ಮೇಲ್ಮನೆ ಟಿಕೆಟ್‌ ಫೈಟ್: ವಿಜಯೇಂದ್ರ ಟಿಕೆಟ್ ಕೈ ಬಿಟ್ಟಿದ್ದು ಸ್ವತಃ ಮೋದಿ..!

ವಿಜಯೇಂದ್ರ (BY Vijayendra) ಅವರಿಗೆ ಈಗ ಟಿಕೆಟ್‌ ಬೇಡ ಎಂದು ದಿಲ್ಲಿ ನೇತೃತ್ವ ತೀರ್ಮಾನ ತೆಗೆದುಕೊಂಡಾಗ ಲಿಂಗಾಯತ ಕೋಟಾದಲ್ಲಿ ಉಳಿದುಕೊಂಡಿದ್ದು ಎರಡು ಹೆಸರುಗಳು. 1.ಲಕ್ಷ್ಮಣ ಸವದಿ. 2.ಲಿಂಗರಾಜ ಪಾಟೀಲ್‌. 

BJP High Command  Political Calculations on MLC Election Ticket Allocation hls

India Gate Column by Prashant Natu

ಈ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿ  (MLC Election) ಯಡಿಯೂರಪ್ಪ ಪುತ್ರ ವಿಜಯೇಂದ್ರ (BY Vijayendra) ಅವರಿಗೆ ಟಿಕೆಟ್‌ ನೀಡುವುದು ಬೇಡ ಎಂದು ಸ್ವತಃ ಪ್ರಧಾನಿ ಮೋದಿಯೇ (PM Modi) ತೀರ್ಮಾನಿಸಿದ್ದು, ಬೇಕಿದ್ದಲ್ಲಿ 2023ಕ್ಕೆ ಸ್ವಂತ ಊರು ಶಿಕಾರಿಪುರದಿಂದ ನಿಲ್ಲಲಿ ಎಂದು ಟಿಕೆಟ್‌ ಫೈನಲ್‌ ಮಾಡುವಾಗ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ ಈಗ ಪ್ರಮುಖ ನಾಯಕನ ಮಗನಿಗೆ ಟಿಕೆಟ್‌ ಕೊಟ್ಟರೆ ಎಲ್ಲ ಕಡೆಯೂ ಟಿಕೆಟ್‌ ಕೇಳತೊಡಗುತ್ತಾರೆ.

ಅಷ್ಟೇ ಅಲ್ಲ ಈಗ ವಿಜಯೇಂದ್ರ ಶಾಸಕರಾದರೆ ಮುಂದಿನ ತಿಂಗಳು ಮಂತ್ರಿ ಮಾಡುವಂತೆ ಅವರ ಬೆಂಬಲಿಗರು ಒತ್ತಡ ಹಾಕಲು ಆರಂಭಿಸಬಹುದು. ಮಂತ್ರಿಮಂಡಲ ಪುನಾರಚನೆಯೋ, ವಿಸ್ತರಣೆಯೋ ಅಥವಾ ಎರಡೂ ಇಲ್ಲವೋ ಎಂಬ ಗೊಂದಲ ಇರುವಾಗ ವಿಜಯೇಂದ್ರಗೆ ಟಿಕೆಟ್‌ ಈಗ ಬೇಡ, ಮುಂದೆ ಬೇಕಾದರೆ ನೋಡೋಣ ಎಂದು ಬಿಜೆಪಿ ಸಂಸದೀಯ ಮಂಡಳಿ ನಿರ್ಧಾರ ತೆಗೆದುಕೊಂಡಿದೆ.

India Gate: ಮತ್ತೊಂದು ಅಯೋಧ್ಯೆ ಆಗಲಿದೆಯೇ ಕಾಶಿಯ ಗ್ಯಾನ್‌ವಾಪಿ ವಿವಾದ?

ದಿಲ್ಲಿ ಮೂಲಗಳು ಹೇಳುವ ಪ್ರಕಾರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ (JP nadda) ಈ ಬಗ್ಗೆ ಯಡಿಯೂರಪ್ಪ (Yediyurappa) ಜೊತೆಗೂ ಮಾತನಾಡಿ ತಾಳ್ಮೆಯಿಂದ ಇರಿ ಎಂದು ತಿಳಿಸಿದ್ದಾರೆ. ಮೊದಲಿಗೆ 2023ರವರೆಗೆ ಕಾಯಲು ತಯಾರಿದ್ದರೂ ಏಕಾಏಕಿ ಆರ್‌.ಅಶೋಕ್‌ ಮತ್ತು ಗೋವಿಂದ ಕಾರಜೋಳರಿಂದ ವಿಜಯೇಂದ್ರ ಹೆಸರನ್ನು ಶಿಫಾರಸು ಮಾಡಿಸಿದ್ದು ಯಾಕೆ ಎಂಬುದು ದಿಲ್ಲಿ ನಾಯಕರಿಗೆ ಅರ್ಥವಾಗಿಲ್ಲ.

ಟಿಕೆಟ್‌ ಹಂಚಿಕೆ ಒಳಸುಳಿಗಳು

ವಿಜಯೇಂದ್ರ ಅವರಿಗೆ ಈಗ ಟಿಕೆಟ್‌ ಬೇಡ ಎಂದು ದಿಲ್ಲಿ ನೇತೃತ್ವ ತೀರ್ಮಾನ ತೆಗೆದುಕೊಂಡಾಗ ಲಿಂಗಾಯತ ಕೋಟಾದಲ್ಲಿ ಉಳಿದುಕೊಂಡಿದ್ದು ಎರಡು ಹೆಸರುಗಳು. 1.ಲಕ್ಷ್ಮಣ ಸವದಿ. 2.ಲಿಂಗರಾಜ ಪಾಟೀಲ್‌. ಪ್ರಹ್ಲಾದ ಜೋಶಿ ಹುಬ್ಬಳ್ಳಿಯವರೇ ಆದ ಲಿಂಗರಾಜ ಪಾಟೀಲ್‌ರ ಹೆಸರು ಹೇಳಿದ್ದರು. ಆದರೆ, ಹಿಂದೆ ಲಕ್ಷ್ಮಣ್‌ ಸವದಿ ಅವರನ್ನು ಉಪ ಮುಖ್ಯಮಂತ್ರಿ ಮಾಡುವಲ್ಲಿ ಮುಂಚೂಣಿಯಲ್ಲಿದ್ದ ಬಿ.ಎಲ್‌.ಸಂತೋಷ್‌ ಮತ್ತು ಸವದಿಯವರ ಬಹುಕಾಲದ ಮಿತ್ರ ಮುಖ್ಯಮಂತ್ರಿ ಬೊಮ್ಮಾಯಿ ಮಾತಿನಿಂದಾಗಿ ಸವದಿಗೇ ಟಿಕೆಟ್‌ ಲಭಿಸಿದೆ.

ಹೊರಗಡೆ ಸವದಿ (Savadi) ನಾನು 2023ಕ್ಕೆ ಅಥಣಿಯಿಂದ ವಿಧಾನಸಭೆಗೆ ನಿಲ್ಲುತ್ತೇನೆ, ಈಗ ಟಿಕೆಟ್‌ ಬೇಡ ಎಂದು ಹೇಳುತ್ತಿದ್ದರೂ ಕೂಡ ಸಾಕಷ್ಟು ಬಾರಿ ದಿಲ್ಲಿಗೆ ಎಡತಾಕಿ ಟಿಕೆಟ್‌ ಗಿಟ್ಟಿಸಿದ್ದಾರೆ. ಇನ್ನು ದಲಿತ ಕೋಟಾದಲ್ಲಿ ಕಾಂಗ್ರೆಸ್‌ ಹಿನ್ನೆಲೆಯಿಂದ ಬಂದ ಛಲವಾದಿ ನಾರಾಯಣಸ್ವಾಮಿ ಮತ್ತು ಎಬಿವಿಪಿ ಹಿನ್ನೆಲೆಯಿಂದ ಬಂದ ಜಗದೀಶ ಹಿರೇಮನಿ ನಡುವೆ ಪೈಪೋಟಿ ಇತ್ತು. ಆದರೆ ಹಿರೇಮನಿಗೆ ಸಫಾಯಿ ಕರ್ಮಚಾರಿ ಆಯೋಗದಲ್ಲಿ ಅಧಿಕಾರ ಸಿಕ್ಕಿತ್ತು. ಹೀಗಾಗಿ ಛಲವಾದಿ ಹೆಸರನ್ನು ಫೈನಲ್‌ ಮಾಡಲಾಗಿದೆ. ಇನ್ನು ಮಹಿಳಾ ಕೋಟಾದಲ್ಲಿ ರೆಡ್ಡಿ ಸಮುದಾಯದ ಗೀತಾ ವಿವೇಕಾನಂದ ಮತ್ತು ಒಕ್ಕಲಿಗ ಸಮುದಾಯದ ಮಂಜುಳಾ ನಡುವೆ ಪೈಪೋಟಿ ಇತ್ತು. ಮಂಜುಳಾ ಹೆಸರನ್ನು ಪ್ರಹ್ಲಾದ ಜೋಶಿ (Prahlad Joshi) ಮತ್ತು ಶೋಭಾ ಕರಂದ್ಲಾಜೆ (Shobha Karandlaje) ಗಟ್ಟಿಯಾಗಿ ಹೇಳಿದ್ದರು.

India Gate:ನಾಯಕತ್ವ ಬದಲಿಸಲು ಬಿಜೆಪಿ ಸಿದ್ಧವಿಲ್ಲ, ಹೈಕಮಾಂಡ್ ಲೆಕ್ಕಾಚಾರ ಏನು?

ಆದರೆ ಈ ಬಾರಿ ಪರಿಶಿಷ್ಟಪಂಗಡಕ್ಕೆ ಸೇರಿದ ಮಹಿಳೆಗೆ ಟಿಕೆಟ್‌ ನೀಡುವುದು ಸೂಕ್ತ ಎಂದು ದಿಲ್ಲಿ ನಾಯಕರು ಹೇಳಿದಾಗ ಕೊನೆಯ ಒಂದು ಗಂಟೆಯಲ್ಲಿ ತೀರ್ಮಾನವಾದ ಹೆಸರು ಕೊಪ್ಪಳದ ಹೇಮಲತಾ ನಾಯಕರದು (Hemalatha Naik)  ಇನ್ನು ಸಂಘಕ್ಕೆ ನಿಷ್ಠರಾಗಿ ಸರ್ಕಾರಿ ಹುದ್ದೆ ತ್ಯಜಿಸಿ ಕಾರ್ಯಾಲಯದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಹಿಂದುಳಿದ ವರ್ಗದ ಕೇಶವ ಪ್ರಸಾದ ಹೆಸರಿಗೆ ಯಾರದೂ ವಿರೋಧ ಇರಲಿಲ್ಲ. ಕೇಶವ ಪ್ರಸಾದರು ಬಿ.ಎಲ್‌.ಸಂತೋಷ್‌ ಅವರ ಆಪ್ತ. ಹಿಂದೆ 2016ರಲ್ಲಿ ಯಡಿಯೂರಪ್ಪ ರಾಜ್ಯಅಧ್ಯಕ್ಷರಾದಾಗ ಕಾರ್ಯಾಲಯದ ಕಾರ್ಯದರ್ಶಿ ಜಾಗೆಯಿಂದ ತೆಗೆಸಿದ್ದರು.

ದುರ್ಬಲ ಕೋರ್‌ ಕಮಿಟಿ?

ಬಿಜೆಪಿಯಲ್ಲಿ ಯಾವುದೇ ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರದಲ್ಲಿ ಕೋರ್‌ ಕಮಿಟಿ ನಿರ್ಣಯಗಳಿಗೆ ಬಹಳ ಮಾನ್ಯತೆ ಇದೆ. ಆದರೆ ಕರ್ನಾಟಕದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಕೋರ್‌ ಕಮಿಟಿಯನ್ನು ಕ್ಯಾರೇ ಎನ್ನುತ್ತಿರಲಿಲ್ಲ. ಈಗ ಬೊಮ್ಮಾಯಿ ಮುಖ್ಯಮಂತ್ರಿ ಆದ ಮೇಲೆ ದಿಲ್ಲಿ ನಾಯಕರು ರಾಜ್ಯ ಕೋರ್‌ ಕಮಿಟಿ ನಿರ್ಣಯವನ್ನು ಕ್ಯಾರೇ ಅನ್ನುತ್ತಿಲ್ಲ. ಒಂದೊಂದು ವಿಧಾನ ಪರಿಷತ್‌ ಸೀಟ್‌ಗೆ 5 ಹೆಸರು ಕಳಿಸಿದಾಗಲೇ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಹ ಶಿಫಾರಸು ಎಂದು ಅರ್ಥವಾಗಿತ್ತು.

ಗಾಂಧಿಗಳೇ ಅಧಿಕಾರದಲ್ಲಿದ್ದರೆ ವೋಟು ಬೀಳೋದಿಲ್ಲ, ಗಾಂಧಿಗಳು ಅಧಿಕಾರ ಬಿಟ್ರೆ ಪಕ್ಷ ಉಳಿಯೋದಿಲ್ಲ..!

ಹಿಂದೆ ದಿಲ್ಲಿಗೆ ಪಟ್ಟಿಕಳುಹಿಸುವ ಮೊದಲೇ 4 ಸೀಟ್‌ಗಳಿದ್ದರೆ ಜಾತಿ ಮತ್ತು ಸಂಘ ಎರಡನ್ನೂ ಸಮತೋಲನ ಮಾಡಿ ಎರಡೆರಡು ಸೀಟ್‌ಗಳನ್ನು ಯಡಿಯೂರಪ್ಪ ಮತ್ತು ಅನಂತಕುಮಾರ್‌ ಬಣಗಳು ಹಂಚಿಕೊಂಡು, ಒಂದು ಸೀಟ್‌ಗೆ ಒಂದೇ ಹೆಸರನ್ನು ದಿಲ್ಲಿಗೆ ಕಳುಹಿಸುತ್ತಿದ್ದರು. ದಿಲ್ಲಿ ನಾಯಕರಿಗೂ ಒಂದೇ ಹೆಸರು ಬಂದಾಗ ತುಂಬಾ ಬದಲಾಯಿಸುವ ಅವಕಾಶಗಳು ಇರಲಿಲ್ಲ. ಆದರೆ ಈಗ ಕೋರ್‌ ಕಮಿಟಿಯ ತಾಳಮೇಳ ತಪ್ಪಿದೆ. ಹೀಗಾಗಿ ಐದೈದು ಹೆಸರು ಕಳುಹಿಸಲಾಗುತ್ತಿದೆ.

ದಿಲ್ಲಿಯ ದಲ್ಲಾಳಿಗಳು

ದಿಲ್ಲಿಯ ದಲ್ಲಾಳಿಗಳು ಮುಖ್ಯಮಂತ್ರಿ ಮಾಡಲು ಎಷ್ಟೋ ಕೋಟಿ ರುಪಾಯಿ ಕೇಳಿದರು ಎಂದು ಬಸನಗೌಡ ಪಾಟೀಲ್‌ ಯತ್ನಾಳ (Yathnal) ಹೇಳಿದ್ದು ಅನೇಕರಿಗೆ ಅಪ್ರಿಯವಾಗಿದ್ದರೂ ಅದು ಸತ್ಯವಾದ ವಿಚಾರವೇ. ಒಮ್ಮೆ ಬಳ್ಳಾರಿ (ballari)  ಮೂಲದ ಬಿಜೆಪಿ ರಾಜಕಾರಣಿಯೊಬ್ಬರು ಕಾಂಗ್ರೆಸ್‌ಗೆ ಬರಬೇಕು ಎಂದು ಕೈಕಾಲು ಹೊಡೆಯತೊಡಗಿದರು. ಆಗ ದಿಲ್ಲಿಯ ಒಬ್ಬ ದಲ್ಲಾಳಿ ನಿಮ್ಮನ್ನು ನೇರವಾಗಿ ಸೋನಿಯಾ ನಿವಾಸ ಟೆನ್‌ ಜನಪಥ್‌ಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ .5 ಲಕ್ಷ ತೆಗೆದುಕೊಂಡು ಒಳಗಡೆ ಕರೆದುಕೊಂಡು ಹೋಗಿ ಕಾರ್ಯದರ್ಶಿಗಳನ್ನು ಭೇಟಿ ಮಾಡಿಸಿ ಬಂದನಂತೆ. ಆವತ್ತು ಸೋನಿಯಾ ದಿಲ್ಲಿಯಲ್ಲೇ ಇರಲಿಲ್ಲ. ಆದರೆ ಬಳ್ಳಾರಿ ಗಣಿ ಮಾಲಿಕರು ನೋಡಿ ಕಾರ್ಯದರ್ಶಿ ಭೇಟಿ ಮಾಡಲು ಕೂಡ ದುಡ್ಡು ನೀರಿನಂತೆ ಚೆಲ್ಲುತ್ತಿದ್ದರು.

ಒಮ್ಮೆ ದಿಲ್ಲಿಯ ಕಾಂಗ್ರೆಸ್‌ನ ದೊಡ್ಡ ನಾಯಕನ ಕಾರ್ಯದರ್ಶಿ ತಾನು ರಾಜೇಶ್‌ ಎಂದು ಪರಿಚಯಿಸಿಕೊಂಡು ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಕರ್ನಾಟಕದ ಒಬ್ಬರು ಮಹಿಳೆ, ಒಬ್ಬರು ಪುರುಷ ಶಾಸಕರಿಗೆ ಫೋನ್‌ ಮಾಡಿದ್ದರು. ನಿಮ್ಮನ್ನು ಮಂತ್ರಿ ಮಾಡಿಸುತ್ತೇನೆ ಎಂದದ್ದೇ ತಡ ದಡಬಡನೆ ಬೆಂಗಳೂರಿನ ಲೀ ಮೆರಿಡಿಯನ್‌ ಹೋಟೆಲ…ಗೆ ಹೋಗಿ ಇವರು ಹಣ ಕೊಟ್ಟು ಬಂದರು. ಮುಂದೆ ಹಣ ತೆಗೆದುಕೊಂಡವ ನಾಪತ್ತೆಯಾದ. ಈ ಕಪ್ಪು ಹಣ ಇರುವವರೆಗೆ ದಲ್ಲಾಳಿಗಳ ಕಾಟ ತಪ್ಪಿದ್ದಲ್ಲ ನೋಡಿ.

ಕಾಂಗ್ರೆಸ್ ಮತ್ತು ಪ್ರಶಾಂತ್ ಕಿಶೋರ್ ನಡುವಿನ ಮಾತುಕತೆ ಮುರಿದು ಬೀಳಲು ನಿಜವಾದ ಕಾರಣ ಏನು?

ಇಂಥವರಿಗೆ ಮೋದಿ ಏನ್ಮಾಡ್ತಾರೆ?

ಒಂದೆರಡು ವರ್ಷದ ಹಿಂದೆ ಯಾವುದೋ ಸರ್ಕಾರಿ ಕಂಪನಿಗೆ ನಿರ್ದೇಶಕನನ್ನಾಗಿ ಮಾಡಲು ಕರ್ನಾಟಕದ ಬಿಜೆಪಿ ಕಾರ್ಯಕರ್ತರೊಬ್ಬರ ಹೆಸರು ಹೋಯಿತು. ಮೊದಲ ಬಾರಿ ಆ ಹೆಸರು ನೋಡಿದ ಮೋದಿ ಸಾಹೇಬರು ಆ ವ್ಯಕ್ತಿಯ ಹೆಸರು ನೋಡಿಯೇ ಫೈಲ್ ಪಕ್ಕಕ್ಕೆ ಇಟ್ಟರು. ರಾಜ್ಯ ನಾಯಕರು ಸುಮ್ಮನೆ ಇರದೆ ಇನ್ನೊಮ್ಮೆ ಅದೇ ಹೆಸರು ಕಳುಹಿಸಿದರು. ಆಗ ತನ್ನ ಕಾರ್ಯದರ್ಶಿಯತ್ತ ಸಿಟ್ಟಿನಿಂದ ನೋಡಿದ ಮೋದಿ, ‘ಈತ ದಲ್ಲಾಳಿ ಎಂದು ಗೊತ್ತಿದ್ದರೂ ನಿರ್ದೇಶಕ ಮಾಡುವುದಾ? ಈ ಹೆಸರು ಮತ್ತೊಮ್ಮೆ ತರಬೇಡಿ’ ಎಂದು ವಾಪಸ್‌ ಕಳುಹಿಸಿದರು. ಅಷ್ಟೇ ಅಲ್ಲ ಆ ವ್ಯಕ್ತಿಯ ಪೂರ್ತಿ ಜಾತಕ ಹೇಳಿದರು. 8 ವರ್ಷದ ನಂತರವೂ ಮೋದಿ ಮೇಲೆ ಕಪ್ಪು ಚುಕ್ಕೆ ಬರದೇ ಇರಲು ಇದು ಮುಖ್ಯ ಕಾರಣ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

Latest Videos
Follow Us:
Download App:
  • android
  • ios