ನಾನು ಮುಖ್ಯಮಂತ್ರಿ ಆಗುತ್ತೇನೆ: ಜನಾರ್ದನ ರೆಡ್ಡಿ
* ಜನಾರ್ದನ ರೆಡ್ಡಿ ಮನಸ್ಸು ಮಾಡಿದ್ರೇ ಸಿಎಂ ಆಗ್ತಾರಂತೆ
* ಅಣ್ಣನ ಹುಟ್ಟು ಹಬ್ಬದ ದಿನದಂದು ಹೊಸ ಬಾಂಬ್ ಸಿಡಿಸಿದ ಜನಾರ್ದನ ರೆಡ್ಡಿ
* ಸಿಬಿಐ ಅಧಿಕಾರಿಗಳು ಕಿರುಕುಳ ಕೊಡಲು ಕಾಣದ ಕೈಗಳು ಕೆಲಸ ಮಾಡಿವೆಯಂತೆ
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬಳ್ಳಾರಿ
ಬಳ್ಳಾರಿ(ಜೂ.22): ಸದಾ ಒಂದಲ್ಲೊಂದು ಹೇಳಿಕೆ ನೀಡೋ ಮೂಲಕ ಚರ್ಚೆಗೆ ಗ್ರಾಸವಾಗೋ ಮಾಜಿ ಸಚಿವ ಜನಾರ್ದನ ರೆಡ್ಡಿ ಈ ಬಾರಿ ಸಿಎಂ ಆಗೋ ಬಗ್ಗೆ ಮಾತನಾಡೋ ಮೂಲಕ ಸಂಚಲನ ಮೂಡಿಸಿದ್ದಾರೆ.
ನಾನು ಮನಸ್ಸು ಮಾಡಿದ್ರೆ, ಯಾವತ್ತಾದ್ರು ಒಂದು ದಿನ ಮುಖ್ಯಮಂತ್ರಿ ಆಗುವೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಸಕ್ರಿಯ ರಾಜಕೀಯಕ್ಕೆ ಬರೋ ಮುನ್ಸೂಚನೆ ನೀಡಿದ್ದಾರೆ. ಸಹೋದರ ಸೋಮಶೇಖರ್ ರೆಡ್ಡಿ ಹುಟ್ಟು ಹಬ್ಬದ ದಿನದ ಕಾರ್ಯಕ್ರಮದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜಕೀಯ ಬರೋ ಇಚ್ಛೆಯನ್ನು ಪ್ರಸ್ತಾಪಿಸಿದ ಜನಾರ್ದನ ರೆಡ್ಡಿ, ನಮ್ಮ ಕುಟುಂಬದಲ್ಲಿ (ರೆಡ್ಡಿ, ರಾಮುಲು ಸಹೋದರರು) ದುಡ್ಡಿನ ಅವಶ್ಯಕತೆ ಇಲ್ಲ. ನಮ್ಮಲ್ಲಿ ಎಲ್ಲವೂ ಇದೆ. ನನಗೆ ಶಾಸಕ ಆಗಬೇಕು. ಮಂತ್ರಿ ಆಗಬೇಕೆಂದು ಆಸೆಯಿಲ್ಲ. ಆದ್ರೇ ನಾನು ಮನಸ್ಸು ಮಾಡಿದ್ರೆ ಒಂದು ದಿನ ಆದ್ರು ಸಿಎಂ ಆಗುವೆ ಎಂದಿದ್ದಾರೆ.
ರಾಜಕೀಯ ಮಾಡುವ ಉದ್ದೇಶ ಇಲ್ಲ: ಜನಾರ್ದನ ರೆಡ್ಡಿ
ರೆಡ್ಡಿ ಕುಟುಂಬದ ರಾಜಕೀಯ ಸೇವೆ ಉಲ್ಲೇಖ
ಇನ್ನು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗಾಗಿ ರೆಡ್ಡಿ ಸಹೋದರರು ಸಾಕಷ್ಟು ಸೇವೆಯನ್ನು ಮಾಡಿದ್ದೇವೆ. ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಮತ್ತು ಎರಡು ಬಾರಿ ಶಾಸಕರಾಗಿ ಕರುಣಾಕರ ರೆಡ್ಡಿ ಕೆಲಸ ಮಾಡಿದ್ದಾರೆ. ಸೋಮಶೇಖರ ರೆಡ್ಡಿ ಬಳ್ಳಾರಿ ನಗರಸಭೆ ಅಧ್ಯಕ್ಷರಿಂದ ಇದೀಗ ಎರಡು ಬಾರಿ ಶಾಸಕರಾಗಿ ಬಳ್ಳಾರಿಯಲ್ಲಿ ಉತ್ತಮ ಸೇವೆ ಮಾಡ್ತಿದ್ದಾರೆ. ನಾನು ಕೂಡ ಒಮ್ಮೆ ಮಂತ್ರಿಯಾಗಿ ಬಳ್ಳಾರಿಗೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ ಎಂದರು.
ಯಾರಿಗೂ ಕೊಡಲಾರದಷ್ಟು ಕಷ್ಟ ಕೊಟ್ಟರೂ
ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ನನಗೆ ಸಾಕಷ್ಟು ಕಿರುಕುಳ ಕೊಡಲಾಗಿದೆ. ಇಷ್ಟಾದ್ರೂ ನಾನಿಂದು ನಿಮ್ಮ ಮುಂದೆ ಬಂದು ನಿಲ್ಲಲು ಬಳ್ಳಾರಿ ಕನಕದುರ್ಗಮ್ಮ ದೇವಿ ವಿಶೇಷ ಆಶೀರ್ವಾದ ನೀಡಿದ್ದಾಳೆ. ನನ್ನ ಸ್ಥಳದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇಷ್ಟೊಂದು ಸಮಸ್ಯೆ ಎದುರಿಸಲಾಗುತ್ತಿರಲಿಲ್ಲ ಅಷ್ಟೊಂದು ತೊಂದರೆ ನನಗೆ ನೀಡಿದ್ದಾರೆ. ಇನ್ನೂ ನನಗೆ ತೊಂದರೆ ನೀಡಲು ಮೇಲಿನರು ಹೇಳಿದ್ದಾರೆಂದು ಸಿಬಿಐನವರೇ ನನಗೆ ಹೇಳಿದ್ದಾರೆ. ಆ ಮೇಲಿನವರು ಯಾರು ಎನ್ನುವದು ಗೊತ್ತಿಲ್ಲ ಎನ್ನುವ ಮೂಲಕ ಮತ್ತೊಮ್ಮೆ ಹಿರಿಯ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ರು. ಇನ್ನೂ ಸಿಬಿಐ ಅಧಿಕಾರಿಗಳು ಹೇಳೋ ಪ್ರಕಾರ ಬಳ್ಳಾರಿಯ ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಆದ್ರೇ ನಮ್ಮ ಕೆಲಸ ನಾವು ಮಾಡಿದ್ದೇವೆ ಎಂದಿದ್ದಾರಂತೆ.
ಹುಟ್ಟು ಹಬ್ಬದ ಸಮಾರಂಭದಲ್ಲಿ ಮನ ಬಿಚ್ಚಿ ಮಾತನಾಡಿದ ರೆಡ್ಡಿ
ಬಳ್ಳಾರಿಯಲ್ಲಿ ನಿನ್ನೆ(ಮಂಗಳವಾರ) ರಾತ್ರಿ ನಡೆದ ಶಾಸಕ ಸೋಮಶೇಖರ ರೆಡ್ಡಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮನಬಿಚ್ಚಿ ಮಾತನಾಡಿದ್ದಾರೆ. ಸುದೀರ್ಘ ಆರ್ಧ ಗಂಟೆ ಮಾತನಾಡಿದ ರೆಡ್ಡಿ ತಾವಿದ್ದಾಗ ಬಳ್ಳಾರಿ ಯಾವ ರೀತಿ ಅಭಿವೃದ್ಧಿ ಮಾಡಿದ್ದೆವು. ಈಗ ಏನಾಗ್ತಿದೆ ಎನ್ನುವ ವಿವರಣೆ ನೀಡಿದ್ರು ಜೊತೆಗೆ ಬಳ್ಳಾರಿಯ ಅಭಿವೃದ್ಧಿಯೇ ನಮಗೆ ಮೂಲಮಂತ್ರವೆಂದರು.