Asianet Suvarna News Asianet Suvarna News

ಸಚಿವನಾಗುವ ಆಸೆ ಕೈಬಿಟ್ಟಿದ್ದೇನೆ, ಪಕ್ಷಕ್ಕೆ ಸಮಸ್ಯೆ ಸೃಷ್ಟಿಸಲ್ಲ: ಕೆ.ಎಸ್‌.ಈಶ್ವರಪ್ಪ

ಈ ಹಿಂದೆ ನಾನು ಸಚಿವ ಸ್ಥಾನಕ್ಕೆ ಒತ್ತಾಯಿಸಿದ್ದು ನಿಜ. ಆದರೆ, ಈಗ ನಾನು ಸಚಿವನಾಗುವ ಆಸೆ ಕೈಬಿಟ್ಟಿದ್ದೇನೆ. ಮತ್ತೆ ಸಚಿವ ಸ್ಥಾನಕ್ಕೆ ಮನವಿ ಮಾಡಿ, ಕೇಂದ್ರ, ರಾಜ್ಯ ನಾಯಕರಿಗೆ ಸಮಸ್ಯೆ ಸೃಷ್ಟಿಸುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. 

I Have Given up my Desire to Become a Minister Says KS Eshwarappa gvd
Author
First Published Jan 21, 2023, 6:23 AM IST

ಶಿವಮೊಗ್ಗ (ಜ.21): ಈ ಹಿಂದೆ ನಾನು ಸಚಿವ ಸ್ಥಾನಕ್ಕೆ ಒತ್ತಾಯಿಸಿದ್ದು ನಿಜ. ಆದರೆ, ಈಗ ನಾನು ಸಚಿವನಾಗುವ ಆಸೆ ಕೈಬಿಟ್ಟಿದ್ದೇನೆ. ಮತ್ತೆ ಸಚಿವ ಸ್ಥಾನಕ್ಕೆ ಮನವಿ ಮಾಡಿ, ಕೇಂದ್ರ, ರಾಜ್ಯ ನಾಯಕರಿಗೆ ಸಮಸ್ಯೆ ಸೃಷ್ಟಿಸುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಮಾಡದಿರಲು ಹೈಕಮಾಂಡ್‌ಗೆ ಅವರದೇ ಆದ ಕಾರಣಗಳಿರಬಹುದು. ಏನೇನು ಪರಿಸ್ಥಿತಿ ಇದೆಯೋ ಗೊತ್ತಿಲ್ಲ. ಎಲ್ಲವನ್ನೂ ಹೈಕಮಾಂಡ್‌ಗೆ ಬಿಟ್ಟಿದ್ದೇನೆ. ಹೀಗಾಗಿ, ಈ ಹಂತದಲ್ಲಿ ನಾನು ಸಚಿವ ಸ್ಥಾನಕ್ಕೆ ಒತ್ತಾಯಿಸಿ, ಪಕ್ಷಕ್ಕೆ ಸಮಸ್ಯೆ ಸೃಷ್ಟಿಸಲಾರೆ. 

ಈ ಹಿಂದೆ ಸಚಿವ ಸ್ಥಾನ ನೀಡುವಂತೆ ನಾನು ಒತ್ತಾಯಿಸಿದ್ದು ನಿಜ. ಇಡೀ ರಾಜ್ಯದಲ್ಲಿ ಕಾರ್ಯಕರ್ತರು ಕೂಡ ನನಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದರು. ಇನ್ನು ಆ ವಿಷಯದಲ್ಲಿ ಒತ್ತಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಟಿಕೆಟ್‌ ಹಂಚಿಕ ಕುರಿತು ಪ್ರತಿಕ್ರಿಯಿಸಿ, ಈ ವಿಷಯದಲ್ಲಿ ಪಕ್ಷದ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಪಕ್ಷದ ವರಿಷ್ಟರು ಶ್ರೀಕೃಷ್ಣನಿಗಿಂತ ಚಾಣಾಕ್ಷರಿದ್ದಾರೆ. ನ್ಯಾಯಬದ್ಧ ತಂತ್ರಗಾರಿಕೆ ಮಾಡುತ್ತಾರೆ. ಅವರು ಏನೇ ನಿರ್ಧಾರ ಕೈಗೊಂಡರೂ ಅದು ಸರಿಯಾಗಿಯೇ ಇರುತ್ತದೆ ಎಂದು ಹೇಳಿದರು.

ಶ್ರೀಮಂತರಿಗೆ ಮೀಸಲಾತಿ ನೀಡುವುದನ್ನು ನಾನು ಒಪ್ಪಲ್ಲ: ಕೆ.ಎಸ್‌.ಈಶ್ವರಪ್ಪ

ಮಾಡಿದ ಅಡುಗೆಯನ್ನು ಬಡಿಸದೆ ತಿಪ್ಪೆಗೆ ಎಸೆದಿದ್ದರಾ: ಕಲಬುರ್ಗಿಯಲ್ಲಿ 52 ಸಾವಿರ ಹಕ್ಕುಪತ್ರವನ್ನು ಒಂದೇ ವೇದಿಕೆಯಲ್ಲಿ ವಿತರಣೆ ಮಾಡಿರುವುದಕ್ಕೆ ‘ನಾವು ಮಾಡಿದ ಅಡುಗೆಯನ್ನು ಬಿಜೆಪಿಯವರು ಬಡಿಸಿದ್ದಾರೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು ‘ಮಾಡಿದ ಅಡುಗೆಯನ್ನು ಬಡಿಸದೆ ತಿಪ್ಪೆಗೆ ಎಸೆದಿದ್ದರಾ?’ ಎಂದು ಟಾಂಗ್‌ ನೀಡಿದ್ದಾರೆ. ಕಾಂಗ್ರೆಸ್‌ನವರು ಅಡುಗೆ ಮಾಡುವುದು ಹೋಗಲಿ, ಒಲೆಗೆ ಬೆಂಕಿಯನ್ನೇ ಹಚ್ಚಿರಲಿಲ್ಲ. ಇನ್ನು ಅಡುಗೆ ಮಾಡಿ ಬಡಿಸುವುದೆಂತು ಎಂದು ಪ್ರಶ್ನಿಸಿದರು. ಬಿಜೆಪಿ ಮಾಡಿದ ಗಿನ್ನೆಸ್‌ ದಾಖಲೆಗೆ ಸೇರುವಂತಹ ಒಳ್ಳೆಯ ಕೆಲಸದ ಬಗ್ಗೆ ಮಾತನಾಡದೆ ಅದರಲ್ಲಿಯೂ ರಾಜಕೀಯ ಬೆರೆಸುವುದು ಸರಿಯಲ್ಲ ಎಂದರು.

ಸಿದ್ದರಾಮಯ್ಯ 25 ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲಲ್ಲ: ಸಿದ್ದರಾಮಯ್ಯರನ್ನು ಸೋಲಿಸಲು ಕಾಂಗ್ರೆಸ್‌ನವರೇ ಸಜ್ಜಾಗಿದ್ದಾರೆ. ಎರಡಲ್ಲ, ರಾಜ್ಯದ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಸಿದ್ದರಾಮಯ್ಯ ಗೆಲ್ಲಲ್ಲ ವ್ಯಂಗ್ಯವಾಡಿದರು. ಅವರದೇ ಪಕ್ಷದ ಮಲ್ಲಿಕಾರ್ಜುನ ಖರ್ಗೆ, ಡಾ.ಪರಮೇಶ್ವರ್‌ ಸೋಲು ಸೇರಿ, ಇನ್ನೂ ಕೆಲವರ ಸೋಲಿನಲ್ಲಿ ಸಿದ್ದರಾಮಯ್ಯ ಪಾತ್ರವಿದೆ. ಕೋಲಾರದಲ್ಲಿ ಮುನಿಯಪ್ಪ ಅವರನ್ನು ಸೋಲಿಸಿದ್ದನ್ನು ಅವರ ಬೆಂಬಲಿಗರು ಮರೆತಿಲ್ಲ. ಅಲ್ಲಿ ಮುನಿಯಪ್ಪ , ರಮೇಶ್‌ಕುಮಾರ್‌ ಬಣಗಳ ನಡುವೆ ಜಟಾಪಟಿ ಇದೆ. ಹಾಗಾಗಿ ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ಲಲ್ಲ ಎಂದು ಭವಿಷ್ಯ ನುಡಿದರು. 

ಇದೀಗ ಇದ್ದಕ್ಕಿದ್ದಂತೆ ದೇವರು ಪ್ರತ್ಯಕ್ಷವಾಗಿ ಅವರಿಗೆ ಎರಡು ಕಡೆ ಸ್ಪರ್ಧಿಸುವಂತೆ ಹೇಳಿದೆ. ನಾನು ದೇವರನ್ನು ಟೀಕೆ ಮಾಡುವುದಿಲ್ಲ. ಆದರೆ, ಒಂದಂತೂ ಸ್ಪಷ್ಟ. ಈ ಬಾರಿ ಸಿದ್ದರಾಮಯ್ಯ ಸೋಲು ಖಚಿತ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ, ಮಂತ್ರಿ ಸ್ಥಾನ ಕಳೆದುಕೊಂಡ ನಂತರ ತಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗಿದ್ದರು. ಅದಾದ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಇವರೆಲ್ಲ ಸ್ಥಾನ, ಅಧಿಕಾರ ಅನುಭವಿಸುತ್ತಿದ್ದಾರಲ್ಲ ಎಂಬ ನೋವು ಸಿದ್ದರಾಮಯ್ಯರಿಗೆ ಕಾಡತೊಡಗಿದೆ. 

ಸಿದ್ದರಾಮಯ್ಯ ಲೀಡರ್‌ ಆಗುವ ಭ್ರಮೆ ಬಿಡಲಿ: ಕೆ.ಎಸ್‌.ಈಶ್ವರಪ್ಪ ಲೇವಡಿ

ಇಷ್ಟು ದಿನ ನಮ್ಮದು ಜಹಗೀರದಾರ್‌. ನಾವೇ ಅಧಿಕಾರ ನಡೆಸುವವರು ಎಂದುಕೊಂಡಿದ್ದರು. ಆದರೆ, ಇದೀಗ ಎಲ್ಲೆಡೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಇದನ್ನು ತಡೆದುಕೊಳ್ಳಲು ಕಾಂಗ್ರೆಸ್‌ ನಾಯಕರಿಗೆ ಸಾಧ್ಯವಾಗುತ್ತಿಲ್ಲ ಎಂದು ಛೇಡಿಸಿದರು. ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅದನ್ನು ಬಿಟ್ಟು ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸಿದರೆ ಮೀಸಲಾತಿ ದೊರಕುತ್ತದೆ ಎಂದು ಯಾರಾದರೂ ಅಂದುಕೊಂಡರೆ ಹೋರಾಟ ನಡೆಸಿಕೊಳ್ಳಲಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಹೋರಾಟದಿಂದ ಮೀಸಲಾತಿ ದೊರಕುವುದಾದರೆ ಎಲ್ಲ ಸಮಾಜದವರೂ ಹೋರಾಟ ನಡೆಸುತ್ತಾರೆ. ಮೀಸಲಾತಿ ಬೇಕು ಎನ್ನುತ್ತಾರೆ. ನ್ಯಾಯಾಲಯ ನೀಡಿದ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕು.

Follow Us:
Download App:
  • android
  • ios