದು ಎನ್ನಲಾದ ಆಡಿಯೋನಲ್ಲಿ ಬಹಿರಂಗ

ರಾಜ್ಯಪಾಲರ ನಡೆ ಕುತೂಹಲ
ಹೌದು... ರಾಜ್ಯ ರಾಜಕೀಯದಲ್ಲಿ ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ದಿಢೀರ್ ನವದೆಹಲಿಗೆ ತೆರಳಿದ್ದಾರೆ. ತಡರಾತ್ರಿ ನವದೆಹಲಿಗೆ ತೆರಳಿರುವ ಅವರು, ಯಾರಿಗೂ ಕೂಡ ಮಾಹಿತಿ ನೀಡದೆ ಹೋಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬದಲಾಗಬಹುದಾದ ಕ್ಷಿಪ್ರ ಬೆಳವಣಿಗೆ ಹಿನ್ನೆಲೆಯಲ್ಲಿ ವೇದಿಕೆ ಸಿದ್ಧಪಡಿಸಲು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ನವದೆಹಲಿಗೆ ತೆರಳಿದ್ದಾರೆ. ಎನ್ನಲಾಗುತ್ತಿದೆ.

ಸಿಎಂ ರಾಜೀನಾಮೆ ಅಂಗೀಕಾರ, ಮುಂದಿನ ಸಿಎಂಗೆ ಪ್ರಮಾಣ ವಚನ ಸ್ವೀಕಾರದ ನೀತಿ-ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಬರಲು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ದಿಲ್ಲಿಗೆ ಹಾರಿದ್ದಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿವೆ.

ಒಟ್ಟಿನಲ್ಲಿ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ನಾಯಕತ್ವ ಬದಲಾವಣೆ ಆಡಿಯೋ ಲೀಕ್ ಆಗುತ್ತಿದ್ದಂತೆಯೇ ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದಂತೂ ಸತ್ಯ.