ಟಿಕೆಟ್ ಸಿಕ್ಕರೆ ಅಸೆಂಬ್ಲಿಗೆ ಸ್ಪರ್ಧೆ: ವಿಜಯೇಂದ್ರ
* ವಿಧಾನ ಪರಿಷತ್ ಟಿಕೆಟ್ ತಪ್ಪಿದ್ದಕ್ಕೆ ಬೇಸರ ಇಲ್ಲ
* ಬೋನಿನಲ್ಲಿ ಇಟ್ಟಾಕ್ಷಣ ಹುಲಿ ಹುಲ್ಲು ತಿನ್ನುವುದಿಲ್ಲ
* ವೀರಶೈವ-ಲಿಂಗಾಯತ ಸಮಾಜ ಈ ಭಾಗದಲ್ಲಿ ಬಸವಣ್ಣನ ನೀತಿಯಂತೆ ಕೂರುವ ಅವಶ್ಯಕತೆ ಇಲ್ಲ
ಹಾಸನ(ಮೇ.29): ನನಗೆ ಟಿಕೆಟ್ ಕೊಟ್ಟರೆ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಹೊಳೆನರಸೀಪುರದಲ್ಲಿ ಶನಿವಾರ ನಡೆದ ಬಸವೇಶ್ವರರ 889ನೇ ಹಾಗೂ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಟಿಕೆಟ್ ಕೈತಪ್ಪಿರುವ ಬಗ್ಗೆ ಸಾಕಷ್ಟುಚರ್ಚೆ ಆಗಿದೆ. ಮತ್ತೆ ಮತ್ತೆ ಅದನ್ನೇ ಮಾತನಾಡುವುದರಲ್ಲಿ ಅರ್ಥ ಇಲ್ಲ. ಟಿಕೆಟ್ ಕೈತಪ್ಪಿದ್ದಕ್ಕೆ ನನಗೆ ಯಾವುದೇ ಬೇಸರ ಇಲ್ಲ. ಟಿಕೆಟ್ ಕೊಟ್ಟರೆ ಮುಂಬರುವ ವಿಧಾನಸಭಾ ಚುನಾವಣೆಗೆ ಎದುರಿಸಲು ಸಿದ್ಧನಿದ್ದೇನೆ. ಇಲ್ಲದಿದ್ದರೆ ಪಕ್ಷಕ್ಕಾಗಿ ದುಡಿಯುತ್ತೇನೆ. ರಾಜ್ಯ ನಾಯಕರು, ಕೇಂದ್ರ ನಾಯಕರು ಏನು ಆದೇಶ ಮಾಡುತ್ತಾರೋ ಅದನ್ನು ಪರಿಪಾಲನೆ ಮಾಡುತ್ತೇನೆ. ಎಲ್ಲವೂ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ತಿಳಿಸಿದರು.
ಮೇಲ್ಮನೆ ಟಿಕೆಟ್ ಫೈಟ್: ವಿಜಯೇಂದ್ರ ಟಿಕೆಟ್ ಕೈ ಬಿಟ್ಟಿದ್ದು ಸ್ವತಃ ಮೋದಿ..!
ಪರಿಷತ್ ಚುನಾವಣೆಗೆ 20 ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಅದರಲ್ಲಿ ನಾಲ್ಕು ಹೆಸರನ್ನು ಕೇಂದ್ರ ನಾಯಕರು ಚರ್ಚೆ ಮಾಡಿ ತೀರ್ಮಾನ ಮಾಡಿದ್ದಾರೆ. ಅದರಲ್ಲಿ ನನ್ನ ಹೆಸರು ಇಲ್ಲದಿರುವುದಕ್ಕೆ ನನಗೇನು ಬೇಸರವಿಲ್ಲ. ಬರುವ ದಿನಗಳಲ್ಲಿ ಪಕ್ಷಕ್ಕಾಗಿ ದುಡಿದಿರುವವರನ್ನು ಗುರ್ತಿಸಿ ಅವಕಾಶ ನೀಡಲಿದ್ದಾರೆ, ಆ ವಿಶ್ವಾಸ ನನಗಿದೆ ಎಂದರು.
ಬೋನಿನಲ್ಲಿ ಇಟ್ಟಾಕ್ಷಣ ಹುಲಿ ಹುಲ್ಲು ತಿನ್ನುವುದಿಲ್ಲs:
ಕಾಡಿನಲ್ಲಿರುವ ಹುಲಿಯನ್ನು ಬಂಧಿಸಿ ಬೋನಿನಲ್ಲಿ ಇಟ್ಟಾಕ್ಷಣ ಅದು ಹುಲ್ಲು ತಿನ್ನುವುದಿಲ್ಲ. ಅದೇ ರೀತಿ ವೀರಶೈವ-ಲಿಂಗಾಯತ ಸಮಾಜವು ಈ ಭಾಗದಲ್ಲಿ ಬಸವಣ್ಣನ ನೀತಿಯಂತೆ ಕೂರುವ ಅವಶ್ಯಕತೆ ಇಲ್ಲ ಎಂದು ಇದೇ ವೇಳೆ ವಿಜಯೇಂದ್ರ ಸಮುದಾಯದ ಯುವಕರಿಗೆ ಹೇಳಿದರು.
ಧರ್ಮ ದೊಡ್ಡದಲ್ಲ, ದಯೆ ದೊಡ್ಡದು ಎಂಬ ಶ್ರೇಷ್ಠ ಸಂದೇಶ ನೀಡಿದ ಜಗಜ್ಯೋತಿ ಬಸವೇಶ್ವರರ ಸಾಮಾಜಿಕ ಕ್ರಾಂತಿಯು ಜಗತ್ತಿಗೆ ಮೊದಲ ಸಮಾನತೆಯ ಸಂದೇಶ ಕೊಟ್ಟಿದೆ. ಪ್ರಧಾನಿ ಮೋದಿ, ಯಡಿಯೂರಪ್ಪ ಹಾಗೂ ಇತರರು ಬಸವೇಶ್ವರರ ವಚನಗಳ ಪ್ರೇರಣೆಯಿಂದಾಗಿ ತುಳಿತಕ್ಕೆ ಒಳಗಾದ ಜನರ ಏಳಿಗೆಗೆ ಶ್ರಮಿಸಲು ಸಾಧ್ಯವಾಗಿದೆ. ಕನ್ನಡ ನಾಡಿನಲ್ಲಿ ಹೊಟ್ಟೆಯ ಹಸಿವನ್ನು ಹೋಗಲಾಡಿಸಿ, ಜ್ಞಾನದ ದಾಸೋಹದ ಜತೆಗೆ ಅಕ್ಷರ ದೀವಿಗೆಯನ್ನು ಬೆಳಗಿಸಿದ ಮಹಾನ್ ಸಂತ ಶಿವಕುಮಾರ ಮಹಾಸ್ವಾಮೀಜಿಯವರ ಜಯಂತ್ಯುತ್ಸವ ಆಚರಣೆ ಅರ್ಥಪೂರ್ಣವಾಗಿದೆ ಎಂದರು.