ನಾನು ಮಾಡಿದ ಅಭಿವೃದ್ಧಿ ಮುಂದಿಟ್ಟು ಮತ ಕೇಳುವೆ: ಶಾಸಕ ವೀರಣ್ಣ ಚರಂತಿಮಠ
ನಮ್ಮ ಸೇವಾ ಅವಧಿಯಲ್ಲಿ ಬಾಗಲಕೋಟೆ ಮತಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ನನಗೆ ತೃಪ್ತಿ ಇದೆ. ಅಭಿವೃದ್ಧಿ ಕೆಲಸಗಳನ್ನು ಮುಂದೆ ಇಟ್ಟು ಮತ ಕೇಳುವೆ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಬಾಗಲಕೋಟೆ (ಏ.15): ನಮ್ಮ ಸೇವಾ ಅವಧಿಯಲ್ಲಿ ಬಾಗಲಕೋಟೆ ಮತಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ನನಗೆ ತೃಪ್ತಿ ಇದೆ. ಅಭಿವೃದ್ಧಿ ಕೆಲಸಗಳನ್ನು ಮುಂದೆ ಇಟ್ಟು ಮತ ಕೇಳುವೆ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು. ಶಿವಾನಂದ ಜೀನ್‌ನಲ್ಲಿ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಕಾರ್ಯಕರ್ತರು ಸ್ವತಃ ತಾವೇ ಆಭ್ಯರ್ಥಿಯೆಂದು ತಿಳಿದು ನಿರಂತರ ನಗರ, ಗ್ರಾಮೀಣ ಮಂಡಲಗಳಲ್ಲಿ, ಬೂತ್ ಮಟ್ಟದಲ್ಲಿ ಸೇನಾ ಕಾರ್ಯಪಡೆಯಂತೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಗೆಲುವು ನಿಶ್ಚಿತ ಎಂದರು.
ಸುಮಾರು 118.97 ಕೋಟಿ ವೆಚ್ಚದಲ್ಲಿ ಬಾಗಲಕೋಟೆ ನಡುಗಡ್ಡೆ ಕಿಲ್ಲಾ ಪ್ರದೇಶದ 1057 ಮನೆಗಳು 11/ಎ ಆಗಿದ್ದು ಭೂಸ್ವಾಧೀನ ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗಿವೆ. ಕೆಲಸ ಪ್ರಗತಿಯಲ್ಲಿದೆ. ಅವರಿಗೆ ಪರಿಹಾರ ಧನ ನೀಡಿ ಯುನಿಟ್ ಒಂದರಲ್ಲಿ ಸ್ಥಳವನ್ನು ಕೊಡಲಾಗುವುದು. ಬಾಗಲಕೋಟೆ ಪಟ್ಟಣದಲ್ಲಿ ಆರ್‌ಎಲ್-527ಮೀ ಹಾಗೂ 100ಮೀ ವರೆಗಿನ ಮನೆ ಹಾಗೂ ಕಟ್ಟಡಗಳನ್ನು ಭೂಸ್ವಾಧೀನ ಪಡಿಸಿಕೊಂಡು ಪುನರ್ವಸತಿ ಕಲ್ಪಿಸಲು ಅನುದಾನ ಕೊಡಲಾಗಿದೆ ಮತ್ತು ಐಹೊಳೆ ಸ್ಥಳಾಂತರ ಕೂಡ ನನ್ನ ಕನಸಿದೆ ಎಂದರು.
ನನಗೆ ಮಂತ್ರಿಯಾಗುವ ಅವಕಾಶವಿದೆ ಗೆಲ್ಲಿಸಿ: ಮಾಲೀಕಯ್ಯ ಗುತ್ತೇದಾರ್
ಬಿಟಿಡಿಎದಿಂದ ಈ ಅವಧಿಯಲ್ಲಿ ಮುಳುಗಡೆಯಾದ ಫಲಾನುಭವಿಗಳಿಗೆ, ಬಾಡಿಗೆದಾರರಿಗೆ, ವಯಸ್ಕರ ಮಕ್ಕಳಿಗೆ ಸೇರಿ 2270ಕ್ಕೂ ಹೆಚ್ಚು ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ನಗರದಲ್ಲಿ ಒಂದು ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣಕ್ಕೆ ಬಿಟಿಡಿಎಯಿಂದ 12 ಎಕರೆ ಜಾಗ ನೀಡಿದ್ದೇವೆ. ಬಾಗಲಕೋಟೆ ನಗರ ವ್ಯಾಪ್ತಿಯ ಆಸ್ತಿಗಳನ್ನು ಆಧುನಿಕ ತಂತ್ರಜ್ಞಾನ ಡ್ರೋಣ್ ಬಳಸಿ ಸಿಟಿ ಸರ್ವೆ ಕಾರ್ಯ ಪ್ರಾರಂಭ ಮಾಡಿದ್ದು, ಈಗಾಗಲೆ 43,190 ಆಸ್ತಿಗಳ ಕಾರ್ಯ ಪೂರ್ಣಗೊಂಡಿದೆ. ಅಳತೆ ಮಾಡಿದ ಆಸ್ತಿಗಳ ಪೈಕಿ 30.365 ಆಸ್ತಿಗಳಿಗೆ ಡಿಪಿಆರ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ವಿವರಿಸಿದರು.
ಬಾಗಲಕೋಟೆ ತಾಲೂಕಿನ 65 ಗ್ರಾಮ, ಹುನಗುಂದ ತಾಲೂಕಿನ 18 ಗ್ರಾಮಗಳ ಪ್ರತಿ ಮನೆಗೆ ಜಲ್ ಜೀವನ್ ಮಿಷನ್ ಯೋಜನೆಯಡಿ ನಳ ಜೋಡಣೆ ಕಾರ್ಯವನ್ನು .40.95 ಕೋಟಿ ವೆಚ್ಚದಲ್ಲಿ ಮಾಡಲಾಗಿದೆ. ಇನ್ನು ಉಜ್ವಲ್ ಯೋಜನೆಯಡಿಯಲ್ಲಿ ಮತಕ್ಷೇತ್ರದ ತೀರಾ ಬಡವ ಹಾಗೂ ಹಿಂದೂಳಿದ ಕುಟುಂಬಗಳಿಗೆ ಸುಮಾರು 25 ಸಾವಿರ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. .243 ಕೋಟಿ ವೆಚ್ಚದಲ್ಲಿ ಶಿರೂರ ಏತ ನೀರಾವರಿ, .345 ಕೋಟಿ ವೆಚ್ಚದಲ್ಲಿ ಭಗವತಿ ಏತ ನೀರಾವರಿ ಯೋಜನೆ ಮಂಜೂರಾಗಿ ಟೆಂಡರ್ ಕೂಡಾ ಆಗಿದೆ. ಇದರಿಂದ 20 ಸಾವಿರ ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಹೊಂದಲಿದೆ ಎಂದು ತಿಳಿಸಿದರು.
ಯಾರೂ ಪಕ್ಷ ಬಿಡಬಾರದು, ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು: ಬಾಲಚಂದ್ರ ಜಾರಕಿಹೊಳಿ
ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಶಿವಾನಂದ ಟವಳಿ,ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ ಸೇರಿದಂತೆ ಅನೇಕರು ಬಾಗವಹಿಸಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.