ಪ್ರಿಯಾಂಕ್‌ ಖರ್ಗೆಯವರು ಸರ್ಕಾರದ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಸಿಎಂನವರಿಗೆ ಪತ್ರ ಬರೆದ ಬೆನ್ನಲ್ಲೇ ಬಿಜೆಪಿ ನಾಯಕರು ಬೀದಿಗಿಳಿದು, ‘ಐ ಲವ್‌ ಆರ್‌ಎಸ್‌ಎಸ್‌’ ಪೋಸ್ಟರ್‌ ಅಭಿಯಾನ ಶುರು ಮಾಡಿದ್ದಾರೆ.

ಕಲಬುರಗಿ (ಅ.14): ಸಚಿವ ಪ್ರಿಯಾಂಕ್‌ ಖರ್ಗೆಯವರು ಸರ್ಕಾರದ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದ ಬೆನ್ನಲ್ಲೇ ಕಲಬುರಗಿ ನಗರದಲ್ಲಿ ಬಿಜೆಪಿ ನಾಯಕರು ಬೀದಿಗಿಳಿದು, ‘ಐ ಲವ್‌ ಆರ್‌ಎಸ್‌ಎಸ್‌’ ಪೋಸ್ಟರ್‌ ಅಭಿಯಾನ ಶುರು ಮಾಡಿದ್ದಾರೆ.

‘ಯಾರು ಭಾರತವನ್ನು ಪ್ರೀತಿಸುತ್ತಾರೋ, ಅವರು ಆರ್‌ಎಸ್‌ಎಸ್‌ ಅನ್ನೂ ಪ್ರೀತಿಸುತ್ತಾರೆ’ ಎಂದು ಇಲ್ಲಿನ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೋಸ್ಟರ್‌ ಅಂಟಿಸುವ ಮೂಲಕ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ್‌ ಖರ್ಗೆಗೆ ಭರ್ಜರಿ ಟಾಂಗ್‌ ನೀಡಿದ್ದಾರೆ. ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್‌, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್‌ ರದ್ದೇವಾಡಗಿ ಸೇರಿದಂತೆ ಬಿಜೆಪಿಯ ಅನೇಕ ಪ್ರಮುಖರು, ಯುವ ಮುಖಂಡರು ನಗರದಲ್ಲಿನ ಪೋಸ್ಟರ್‌ ಅಂಟಿಸುವ ಅಭಿಯಾನದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಸಂಘ ಪರಿವಾರ ರಾಷ್ಟ್ರಾದ್ಯಂತ ದೇಶಭಕ್ತಿಗೆ ಪ್ರೇರಣೆ ನೀಡುತ್ತದೆ, ಇದು ಸಚಿವರಿಗೆ ಗೊತ್ತಿಲ್ಲವೆ? ಸಂಘದ ಜನ್ಮ ಶತಾಬ್ದಿ ವರ್ಷಾಚರಣೆಯಲ್ಲಿ ಇಡೀ ದೇಶದ ಜನರೇ ಪಾಲ್ಗೊಂಡು ಹರ್ಷ ಪಡುತ್ತಿರುವಾಗ ಸಚಿವ ಖರ್ಗೆಯವರು ಮೊಸರಲ್ಲಿ ಕಲ್ಲು ಹುಡುಕುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಖರ್ಗೆ ಬರೆದ ಪತ್ರವನ್ನು ಉಗ್ರವಾಗಿ ಖಂಡಿಸಿದ್ದಾರೆ.

ಮತ್ತೆ ಬಿಜೆಪಿ ಕಿಡಿ

ರಾಜ್ಯದಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಆವರಣದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಯಾಂಕ್‌ ಖರ್ಗೆ ಬರೆದಿರುವ ಪತ್ರಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್‌, ಆರ್‌ಎಸ್ಎಸ್ ಬಗ್ಗೆ ಮಾತನಾಡದಿದ್ದರೆ ಪ್ರಿಯಾಂಕ್‌ ಖರ್ಗೆ ಅವರಿಗೆ ತಿಂದ ಕೂಳು‌ ಅರಗುವುದಿಲ್ಲ. ಪ್ರಿಯಾಂಕ್‌ ಖರ್ಗೆ ಅಪ್ಪನ ವಶೀಲಿಯಿಂದ ಮಂತ್ರಿಯಾಗಿದ್ದಾರೆ. ಇಲ್ಲದಿದ್ದರೆ ಮೊದಲ ಬಾರಿ ಶಾಸಕರಾದಾಗಲೇ ಮಂತ್ರಿಯಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಏನೇ ಮಾತನಾಡಿದರೂ ಆರ್‌ಎಸ್‌ಎಸ್‌ನ್ನು ಏನೂ ಮಾಡಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಆರ್ ಎಸ್ಎಸ್ ಬ್ಯಾನ್ ಮಾಡುವ ವಿಚಾರ ಮರೆತು ಬಿಡಿ. ನೆಹರು ಕುಟುಂಬದ ಕೈಯಲ್ಲೇ ಆಗಿಲ್ಲ. ಇನ್ನು ನೆಹರು ಮರಿ ಮೊಮ್ಮಗಳ ಹೆಸರು ಇಟ್ಟುಕೊಂಡಿರುವ ನಿಮ್ಮ ಕೈಯಲ್ಲಿ, ಸಿದ್ದರಾಮಯ್ಯನವರ ಕೈಯಲ್ಲಿ ಇದು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.