ನಾನು ನಾಮಪತ್ರ ಸಲ್ಲಿಸಲು ಹಾಗೂ ಪ್ರಚಾರಕ್ಕಾಗಿ ಬಾದಾಮಿಗೆ ಹೋಗಿದ್ದೆ. ಅದು ಬಿಟ್ಟರೆ ನನಗೆ ಏನೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರು (ಆ.10): ಬಾದಾಮಿಯಲ್ಲಿ ಸಿದ್ದರಾಮಯ್ಯನವರು ಮತ ಖರೀದಿಸಿ ಗೆದ್ದರು ಎಂಬ ಮಾಜಿ ಕೇಂದ್ರ ಸಚಿವ ಇಬ್ರಾಹಿಂ ಅವರು ಮಾಡಿರುವ ಆರೋಪದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ಇಬ್ರಾಹಿಂ ನಮ್ಮ ಪಕ್ಷದವರಲ್ಲ. ನಾನು ನಾಮಪತ್ರ ಸಲ್ಲಿಸಲು ಹಾಗೂ ಪ್ರಚಾರಕ್ಕಾಗಿ ಬಾದಾಮಿಗೆ ಹೋಗಿದ್ದೆ. ಅದು ಬಿಟ್ಟರೆ ನನಗೆ ಏನೂ ಗೊತ್ತಿಲ್ಲ. ನಾನು ಅಲ್ಲಿ 1,600 ಮತಗಳಿಂದ ಗೆದ್ದಿದ್ದೇನೆ. ಆದರೆ, ಇಬ್ರಾಹಿಂ ಹೇಳಿರುವ ವಿಚಾರ ನನಗೆ ಹೊಸದು, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದರು. ‘ಆ ಸಂದರ್ಭದಲ್ಲಿ ಇಬ್ರಾಹಿಂ ನನ್ನ ಪರವಾಗಿ ಕೆಲಸ ಮಾಡಿದ್ದರು. ಆದರೆ, ಮತ ಖರೀದಿ ಮಾಡಿದ್ದರು ಎಂಬುದು ನನಗೆ ಹೊಸ ವಿಚಾರ. ಈ ಬಗ್ಗೆ ನಾನು ಕೇಳೆ ಇರಲಿಲ್ಲ’ ಎಂದರು.
ಸಮಾನವಾದ ಅವಕಾಶಗಳು ದೊರೆಯಬೇಕು: ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳು ದೊರೆಯಬೇಕು. ಸಮಾಜದಲ್ಲಿ ಇರುವ ಆರ್ಥಿಕ ಅಸಮಾನತೆ ಹೋಗಳಾಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವು ಯೋಜನೆ ಹಾಗೂ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ ತಿಳಿಸಿದರು. ವರುಣ ಕ್ಷೇತ್ರದಲ್ಲಿ 1107.72 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಎಲ್ಲಾ ಯಾವುದೇ ಜಾತಿ ಧರ್ಮವನ್ನು ಪರಿಗಣಿಸದೆ ಎಲ್ಲಾ ಜಾತಿಯ ಬಡವರು, ರೈತರು, ಮಹಿಳೆಯರು, ಆರ್ಥಿಕವಾಗಿ ಹಿಂದುಳಿದವರ ಏಳಿಗೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ನಾನು 2013ರಲ್ಲಿ ಚುನಾವಣಾ ಸಂದರ್ಭದಲ್ಲಿ 163 ಭರವಸೆ ನೀಡಿದ್ದೆವು. ಇದರಲ್ಲಿ 158 ಭರವಸೆ ಈಡೇರಿಸಿದ್ದೇವೆ. ರೈತರ ಬಡವರ ಪರ ಶೋಷಿತರ ಪರ ಕೆಲಸ ಮಾಡಿದ್ದೇವೆ. 2023ರ ಚುನಾವಣಾ ಸಂದರ್ಭದಲ್ಲಿ 5 ಗ್ಯಾರಂಟಿ ಯೋಜನೆ ನೀಡುವುದಾಗಿ ಭರವಸೆ ನೀಡಿದ್ದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ ಹಾಗೂ ಯುವನಿಧಿ ಗ್ಯಾರೆಂಟಿ ಯೋಜನೆ ಜಾರಿಗೆ ತಂದು ಬಡವರ ಏಳಿಗೆಗೆ ಆರ್ಥಿಕ ಅಸಮಾನತೆ ಹೋಗಲಾಡಿಸಲು ಕ್ರಮ ವಹಿಸಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 55 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ಕರ್ನಾಟಕದ ತಲಾ ಆದಾಯದಲ್ಲಿ ಮೊದಲ ಸ್ಥಾನದಲ್ಲಿ ಇದೆ. ಗ್ಯಾರಂಟಿ ಯೋಜನೆಗಳಿಂದ ಜನರ ಕೈಗೆ ಹಣ ಸಿಕ್ಕಿ ಆರ್ಥಿಕ ಚಟುವಟಿಕೆಗಳು ಹೆಚ್ಚಾದವು. ಇದರಿಂದ ತಲಾ ಆದಾಯ ಹೆಚ್ಚಾಗಿದೆ. ಜಿಎಸ್ಟಿ ತೆರಿಗೆ ಪಾವತಿಯಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿ ಇದೆ. ಮಹಾರಾಷ್ಟ್ರ ರಾಜ್ಯ ಮೊದಲ ಸ್ಥಾನದಲ್ಲಿ ಇದೆ. ನಾವು 2023ರ ಚುನಾವಣೆಗೆ ಮೊದಲು 542 ಭರವಸೆ ನೀಡಿದ್ದೆವು. ಅದರಲ್ಲಿ 242 ಭರವಸೆ ಈಡೇರಿಸಿದ್ದೇವೆ. ನಮ್ಮದು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ರೇಷ್ಮೆ ಹಾಗೂ ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್, ಚಾಮರಾಜನಗರ ಸಂಸದ ಸುನೀಲ್ ಬೋಸ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ವಿಧಾನ ಪರಿಷತ್ತು ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ. ತಿಮ್ಮಯ್ಯ, ಹದಿನಾರು ಗ್ರಾಪಂ ಅಧ್ಯಕ್ಷೆ ಸಣ್ಣತಾಯಮ್ಮ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್ ಮೊದಲಾದವರು ಇದ್ದರು.
