ನಾನು ವ್ಯಾಪಾರದಲ್ಲೇ ಮುಂದುವರೆದಿದ್ದರೆ ಇಷ್ಟೊತ್ತಿಗೆ ಇಡೀ ದೇಶದಲ್ಲಿ ಮುಖೇಶ್‌ ಅಂಬಾನಿ ನಂತರದ ಸ್ಥಾನದಲ್ಲಿ ಇರುತ್ತಿದ್ದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಚಿತ್ರದುರ್ಗ (ಫೆ.5) : ನಾನು ವ್ಯಾಪಾರದಲ್ಲೇ ಮುಂದುವರೆದಿದ್ದರೆ ಇಷ್ಟೊತ್ತಿಗೆ ಇಡೀ ದೇಶದಲ್ಲಿ ಮುಖೇಶ್‌ ಅಂಬಾನಿ ನಂತರದ ಸ್ಥಾನದಲ್ಲಿ ಇರುತ್ತಿದ್ದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹೇಳಿದ್ದನ್ನು ಮಾಡೋದು, ಮಾಡೋದನ್ನೇ ಹೇಳೋದು ನನ್ನ ಜಾಯಮಾನ. 2008 ರಲ್ಲಿ ಯಡಿಯೂರಪ್ಪನವರ ಸರ್ಕಾರ ರಚಿಸಲಿಕ್ಕೆ ಈ ಕ್ಷೇತ್ರದ ಪಕ್ಷೇತರ ಶಾಸಕ ನನ್ನ ಮೇಲೆ ನಂಬಿಕೆ ಇಟ್ಟು ನಮ್ಮ ಜೊತೆ ಬಂದರು. ಹಾಗಾಗಿ ಈ ಕ್ಷೇತ್ರ ನನಗೆ ಮೊದಲಿನಿಂದಲೂ ಇಷ್ಟವಾಗುತ್ತದೆ ಎಂದರು.

Assembly election: ಕೈ-ಕಮಲಕ್ಕೆ ಕೆಆರ್‌ಪಿಪಿ ಅಭ್ಯರ್ಥಿಯದ್ದೇ ಚಿಂತೆ!

ಈ ತಾಲೂಕಿನ ಜನರ ಋುಣ ತೀರಿಸುವ ಕೆಲಸ ಮಾಡುತ್ತೇನೆ. ನನ್ನ ಕುಟುಂಬದ ಬಗ್ಗೆ ಮತ್ತೆ ಮತ್ತೆ ಮಾತನಾಡಲಾರೆ. ನನ್ನ ಗುರಿ, ಉದ್ದೇಶ ಬಡವರ ಸೇವೆ ಅಷ್ಟೇ. ಈ ಹನ್ನೆರಡು ವರ್ಷ ರಾಜಕೀಯ ಅವಲೋಕನ ಮಾಡುತ್ತಾ ಕುಳಿತೆ. ಯಾರು ಏನೇನು ಮಾತನಾಡುತ್ತಾರೆ, ಯಾರಿಗೆ ನನ್ನ ಬಗ್ಗೆ ಯಾವ ಅಭಿಪ್ರಾಯವಿದೆ ಅಂತೆಲ್ಲಾ ಗಮನಿಸಿದ್ದೇನೆ. ಹಣ ಮಾಡಲು ನನಗೆ ರಾಜಕೀಯ ಬೇಕಾಗಿಲ್ಲ ಎಂದರು.

ನಮ್ಮವರೇ ತುಳಿದರು:

ಸುಷ್ಮಾ ಸ್ವರಾಜ… ಅವರ ಒತ್ತಾಸೆಗಾಗಿ ರಾಜಕೀಯಕ್ಕೆ ಬಂದೆ. ಆದರೆ ರಾಜಕೀಯ ಅಂದರೆ ಮೋಸ, ವಂಚನೆ, ಸುಳ್ಳು ಹಾಗೂ ಇನ್ನೊಬ್ಬರನ್ನು ತುಳಿದು ಮುಂದೆ ಹೋಗುವುದು ಎಂಬಂತಾಗಿದೆ. ಆ ತರದ ರಾಜಕಾರಣ ನಾನು ಮಾಡುವುದಿಲ್ಲ . ಎಲ್ಲಿ ರೆಡ್ಡಿ ಮುಖ್ಯಮಂತ್ರಿ ಆಗುತ್ತಾನೋ ಎಂಬ ಆತಂಕಕ್ಕೆ ಬಿದ್ದ ನಮ್ಮವರು ಮತ್ತು ವಿರೋಧಿಗಳು ಸೇರಿ ನನ್ನನ್ನು ತುಳಿದರು. ನಾನು ಜೈಲಿಂದ ಹೊರಬಂದ ಮೇಲೆ ನಮ್ಮವರೇ ನನ್ನ ಬಗ್ಗೆ ಕಾಳಜಿ ತೋರಲಿಲ್ಲ. ಮತ್ತೆ ಸಾರ್ವಜನಿಕ ಬದುಕಿಗೆ ನಾನು ಬರುವುದು ನಮ್ಮವರಿಗೆ ಇಷ್ಟವಾಗಲಿಲ್ಲ. ಬಳ್ಳಾರಿಯಿಂದ ಹೊರ ಹಾಕುವ ಸಂಚು ನಡೆಸುತ್ತಲೇ ಬಂದರು. ಹೋಗಿ ಬೆಂಗಳೂರು ಕೂರುತ್ತಾನೆ ಬಿಡಿ ಎಂದು ಮಾತಾಡಿಕೊಂಡರು. ಇನ್ನೂ 20 ರಿಂದ 30 ವರ್ಷ ರಾಜಕೀಯ ಮಾಡುವ ವಯಸ್ಸಿದೆ. ಜನರ ಬಳಿ ಹೋಗೋಣ ಎಂದು ನಿರ್ಧರಿಸಿ ಪಕ್ಷ ಕಟ್ಟಿದ್ದೇನೆ ಎಂದರು.

ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಮಹೇಶ್‌ ಅವರನ್ನು ಘೋಷಿಸುತ್ತಿದ್ದೇನೆ. ಅವರನ್ನು ಗೆಲ್ಲಿಸಿ. ಗುಡಿಸಲು ಮುಕ್ತ ಹಿರಿಯೂರು ಮಾಡೋಣ. ನಿಂತಿರುವ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಸಂಬಂಧಪಟ್ಟವರನ್ನು ಕರೆತಂದು ಪ್ರಯತ್ನ ಮಾಡುತ್ತೇನೆ. ಇದು ಸ್ವಾಭಿಮಾನದ ಪ್ರಶ್ನೆ. ಯಾರು ಎಷ್ಟೇ ಆಮಿಷ ತೋರಿಸಿದರು ಸಹ ತಲೆ ಬಾಗದೆ ಮತ ನೀಡಿ. ನಮಗೆ ಸುಮಾರು 50 ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ. ಜಾತಿ ಮತ ಭೇಧವಿಲ್ಲದೆ ಎಲ್ಲರೂ ಒಗ್ಗೂಡಿ ನಮ್ಮ ಅಭ್ಯರ್ಥಿ ಗೆಲ್ಲಿಸಿ ಎಂದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಹೇಮಲತಾ ಮಾತನಾಡಿ, ನಮ್ಮದು ಸಮಾನತೆಯನ್ನು ಸಾರುವ, ಅಭಿವೃದ್ಧಿ ಪಥದತ್ತ ಸಾಗುವ ಪಕ್ಷ. ಸಮಾನತೆ ಎನ್ನುವುದು ನಮ್ಮ ಮನೆಯಿಂದಲೇ ಶುರುವಾಗಬೇಕು. ಪ್ರಾದೇಶಿಕ ಪಕ್ಷ , ಪ್ರಾದೇಶಿಕ ಚಿಂತನೆ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ನಮ್ಮಿಂದ ಹೋದ ತೆರಿಗೆಯ ಹಣ ನಮಗೇ ತಲುಪದ ಸ್ಥಿತಿ ಇದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕರ್ನಾಟಕ ರಾಜ್ಯದ ಹೊಸ ಭರವಸೆಯಾಗಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಕೆಆರ್‌ಪಿ ಪಕ್ಷದ ಅಭ್ಯರ್ಥಿ ಎಚ್‌.ಮಹೇಶ್‌, ಜನಾರ್ಧನ ರೆಡ್ಡಿಯವರು ಛಲದ ರಾಜಕಾರಣಿ. ಅವರನ್ನು ಅಡಗಿಸಲು ಪ್ರಯತ್ನ ಪಟ್ಟಷ್ಟುಅವರು ಸಿಡಿದೆದ್ದು ಬಂದಿದ್ದಾರೆ. ಆಸೆ, ಆಮಿಷಗಳಿಗೆ ಅವರೆಂದೂ ಬಗ್ಗಿಲ್ಲ. ಬಡವರ, ದೀನ-ದಲಿತರ ಉದ್ದಾರಕ್ಕೆಂದು ಪಕ್ಷ ಕಟ್ಟಿದ್ದು, ಮತ ಮಾರಾಟ ತಪ್ಪಿಸಬೇಕು. 3 ಲಕ್ಷ ಕೋಟಿ ದಾಟಿ ಹೋದ ಬಜೆಚ್‌ ನ ಹಣ ಎಲ್ಲಿ ಸೋರಿ ಹೋಗುತ್ತದೆ ಎಂದೇ ಗೊತ್ತಾಗುತ್ತಿಲ್ಲ. ಈ ಬಾರಿ ಚುನಾವಣೆಯಲ್ಲಿ ಹಣದ ದರ್ಪ ನಡೆಯಬಾರದು. ವಲಸಿಗರ ಆಮಿಷಕ್ಕೆ ಬಲಿಯಾಗದೆ ಮತ ನೀಡಿ. ಪಾಶು ಪತಾಸ್ತ್ರದಷ್ಟುಶಕ್ತಿಶಾಲಿಯಾದ ನಿಮ್ಮ ಮತವನ್ನು ಮಾರಿಕೊಳ್ಳಲು ಹೋಗಬೇಡಿ ಎಂದರು.

Raichur Assembly election: ಜನಾರ್ದನರೆಡ್ಡಿ ಪ್ರಭಾವಳಿ ಮಧ್ಯೆ ಟಿಕೆಟ್‌ ಚರ್ಚೆ

ಕೆಆರ್‌ಪಿ ಪಕ್ಷದ ಸಂಸ್ಥಾಪಕ ಜನಾರ್ಧನ ರೆಡ್ಡಿಯವರಿಗೆ ಬಿಚ್ಚುಗತ್ತಿ ಭರಮಣ್ಣ ನಾಯಕ ಕತ್ತಿ ಕೊಟ್ಟು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದಮ್ಮೂರು ಶೇಖರ್‌, ರೆಡ್ಡಿ ಪತ್ನಿ ಅರುಣಾ ರೆಡ್ಡಿ, ಅಲಿ ಖಾನ್‌, ವಕೀಲ ವೀರೇಂದ್ರ, ಶಿವಕುಮಾರ್‌, ರಾಜು, ಪ್ರಭು, ರಾಮ… ಮೋಹನ್‌, ಶರತ್‌ ರೆಡ್ಡಿ, ನವೀನ್‌ ಬಾಬು, ರಮೇಶ್‌, ಮೈಲಾರಪ್ಪ, ವೆಂಕಟೇಶ್‌ ಹಾಜರಿದ್ದರು.