ಮೈಸೂರು- ಕೊಡಗು ಲೋಕಸಭಾ ಬಿಜೆಪಿ ಟಿಕೆಟ್ ಈ ಬಾರಿಯೂ ನನಗೆ ಸಿಗಲಿದೆ: ಪ್ರತಾಪ್ ಸಿಂಹ
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಈ ಬಾರಿಯೂ ನನಗೆ ಸಿಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು (ಫೆ.28): ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಈ ಬಾರಿಯೂ ನನಗೆ ಸಿಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತು ಊಹಾಪೋಹಗಳನ್ನು ಹರಡಲಾಗುತ್ತಿದೆ ಎಂದರು. ನಾನು ಮೊದಲ ಬಾರಿ ಬಂದಾಗ ನನ್ನ ಜೊತೆ ಯಾರು ಇರಲಿಲ್ಲ. ಪತ್ರಕರ್ತನಾಗಿ ಬಂದ ನನ್ನನ್ನು ಮೈಸೂರು ಕೊಡಗಿನ ಜನರು ಎರಡು ಬಾರಿ ಗೆಲ್ಲಿಸಿದರು. ಈಗ ನನ್ನ ಜೊತೆ ಅಪಾರ ಸಂಖ್ಯೆಯ ನಾಯಕರು, ಕಾರ್ಯಕರ್ತರು ಇದ್ದಾರೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ನನ್ನ ಕೈಹಿಡಿಯಲಿವೆ.
ಪ್ರಧಾನಿ ಮೋದಿಯವರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ಪಕ್ಷದ ವರಿಷ್ಠ ನಾಯಕರ ಆಶೀರ್ವಾದ ನನಗಿದೆ. ಈ ಬಾರಿಯೂ ನನಗೆ ಟಿಕೆಟ್ ಸಿಗಲಿದ್ದು, ಮೂರನೇ ಬಾರಿಯೂ ಗೆಲುವು ಸಾಧಿಸುತ್ತೇನೆ ಎಂದು ಅವರು ಹೇಳಿದರು. ಬಿಜೆಪಿ- ಜೆಡಿಎಸ್ ನಡುವೆ ಟಿಕೆಟ್ ಹಂಚಿಕೆ ಮಾತುಕತೆ ಯಾವಾಗ ಅಂತ್ಯಗೊಳ್ಳಲಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಪಕ್ಷದ ಹಿರಿಯ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಶಾಸಕ ಎಸ್.ಟಿ. ಸೋಮಶೇಖರ್ ಅಡ್ಡಮತದಾನ ಮಾಡಿರುವ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಈ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.
ನೀಲಾಂಬೂರು– ನಂಜನಗೂಡು ರೈಲ್ವೆ ಮಾರ್ಗಕ್ಕೆ ವಿರೋಧ: ಕೇರಳ ಸರ್ಕಾರವು ನೀಲಾಂಬೂರು– ನಂಜನಗೂಡು ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆಗೆ ಮುಂದಾಗಿದ್ದು, ಸರ್ಕಾರ ಅವಕಾಶವನ್ನೂ ನೀಡಿದೆ. ಅದಕ್ಕೆ ವಿರೋಧವಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಸಂಪರ್ಕ ಕಲ್ಪಿಸುವುದರಿಂದ ಯಾವುದೇ ಲಾಭವೂ ಇಲ್ಲ. ಅವರಿಂದ 5 ರೂ. ಸಿಗುವುದೂ ಇಲ್ಲ. ಬಂಡೀಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಿರುವುದರಿಂದ ಅವಕಾಶ ನೀಡಬಾರದು. ವಾಹನಗಳ ರಾತ್ರಿ ಓಡಾಟಕ್ಕೆ ಅನುಮತಿಯನ್ನೂ ನೀಡಬಾರದು ಎಂದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 27 ಸ್ಥಾನಗಳಲ್ಲಿ ಬಿಜೆಪಿ ಗೆಲುವು: ಜಗದೀಶ್ ಶೆಟ್ಟರ್
ನಾಲ್ಕು ಹಳಿಗೇರಿಸಲು ಸಮೀಕ್ಷೆ: ಮೈಸೂರು– ಬೆಂಗಳೂರು ರೈಲ್ವೆ ಮಾರ್ಗ ಚತುಷ್ಪಥವಾಗಲಿದೆ. ತಿರುವುಗಳಿರುವ ಭಾಗದಲ್ಲಿ ಭೂಸ್ವಾಧೀನ ಮಾಡಿ, ನೇರ ಮಾರ್ಗವನ್ನು ನಿರ್ಮಿಸಲು ರೈಲ್ವೆ ಮಂಡಳಿಯ ಕಾರ್ಯಾದೇಶವಾಗಿದೆ. ಸಮೀಕ್ಷಾ ಕಾರ್ಯವು ಮೊದಲು ನಡೆಯಲಿದ್ದು, ನಂತರ ಉಳಿದ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು. ನನ್ನ ಅವಧಿಯಲ್ಲಿಯೇ ಜೋಡಿ ಮಾರ್ಗವಾಯಿತು. ಇದೀಗ ನಾಲ್ಕು ಮಾರ್ಗವೂ ಆಗುತ್ತಿದೆ. ಮೈಸೂರು– ಚೆನ್ನೈ ಬುಲೆಟ್ರೈಲು ಕೂಡ ಬರುವ ಪ್ರಕ್ರಿಯೆಯ ಭಾಗವಿದು ಎಂದರು.