ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ಕಾನೂನು ಇಲಾಖೆ ಪರಿಶೀಲನೆ ನಡೆಸಲಿದ್ದು, ಅವರು ನೀಡುವ ಶಿಫಾರಸ್ಸಿನ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಮೈಸೂರು (ಆ.10): ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿಯವರು ಸಾಕ್ಷಿ ಸಮೇತ ವಿಚಾರಗಳನ್ನು ತಿಳಿಸಿದ್ದಾರೆ. ಈ ವಿಚಾರ ಎಲ್ಲವೂ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗದ ಬಳಿ ಲಭ್ಯವಿದೆ. ದಾಖಲಾತಿಗಳ ಬಗ್ಗೆಯೇ ಅವರು ಪ್ರಸ್ತಾಪ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಜೊತೆಗೆ, ಒಂದೇ ಸಣ್ಣ ಕೊಠಡಿಯಲ್ಲಿ 80 ಜನ ವಾಸ ಮಾಡಲು ಸಾಧ್ಯವೇ? ಎಂದು ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ಕಾನೂನು ಇಲಾಖೆ ಪರಿಶೀಲನೆ ನಡೆಸಲಿದ್ದು, ಅವರು ನೀಡುವ ಶಿಫಾರಸ್ಸಿನ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪರಿಶೀಲನಾ ಕಾರ್ಯವನ್ನು ತ್ವರಿತವಾಗಿ ನಡೆಸಿ ವರದಿ ನೀಡಲು ಅಡ್ವೊಕೇಟ್ ಜನರಲ್ ಅವರಿಗೆ ಸೂಚನೆ ನೀಡಲಾಗುವುದು. ಮತದಾರರ ಪಟ್ಟಿಯ ಸಂಬಂಧ ಸಂಪೂರ್ಣ ಅಧಿಕಾರವಿರುವುದು ಚುನಾವಣಾ ಆಯೋಗಕ್ಕೆ ಎಂದರು. 2006ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸತ್ತವರೆಲ್ಲಾ ಮತ ಹಾಕಿ ಗೆಲ್ಲಿಸಿದ್ದಾರೆ ಎಂದು ಹಿಂದೆ ನೀವೇ (ಸಿದ್ದರಾಮಯ್ಯ) ಮಾಡಿದ್ದ ಭಾಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ರೀತಿ ನಾನು ಮಾತನಾಡಿಲ್ಲ.

ಒಂದು ವೇಳೆ ಸತ್ತವರು ಮತ ಹಾಕಿದ್ದರೆ ಅದಕ್ಕೆ ಯಾರು ಜವಾಬ್ದಾರರು?. ಚುನಾವಣಾ ಆಯೋಗ ಇದಕ್ಕೆ ನೇರ ಹೊಣೆ ಎಂದರು. ಇವಿಎಂಗಳಲ್ಲಿ, ಮತದಾರರ ಪಟ್ಟಿಗಳಲ್ಲಿ ಕೈವಾಡ ನಡೆಯುತ್ತಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ನನ್ನ ಪ್ರಕಾರ ರಾಹುಲ್ ಗಾಂಧಿಯವರು ಮಾಧ್ಯಮಗಳಲ್ಲಿ ಪ್ರದರ್ಶನ ಮಾಡಿದ್ದು ನಿಜ ಎಂದರು. ಆ ಚುನಾವಣೆಯಲ್ಲಿ ಪೀಟರ್ ವೀಕ್ಷಕರಾಗಿದ್ದರು, ಅದಕ್ಕೆ ಸಿದ್ದರಾಮಯ್ಯ ಗೆದ್ದರು ಎಂದು ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರಿಲ್ಲದೇ ಹೋಗಿದ್ದರೆ ನನ್ನನ್ನು ಸೋಲಿಸುತ್ತಿದ್ದರು ಎಂದರು.

ಬಿಜೆಪಿಗರಿಗೆ ಅಧಿಕಾರದ ದಾಹ: ಬಿಜೆಪಿಗರು ಎಂದಿಗೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ, ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸಿ ಇವಿಎಂ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ, ರಾಜ್ಯದಲ್ಲಿಯೂ ಸಹ ಬಿ.ಎಸ್.ಯಡಿಯೂರಪ್ಪ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ನೀತಿಯಾಗಿದೆ. ಬಿಜೆಪಿಗರು ಬರೀ ಡಾ. ಬಿ.ಆರ್. ಅಂಬೇಡ್ಕರ್ ಹೆಸರು ಹೇಳುತ್ತಾರೆ ಅಷ್ಟೇ, ಆದರೆ, ಅವರು ಬರೆದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ನೀತಿಯನ್ನು ಅನುಸರಿಸುವುದಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ನಾಯಕರು ಈಗ ಮತಗಳ ಸ್ಥಾನದ ಬಗ್ಗೆ ಪ್ರಸ್ತಾಪಿಸಿರುವುದು ಏಕೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ತಪ್ಪು ಮಾಡಿ ಸುಳ್ಳು ಹೇಳುತ್ತಿದ್ದಾರೆ. ನಾವು ಈ ಬಗ್ಗೆ ಅಧ್ಯಯನ ಮಾಡಿದ ನಂತರ ವಿಷಯ ತಿಳಿದಿದೆ. ನಾವು ಕಳೆದ ಲೋಕಸಭಾ ಚುನಾವಣೆಯಲ್ಲಿ ಹದಿನಾರು ಸ್ಥಾನಗಳನ್ನು ಗೆಲ್ಲುವುದಾಗಿ ಆಂತರಿಕ ಸಮೀಕ್ಷೆ ತಿಳಿಸಿತ್ತು. ಆದರೆ, ನಾವು ಗೆದ್ದದ್ದು 9 ಸ್ಥಾನಗಳನ್ನು ಮಾತ್ರ. ರಾಹುಲ್ ಗಾಂಧಿ ಅವರು ಸಾಕ್ಷಿ ಸಮೇತ ವಿಚಾರಗಳನ್ನು ತಿಳಿಸಿದ್ದಾರೆ. ಈ ಎಲ್ಲವೂ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗದ ಬಳಿ ಲಭ್ಯವಿದೆ. ರಾಹುಲ್‌ ಅವರು ದಾಖಲಾತಿಗಳ ಬಗ್ಗೆಯೇ ಪ್ರಸ್ತಾಪ ಮಾಡಿದ್ದಾರೆ. ಒಂದೇ ಸಣ್ಣ ಕೊಠಡಿಯಲ್ಲಿ 80 ಜನ ವಾಸ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.