ನನ್ನ ಅವಧಿ ಮುಗಿವ ಮುನ್ನ ಮುಸ್ಲಿಂ ಅನುದಾನ 10 ಸಾವಿರ ಕೋಟಿಗೆ ಏರಿಸುತ್ತೇನೆ: ಸಿದ್ಧರಾಮಯ್ಯ
ಈ ಬಾರಿಯ ಸಿಎಂ ಆಗಿ ನನ್ನ ಅಧಿಕಾರವಧಿ ಮುಗಿಯುವ ಮುನ್ನ ಮುಸ್ಲಿಮರ ಅನುದಾನವನ್ನು 10 ಸಾವಿರ ಕೋಟಿಗೆ ಏರಿಸುತ್ತೇನೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಸೆ.30): ರಾಜ್ಯದ ಸಿಎಂ ಆಗಿ ನನ್ನ ಅಧಿಕಾರದ ಅವಧಿ ಮುಗಿಯುವ ಮುನ್ನ ಮುಸ್ಲಿಮರ ಅಭಿವೃದ್ಧಿ ಹಣವನ್ನು 10 ಸಾವಿರ ಕೋಟಿಗೆ ಏರಿಸಲಿದ್ದೇನೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬ್ಯಾರಿ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ನಿರ್ಮಾಣವಾದ ಬ್ಯಾರಿ ಸೌಹಾರ್ದ ಭವನ ಉದ್ಘಾಟಿಸಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಮುಸ್ಲಿಂ ಸಮುದಾಯದ ಅಭಿವೃದ್ಧಿ ಹಣಕ್ಕಾಗಿ ಬೇಡಿಕೆ ಬರುತ್ತಿರುವ ವಿಚಾರದ ಬಗ್ಗೆ ಮಾತನಾಡಿದರು. ಮೊದಲು ಮುಸ್ಲಿಂ ಅಭಿವೃದ್ಧಿಗೆ 400 ಕೋಟಿ ಹಣ ಮೀಸಲಿಡಲಾಗಿತ್ತು. ಆ ಬಳಿಕ ಇದನ್ನು ನಾನು 3 ಸಾವಿರ ಕೋಟಿಗೆ ಏರಿಸಿದ್ದೇನೆ. ಅಂದು ಕೂಡಸ ನನ್ನ ಎದುರು ಯಾರೂ ಬಂದು ಇದರ ಬಗ್ಗೆ ಕೇಳಿರಲಿಲ್ಲ. ಹಾಗಿದ್ದರೂ ನಾನು ಅನುದಾನ ಹೆಚ್ಚು ಮಾಡಿದ್ದೆ. ಈಗಲೂ ಕೂಡ ಅಷ್ಟೇ ಅನುದಾನ ಹೆಚ್ಚು ಮಾಡೇ ಮಾಡ್ತೀನಿ. ಮುಂದೆ ನನ್ನ ಅವಧಿ ಮುಗಿಯುವಷ್ಟರಲ್ಲಿ 10 ಸಾವಿರಕ್ಕೆ ಏರಿಕೆ ಮಾಡುತ್ತೇನೆ ಅದು ನನ್ನ ಕೆಲಸ. ರಾಜ್ಯದಲ್ಲಿ ನಾವು ಎಲ್ಲಾ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ. ರಾಜ್ಯದ ಸಂಪತ್ತು ಎಲ್ಲರಿಗೂ ಸಿಗಬೇಕು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್‌ನಲ್ಲಿ ಮುಸ್ಲಿಮರ ಕಡೆಗಣನೆ ಮಾಡಲಾಗುತ್ತಿದೆ ಎನ್ನುವ ಮಾತು ಹೇಳಿ ಬಂದಿದೆ. ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಮಂತ್ರಿ ಸ್ಥಾನವನ್ನು ಸರ್ಕಾರದಲ್ಲಿ ನೀಡಬೇಕು. ನಮ್ಮ ಯುಟಿ ಖಾದರ್ ಅವರನ್ನು ಮಂತ್ರಿ ಮಾಡಬೇಕಿತ್ತು ಎಂದು ಬ್ಯಾರಿ ವೆಲ್‌ಫೇರ್ ಅಸೋಸಿಯೇಷನ್ ಹೇಳಿದೆ. ಸರ್ಕಾರ ರಚನೆಯಲ್ಲಿ ಮುಸ್ಲಿಮರ ಪಾತ್ರವೇ ದೊಡ್ಡದಾಗಿದೆ. ಕನಿಷ್ಠವೆಂದರೆ, ಇನ್ನೂ ಮೂರು ಮಂತ್ರಿ ಸ್ಥಾನವನ್ನು ಮುಸ್ಲಿಮರಿಗೆ ನೀಡಬೇಕು ಎಂದು ಬ್ಯಾರಿ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ಆಗ್ರಹಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಬಿಜೆಪಿಯ ಸ್ನೇಹಿತರಿಗೆ ಹೇಳ್ತಿದ್ದೆ. ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಯಾರಾದರೂ ಬಂಡವಾಳ ಹೂಡಿಕೆ ಮಾಡಿದ್ದೀರಾ? ನೀವೆಲ್ಲ, ದುಬೈಗೆ ಹೋಗಿದ್ದೀರಿ. ಬಿಜೆಪಿ ಜಾತಿ ವಿಷಬೀಜ ಬಿತ್ತಿ ಸಾಮರಸ್ಯ ಹಾಳುಮಾಡಿದ್ದಾರೆ. ಖಾದರ್ ಅವರೇ ನೀವೇನು ಮಂತ್ರಿ ಆಗ್ಲಿಲ್ಲ ಎಂದು ಚಿಂತೆ ಮಾಡೊದು ಬೇಡ ಎಸ್ ಎಂ ಕೃಷ್ಣ ಅವರು ಸ್ಪೀಕರ್ ಆಗಿದ್ದರು. ಜಗದೀಶ್ ಶೆಟ್ಟರ್ ಅವರು ಸ್ಪೀಕರ್ ಆಗಿದ್ದರು. ಆಮೇಲೆ ಏನಾದ್ರು...? ಯು.ಟಿ.ಖಾದರ್ ಅವರ ಹಣೆ ಬರಹ ಹೇಗಿದ್ಯೋ ಏನೋ? ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಂದೆ ಸಿಎಂ ಆಗುವ ಅವಕಾಶ ಸಿಗಬಹುದು ಎಂದು ಡಿಕೆಶಿ ಹೇಳಿದರು.
ಮುಸ್ಲೀಮರೆಂದರೆ ಬಿಜೆಪಿಗೆ ಯಾಕೆ ದ್ವೇಷ? ಸೆಕ್ಯುಲರ್ ಬಗ್ಗೆ ಪಾಠ ಮಾಡಿದ ಸಿಎಂ ಸಿದ್ಧರಾಮಯ್ಯ!
ಮುಂದೆ ಚುನಾವಣೆ ಬರ್ತಿದೆ, ನೀವೆಲ್ಲ ಬೆಂಗಳೂರಿನಲ್ಲಿದ್ರೆ ಪ್ರಯೋಜನ ಇಲ್ಲ. ಮಂಗಳೂರಿಗೆ ಹೋಗಿ, ಉಡುಪಿಗೆ ಹೋಗಿ ಕೆಲಸ ಮಾಡಿ ಇಡೀ ದೇಶಕ್ಕೆ ಒಂದು ಸಂದೇಶ ಕಳುಹಿಸಿ. ಮಂಗಳೂರಿನಲ್ಲಿ, ಉಡುಪಿಯಲ್ಲಿ ನಮ್ಮವರನ್ನ ಗೆಲ್ಲಿಸಿ ಎಂದು ಹೇಳಿದರು ನೀವು ಸಿದ್ದರಾಮಯ್ಯ ಬೆಂಬಲಿಸಿಲ್ಲ, ಡಿ.ಕೆ.ಶಿವಕುಮಾರ್ ಬೆಂಬಲಿಸಿಲ್ಲ. ರಾಜ್ಯದಲ್ಲಿ ಸುಭದ್ರ ಸರ್ಕಾರ ತರಬೇಕು ಎಂದು ನಮ್ಮ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದೀರಾ. ಸುಭದ್ರ ಸರ್ಕಾರ ತರುವಲ್ಲಿ ನಿಮ್ಮ ಪಾತ್ರ ದೊಡ್ಡದಿದೆ. ಈ ಸರ್ಕಾರ ಬರಲು ಕಾರಣಕರ್ತರಾದ ನಿಮಗೆ ಕೋಟಿ ನಮಸ್ಕಾರ ಎಂದು ಡಿಕೆ ಶಿವಕುಮಾರ್ ಕೈ ಮುಗಿದಿದ್ದಾರೆ.
ಲಿಂಗಾಯತ ಸಿಎಂ ವಿಚಾರವಾಗಿ ಶಾಮನೂರಿಗೆ ಸಿಎಂ ತಿರುಗೇಟು!