ರಾಮಮಂದಿರ ನಿರ್ಮಾಣ ಸಂಬಂಧ ಸ್ಥಳದ ಸರ್ವೆ ವರದಿ ಕೇಳಿದ್ದೇನೆ: ಸಂಸದ ಡಿ.ಕೆ.ಸುರೇಶ್
ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳ ಮೀಸಲು ಅರಣ್ಯ ಪ್ರದೇಶದಲ್ಲಿದೆ. ಆದ್ದರಿಂದ ಸರ್ವೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳಿಗೆ ಕೇಳಿದ್ದೇವೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ರಾಮನಗರ (ಜ.12): ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳ ಮೀಸಲು ಅರಣ್ಯ ಪ್ರದೇಶದಲ್ಲಿದೆ. ಆದ್ದರಿಂದ ಸರ್ವೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳಿಗೆ ಕೇಳಿದ್ದೇವೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವೆ ವರದಿ ಬಂದ ಮೇಲೆ ಸರ್ಕಾರದ ಮಟ್ಟದಲ್ಲಿ ಸಂಬಂಧ ಪಟ್ಟ ಸಚಿವರೊಂದಿಗೆ ಚರ್ಚಿಸುತ್ತೇವೆ. ಆನಂತರ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತೇವೆ ಎಂದರು.
ಬಿಜೆಪಿಯವರು ರಾಮದೇವರ ಬೆಟ್ಟದಲ್ಲಿ ಏನು ಮಾಡಿದ್ದಾರೊ ನನಗೆ ಗೊತ್ತಿಲ್ಲ. ಸದ್ಯದ ಮಾಹಿತಿ ಪ್ರಕಾರ ಅಲ್ಲಿ ಅವರು ಏನನ್ನು ಮಾಡಿಲ್ಲವೆಂದು ಗೊತ್ತಾಗಿದೆ. ಏನಾದರು ಮಾಡಿದ್ದರೆ ದಾಖಲೆ ಕೊಡಲಿ ಎಂದು ಹೇಳಿದರು. ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧಿಸುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಸುರೇಶ್ , ಪ್ರಜಾಪ್ರಭುತ್ವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಾರೂ ಎಲ್ಲಿಬೇಕಾದರೂ ಸ್ಪರ್ಧೆ ಮಾಡಬಹುದು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿಯೂ ಸ್ಫರ್ದೆ ಮಾಡಲಿ. ಹೋರಾಟ ಶುರುವಾಗಿದೆ. ನಾನು ತಯಾರಾಗಿಲ್ಲ ವೇದಿಕೆ ಸಿದ್ಧವಾಗಿದೆ ಎಂದು ಉತ್ತರಿಸಿದರು.
ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಇರುವುದಿಲ್ಲವೋ ಅಂತಹ ಧರ್ಮದಲ್ಲಿ ನಂಬಿಕೆ ಇಲ್ಲ: ಸಿದ್ದರಾಮಯ್ಯ
ಆನೆ ಸಮಸ್ಯೆಗೆ ಪರಿಹಾರ: ಜಿಲ್ಲೆಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ೭ಜನ ರೈತರು ಕಾಡಾನೆಗಳ ದಾಳಿಗೆ ಬಲಿಯಾಗಿದ್ದಾರೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಮುತ್ತತ್ತಿ ಭಾಗದಿಂದ ಕಾವೇರಿ ವನ್ಯಜೀವಿಧಾಮದ ಕಾಡಂಚಿನ ಕೊನೆ ಭಾಗದವರೆಗೆ ರೈಲ್ವೇ ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಉದ್ದೇಶಸಿಲಾಗಿದೆ. ಇದಕ್ಕಾಗಿ ಈಗಾಗಲೇ 45 ಕೋಟಿ ಹಣ ಮಂಜೂರಾಗಿದೆ. ಮುಂದಿನ ಮೂರು ವರ್ಷದಲ್ಲಿ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದರು.
ಪೋಡಿ, ಖಾತೆ ಸಮಸ್ಯೆಗೆ ಪರಿಹಾರ: ಜಿಲ್ಲೆಯಲ್ಲಿ ಎಲ್ಲ ಕಡೆ ಸರ್ವೇ, ದುರಸ್ತು ಹಾಗೂ ಪೋಡಿ ಕುರಿತಂತೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಪ್ರತಿ ತಾಲೂಕಿನಲ್ಲೂ ಮೊದಲ ಹಂತದಲ್ಲಿ 6 ಗ್ರಾಮಗಳಲ್ಲಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಆದಷ್ಟು ಶೀಘ್ರದಲ್ಲೆ ದುರಸ್ತು, ಪೋಡಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಚಾಮರಾಜನಗರ ಕ್ಷೇತ್ರದಿಂದ ಯಾರೇ ಕಾಂಗ್ರೆಸ್ ಅಭ್ಯರ್ಥಿಯಾದರೂ ಗೆಲ್ಲಿಸುತ್ತೇವೆ: ಶಾಸಕ ಅನಿಲ್ ಚಿಕ್ಕಮಾದು
ಸಮಸ್ಯೆ ಪರಿಹರಿಸದ ಮಾಜಿ ಸಿಎಂ, ಮಾಜಿ ಸಚಿವರು: ಬಗರ್ ಹುಕುಂ ಸಾಗುವಳಿ ಚೀಟಿಗಾಗಿ ಬೇಡಿಕೆ ಬರುತ್ತಿದೆ. ಇದಕ್ಕಾಗಿ ಸಮಿತಿ ರಚಿಸಿದ್ದು, ಮಂಜೂರು ವೇಳೆಯೇ ಪಹಣಿ, ಖಾತೆ ನೀಡುವ ಚಿಂತನೆ ಇದೆ. ಇದಲ್ಲದೇ ತಾಲೂಕಿನ ಮಾಕಳಿ ಗ್ರಾಮದ ಬಳಿ ಅರಣ್ಯ ಭೂಮಿಯಲ್ಲಿ ಸಾಗುವಳಿ ನಡೆಸುತ್ತಿರುವವರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಯಾವ ಮಾಜಿ ಮುಖ್ಯಮಂತ್ರಿಯಾಗಲಿ, ಮಾಜಿ ಅರಣ್ಯ ಸಚಿವರಾಗಲಿ ಈ ಕುರಿತು ಆಸಕ್ತಿ ವಹಿಸಿರಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೆಸರೇಳದೇ ಪರೋಕ್ಷ ವಾಗ್ದಾಳಿ ನಡೆಸಿದರು.