ಇದೆ ಅವಧಿಗೆ ಸಿಎಂ ಆಗುತ್ತೇನೆ ಎಂದ ಉಮೇಶ್ ಕತ್ತಿ : ಅಚ್ಚರಿ ಮೂಡಿಸಿದ ಹೇಳಿಕೆ
- ಜೀವಂತ ಇದ್ದರೆ ಇದೇ ಅವಧಿಗೆ ಸಿಎಂ ಆಗುತ್ತೇನೆ, ಸತ್ತರೆ ಮುಂದಿನ ಅವಧಿಗೆ ಸಿಎಂ ಆಗುತ್ತೇನೆ
- ರಾಜ್ಯ ರಾಜಕೀಯದಲ್ಲಿ ಅಚ್ಚರಿ ಮೂಡಿಸಿದ ಸಚಿವ ಉಮೇಶ್ ಕತ್ತಿ ಹೇಳಿಕೆ
ಬಾಗಲಕೋಟೆ(ಆ.15): ಜೀವಂತ ಇದ್ದರೆ ಇದೇ ಅವಧಿಗೆ ಸಿಎಂ ಆಗುತ್ತೇನೆ, ಸತ್ತರೆ ಮುಂದಿನ ಅವಧಿಗೆ ಸಿಎಂ ಆಗುತ್ತೇನೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಇದರಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ಅವಧಿ ಪೂರ್ಣಗೊಳಿಸುವುದಿಲ್ಲವೇ ಎನ್ನುವ ಅನುಮಾನ ಮೂಡಿದ್ದು, ಅಚ್ಚರಿಕೆ ಕಾರಣವಾಗಿದೆ.
ಬಾಗಲಕೋಟೆಯಲ್ಲಿಂದು ಮಾತನಾಡಿದ ಸಚಿವ ಉಮೇಶ ಕತ್ತಿ ಮತ್ತೇ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಆಸೆ ಈಡೇರಿಸಲು ಸಿಎಂ ಆಗುತ್ತೇನೆಂದು ಮಾಧ್ಯಮಗಳನ್ನುದ್ದೇಶಿಸಿ ಹೇಳಿದರು.
ಸಿಎಂ ರೇಸ್‌ನಲ್ಲಿ ನಾನು ಮುಂಚೂಣಿಯಲ್ಲಿರುವೆ: ಕೈ ಎತ್ತಿದ ಬಿಜೆಪಿ ನಾಯಕ
ಸಿಎಂ ಆದರೆ ಇದೇ ಅವಧಿಗೆ ಸಿಎಂ ಆಗುತ್ತೇನೆ ಎಂದು ನಗುತ್ತಲೇ ಉತ್ತರಿಸಿದ್ದಾರೆ. ಸದ್ಯ ಉಮೇಶ್ ಕತ್ತಿ ಹೇಳಿಕೆ ರಾಜಕೀಯದಲ್ಲಿ ಅಚ್ಚರಿಯನ್ನುಂಟು ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದ ವಿಡಿಯೊ ವೈರಲ್ ಆದ ಬಳಿಕ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪವಾಗಿತ್ತು. ರಾಜ್ಯ ರಾಜಕಾರಣದಲ್ಲಿ ಭಾರಿ ಸುದ್ದಿಯನ್ನೆ ಎಬ್ಬಿಸಿತ್ತು.
ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಯಿತು ಎಂದು ಕಟೀಲ್ ತಮ್ಮ ಆಡಿಯೋದಲ್ಲಿ ಹೇಳಿದ್ದು, ಇದೇ ವೇಳೆ ಸಿಎಂ ರಾಜೀನಾಮೆ ನೀಡಿದರೆ ಬಿಜೆಪಿಯಲ್ಲಿ ಮುಂದಿ ಸಿಎಂ ಯಾರು ಎನ್ನವ ಚರ್ಚೆ ಜೋರಾಗಿತ್ತು. ಈ ವೇಳೆ ಪ್ರಮುಖ ಹೆಸರುಗಳು ಕೇಳಿಬಂದಿದ್ದವು.
ಇದರ ಮಧ್ಯೆ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ನಾನು ಮುಂಚೂಣಿಯಲ್ಲಿರುವೆ ಎಂದು ಬಿಜೆಪಿ ಹಿರಿಯ ಸಚಿವ ಉಮೇಶ ಕತ್ತಿ ಹೇಳಿದ್ದರು. ಅದರೆ ರಾಜ್ಯದಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.