ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದ ಬಗ್ಗೆ ಏನನ್ನೂ ಹೇಳಲು ನಾನು ಬಯಸುವುದಿಲ್ಲ ಎಂದು ಹಿರಿಯ ಮುಖಂಡ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಮೇ.21): ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದ ಬಗ್ಗೆ ಏನನ್ನೂ ಹೇಳಲು ನಾನು ಬಯಸುವುದಿಲ್ಲ ಎಂದು ಹಿರಿಯ ಮುಖಂಡ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಅವರಿಗೆ ಮೊದಲ ಹಂತದಲ್ಲಿ ಮಂತ್ರಿ ಸ್ಥಾನ ಸಿಗದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ರಾಜ್ಯವೇ ನನಗೆ ಮಂತ್ರಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರೂ ಸಿಕ್ಕಿಲ್ಲ. ಅದಕ್ಕೆ ನಾನೇನು ಹೇಳು ಆಗುವುದಿಲ್ಲ. ಯಾಕೆ ಮಂತ್ರಿ ಮಾಡಿಲ್ಲವೆಂದು ಅವರನ್ನೇ ಕೇಳಬೇಕೇ ಹೊರತು ನನಗೇನು ಗೊತ್ತಿಲ್ಲ ಎಂದರು. ಸಂಪುಟದಲ್ಲಿ ಇರಲಿ, ಇಲ್ಲದೇ ಇರಲಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುತ್ತಿರುತ್ತೇನೆ.
ನನಗೆ ಅಧಿಕಾರ ಇರಲಿ, ಇಲ್ಲದೆ ಇರಲಿ. ನನ್ನ ಪರವಾಗಿ ಜನರು ಇದ್ದಾರೆ, ಮನೆ ಹತ್ತಿರ ಬರುತ್ತಾರೆ. ಎಲ್ಲವೂ ಮುಗಿಯಲಿ, ಆಮೇಲೆ ಮಾತನಾಡುತ್ತೇನೆ. ನಿರೀಕ್ಷೆ ಬಹಳಷ್ಟುಇರುತ್ತದೆ. ಆದರೆ, ಮಿತಿ ಕಡಿಮೆ ಇರುತ್ತದೆ. ನಿರೀಕ್ಷೆ ಇಟ್ಟುಕೊಂಡು ಅಧಿಕಾರಕ್ಕಾಗಿ ಕಾಯುತ್ತಾ ಕೂರುವ ವ್ಯಕ್ತಿ ನಾನಲ್ಲ. ಕಾದು ನೋಡೋಣ. ಈ ಕುರಿತು ನಾನು ಹೈಕಮಾಂಡ್ ಜೊತೆ ಮಾತನಾಡಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದು ಬಹಳ ಸಂತೋಷ. ಅವರು ಪ್ರಾಮಾಣಿಕ ಮತ್ತು ನಂಬಲರ್ಹ ನಾಯಕ. ಪ್ರಾಮಾಣಿಕತೆಗೆ, ಸಮರ್ಥ ಆಡಳಿತಕ್ಕೆ ಹೆಸರಾದ ಸಿದ್ದರಾಮಯ್ಯ ಅಂಥವರ ಕೈಯಲ್ಲಿ ಅಧಿಕಾರ ಇದ್ದರೆ ರಾಜ್ಯ ಸುಭಿಕ್ಷವಾಗಿರುತ್ತದೆ ಎಂದರು.
5ನೇ ಬಾರಿ ಶಾಸಕತ್ವ ಬಡವರ ಪರ ಹೋರಾಟ ಫಲ: ಆರಗ ಜ್ಞಾನೇಂದ್ರ
‘ಕೆಪಿಸಿಸಿ ಅಧ್ಯಕ್ಷರೇ ಸಿಎಂ’ ಎಂಬ ನಿಯಮವಿಲ್ಲ: ‘ಕೆಪಿಸಿಸಿ ಅಧ್ಯಕ್ಷರೇ ಮುಖ್ಯಮಂತ್ರಿ ಆಗಬೇಕು ಎಂಬ ನಿಯಮವೇನೂ ಇಲ್ಲ. ಹಲವು ಸಂದರ್ಭಗಳಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿದ್ದವರೂ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿಯಾಗಿದ್ದಾರೆ’ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿರುವವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದು ಸಂಪ್ರದಾಯ ಎಂದು ಡಿ.ಕೆ.ಶಿವಕುಮಾರ್ ಪರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಪಿಸಿಸಿ ಅಧ್ಯಕ್ಷರಿಗೇ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ನಿಯಮವಿಲ್ಲ. ಶಾಸಕಾಂಗ ಪಕ್ಷದ ನಾಯಕರಾಗಿದ್ದವರೂ ಮುಖ್ಯಮಂತ್ರಿಯಾಗಿದ್ದಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಇಬ್ಬರನ್ನೂ ಬಿಟ್ಟು ಬೇರೆಯವರನ್ನು ಮುಖ್ಯಮಂತ್ರಿ ಮಾಡಿರುವ ಉದಾಹರಣೆಯೂ ಇದೆ. ಒಟ್ಟಾರೆ ಯಾರಿಗೆ ಮುಖ್ಯಮಂತ್ರಿ ನೀಡಬೇಕು ಎಂಬುದು ಹೈಕಮಾಂಡ್ ನಿರ್ಧಾರ’ ಎಂದು ಹೇಳಿದರು.
ಶಿವಮೊಗ್ಗ ಶಾಸಕರ ‘ಕೈ’ ಹಿಡಿಯಲಿಲ್ಲ ಸಿದ್ದರಾಮಯ್ಯ ಸರ್ಕಾರ
ಮತಗಳ ಕ್ರೋಡೀಕರಣದಿಂದ ಲಾಭ: ‘ಈ ಬಾರಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳೆಲ್ಲವೂ ಕ್ರೂಡೀಕರಣ ಆಗಿ ನಮಗೆ ಲಾಭವಾಗಿದೆ. ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ಮತಗಳು ಕಾಂಗ್ರೆಸ್‌ಗೆ ಬಂದಿವೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ. ಕೊಟ್ಟಭರವಸೆಗಳನ್ನು ಎಲ್ಲವನ್ನೂ ಈಡೇರಿಸುತ್ತೇವೆ. ಕಾಂಗ್ರೆಸ್ ಯಾವತ್ತೂ ಕೊಟ್ಟಮಾತು ತಪ್ಪಿಲ್ಲ’ ಎಂದರು. ಡಬಲ್ ಎಂಜಿನ್ ಆಡಳಿತ ವೈಖರಿಗೆ ಜನರು ಬೇಸತ್ತಿದ್ದರು. ಅರವತ್ತು ವರ್ಷಗಳಲ್ಲಿ ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನೂ ಹಾಳು ಮಾಡಿದ್ದಾರೆ. ಹೀಗಾಗಿ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ. ಈ ಬಾರಿ ಜನರ ವಿಶ್ವಾಸವನ್ನು ಕಾಂಗ್ರೆಸ್ ಖಂಡಿತಾ ಉಳಿಸಿಕೊಳ್ಳುತ್ತದೆ ಎಂದು ಮಹದೇವಪ್ಪ ಹೇಳಿದರು.
